ವೈರ್‌ಲೆಸ್‌ ಮೊಬೈಲ್ ಚಾರ್ಜರ್

7

ವೈರ್‌ಲೆಸ್‌ ಮೊಬೈಲ್ ಚಾರ್ಜರ್

Published:
Updated:
ವೈರ್‌ಲೆಸ್‌ ಮೊಬೈಲ್ ಚಾರ್ಜರ್

ಈಗಾಗಲೇ ವೈರ್‌ಲೆಸ್‌ ಮೊಬೈಲ್‌ ಚಾರ್ಜರ್‌ ಬಳಕೆಗೆ ಬಂದಾಗಿವೆ. ಫ್ರಾನ್ಸ್‌ನ ಕಂಪನಿಯೊಂದು ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್‌ ಮಾಡುವಂತಹ ನಿಸ್ತಂತು (ವೈರ್‌ಲೆಸ್‌) ಮೊಬೈಲ್ ಚಾರ್ಜರ್ ಅಭಿವೃದ್ಧಿಪಡಿಸಿದೆ. ಇನ್ನು ಮುಂದೆ ಮೊಬೈಲ್ ಬಳಕೆದಾರರು ವಿದ್ಯುತ್ ತಂತಿ ಹಂಗಿಲ್ಲದೆ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಮೆಟ್ಯಾಲಿಕ್ ಸ್ಟಿಕ್ಕರ್ ತಂತ್ರಜ್ಞಾನದಲ್ಲಿ ಈ ಚಾರ್ಜರ್ ವಿನ್ಯಾಸ ಮಾಡಲಾಗಿದೆ. ಈ ನೂತನ ಚಾರ್ಜರ್ ಎರಡು ಸಾಧನಗಳನ್ನು ಒಳಗೊಂಡಿರುತ್ತದೆ. ಒಂದು ಚಾರ್ಜರ್ ಪ್ಯಾಡ್, ಮತ್ತೊಂದು ಮೆಟ್ಯಾಲಿಕ್ ಸ್ಟಿಕ್ಕರ್. ಇದರಲ್ಲಿ ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು!

ಚಾರ್ಜರ್ ಪ್ಯಾಡ್ ಒಂದು ತಟ್ಟೆಯ ಆಕಾರದಲ್ಲಿ ಇರುತ್ತದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುತ್ತದೆ. ಮೆಟ್ಯಾಲಿಕ್ ಸ್ಟಿಕ್ಕರ್ ಅನ್ನು ಮೊಬೈಲ್ ಫೋನ್‌ನ ಹಿಂಬದಿಗೆ ಅಂಟಿಸಿ ಸ್ಟಿಕ್ಕರ್ ಮತ್ತು ಮೊಬೈಲ್ ಬ್ಯಾಟರಿಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಮೆಟ್ಯಾಲಿಕ್ ಸ್ಟಿಕ್ಕರ್ ಅಂಟಿಸಿರುವ ಮೊಬೈಲ್‌ಗಳನ್ನು ಚಾರ್ಜರ್ ಪ್ಯಾಡ್ ಮೇಲೆ ಇಟ್ಟರೆ ಬ್ಯಾಟರಿ ಚಾರ್ಜ್ ಆಗಲು ಆರಂಭಿಸುತ್ತದೆ. ಈ ಸ್ಟಿಕ್ಕರ್ ಅನ್ನು ಎಲೆಕ್ಟ್ರೋ ಮ್ಯಾಗ್ನೆಟಿಕ್ ತಂತ್ರಜ್ಞಾನ ಅಳವಡಿಸಿ ರೂಪಿಸಲಾಗಿದೆ. ಸರಳವಾಗಿ ಹೇಳುವುದಾದರೆ ವಿದ್ಯುತ್ ಇಂಡಕ್ಷನ್ ಸ್ಟವ್ ಮಾದರಿಯಲ್ಲಿ ಈ ಚಾರ್ಜರ್ ಕೆಲಸ ಮಾಡುತ್ತದೆ.

ಮನೆಗಳಲ್ಲಿ ಐದಾರು ಮೊಬೈಲ್ ಇದ್ದು, ಒಂದೋ-ಎರಡೋ ಚಾರ್ಜರ್ ಇದ್ದವರ ಪರದಾಟ ಮತ್ತು ಚಾರ್ಜಿಂಗ್ ತಾಕಲಾಟಕ್ಕೆ ಈ ನಿಸ್ತಂತು ಚಾರ್ಜರ್ ಇತಿಶ್ರೀ ಹಾಡಲಿದೆ.  ಕ್ರೌಡ್ ಫಂಡಿಂಗ್ ಮೂಲಕ ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಇದನ್ನು ತಯಾರಿಸಿರುವ ಕಂಪನಿ ತಿಳಿಸಿದೆ.

ಮನೆಯಲ್ಲಿ ಮೊಬೈಲ್ ಫೋನ್‌ಗಳನ್ನು ಮೇಜು, ಟೀಪಾಯಿ ಅಥವಾ ಊಟದ ಟೇಬಲ್ಲಿನ ಮೇಲೆ ಇಡುತ್ತೇವೆ. ಇದೀಗ ಚಾರ್ಜರ್ ಪ್ಯಾಡ್ ಮೇಲೆ ಮೊಬೈಲ್ ಎಸೆದರೆ ಸಾಕು ಅದು ಸ್ವಯಂ ಚಾಲಿತವಾಗಿ ಚಾರ್ಜ್ ಆಗುತ್ತಲೇ ಇರುತ್ತದೆ. ಈ ವರ್ಷದ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಈ ನೂತನ ಚಾರ್ಜರ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ.

ಮುಖ ನೋಡಿ ಮದುವೆಯಾಗೋದು!

ಕಾನೂನು ಕಟ್ಟಲೆಗಳನ್ನು ಪಾರದರ್ಶಕವಾಗಿ ಅನುಷ್ಠಾನಕ್ಕೆ ತರುವ ದೇಶ ಎಂದರೆ ಅದು ಚೀನಾ ಮಾತ್ರ! ಅಲ್ಲಿ ನಿತ್ಯವೂ ಒಂದಿಲ್ಲೊಂದು ಹೊಸ ಹೊಸ ಕಾನೂನುಗಳು ಜಾರಿಯಾಗುತ್ತಲೇ ಇರುತ್ತವೆ. ಇದೀಗ ಅಲ್ಲಿ ಮದುವೆಯಾಗುವುದಕ್ಕಾಗಿ ಹೊಸ ಕಾನೂನು ತರಲಾಗಿದೆ. ಅದುವೇ ಮುಖ ಚಹರೆ ಪತ್ತೆ ಹಚ್ಚುವ ತಂತ್ರಜ್ಞಾನ!

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ವಿವಾಹ ನೋಂದಣಿ ಕಚೇರಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿರುತ್ತಾರೆ! ಕಾನೂನಿನ ಪ್ರಕಾರ ಒಂದು ವಿವಾಹವಾಗುವ ಜೋಡಿಯನ್ನು ನೋಂದಣಿ ಮಾಡಿಸಲು 20 ರಿಂದ 30 ನಿಮಿಷಗಳು ಬೇಕಂತೆ. ನೂರಾರು ಪತ್ರಗಳಿಗೆ ಸಹಿ ಹಾಕುವುದು, ಸಾಕ್ಷ್ಯಗಳನ್ನು ನೀಡುವುದು, ದಾಖಲೆಗಳ ಪರೀಶಿಲನೆಗಾಗಿ ಇಷ್ಟು ಕಾಲಾವಕಾಶ ಬೇಕಿರುವುದರಿಂದ ನೋಂದಣಿ ಕಚೇರಿಯಲ್ಲಿ ವಿವಾಹವಾಗುವ ಜೋಡಿಗಳು ಸರತಿ ಸಾಲಿನಲ್ಲಿ ನಿಂತಿರುತ್ತವೆ.  ಸಮಯದ ಉಳಿತಾಯಕ್ಕೆ ಮತ್ತು ಸರತಿ ಸಾಲನ್ನು ತಪ್ಪಿಸಲು ಚೀನಾ ಸರ್ಕಾರ ಮುಖ ಚಹರೆ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಿದೆ. ಫೆಬ್ರುವರಿ ತಿಂಗಳಿಂದ ಚೀನಾದಾದ್ಯಂತ ಈ ಕಾನೂನು ಜಾರಿಗೆಯಾಗಲಿದೆ.

ಈ ಹೊಸ ತಂತ್ರಜ್ಞಾನದ ಪ್ರಕಾರ, ವಿವಾಹವಾಗುವ ಜೋಡಿ ನೋಂದಣಿ ಕಚೇರಿಗೆ ತೆರಳಿದ ಕೂಡಲೇ ದಾಖಲೆಗಳನ್ನು ಸಲ್ಲಿಸಬೇಕು ನಂತರ ಅಧಿಕಾರಿಗಳು ಯುವಕ ಮತ್ತು ಯುವತಿಯ ಫೋಟೊ ಕ್ಲಿಕ್ಕಿಸುತ್ತಾರೆ. ಕೆಲವೇ ನಿಮಿಷಗಳಲ್ಲಿ ಡಾಟಾ ಬೇಸ್ ತಂತ್ರಜ್ಞಾನದಲ್ಲಿ ಅವರ ಪೂರ್ವಾಪರ ಮಾಹಿತಿ ಪಡೆಯುತ್ತಾರೆ. ಈ ರೀತಿ ಮಾಡುವುದರಿಂದ ಮದುವೆಯ ನೋಂದಣಿ ಕಾರ್ಯವನ್ನು ಎರಡು ಮೂರು ಸೆಕೆಂಡ್‌ಗಳಲ್ಲಿ ಮುಗಿಸಬಹುದಾಗಿದೆ. ಇನ್ನು ಅವಳಿ ಜವಳಿಯವರು ಹಾಗೂ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವವರಿಗೆ ಬಯೊಮೆಟ್ರಿಕ್ ವಿಧಾನದ ಮೂಲಕ ವಿವಾಹ ನೋಂದಣಿ ಮಾಡಿಕೊಡಲಾಗುವುದು. ಈ ನೂತನ ತಂತ್ರಜ್ಞಾನದಿಂದ ವಿವಾಹ ವಂಚನೆ ಹಾಗೂ ಅಪರಾಧಗಳನ್ನು ತಡೆಯಲು ಸಾಧ್ಯವಾಗಲಿದೆ.

ಗೊರಕೆಗೆ ಹೇಳಿ ಗುಡ್‌ಬೈ

ಮನೆಯಲ್ಲಿ ಒಬ್ಬರು ಗೊರಕೆ ಹೊಡೆಯುವವರು ಇದ್ದರಂತೂ ಮುಗಿದೇ ಹೊಯ್ತು! ಇಡೀ ರಾತ್ರಿ ಪೂರ್ತಿ ಜಾಗರಣೆ! ಅಮೆರಿಕದ ಕಂಪನಿಯೊಂದು ಗೊರಕೆ ತಡೆಯುವ ಹಾಸಿಗೆ ವಿನ್ಯಾಸ ಮಾಡಿದೆ. ಈ ಹಾಸಿಗೆಗೆ ‘ಸ್ಮಾರ್ಟ್ ಬೆಡ್’ ಎಂದು ಹೆಸರಿಡಲಾಗಿದೆ.  ಈ ಹಾಸಿಗೆಯ ಮೇಲೆ ಮಲಗಿದರೆ ಸಾಕು ಗೊರಕೆ ಹೊಡೆಯುವ ಮಾತೇ ಇಲ್ಲ ಎನ್ನುತ್ತಾರೆ ವಿನ್ಯಾಸಕರು. ಹಾಸಿಗೆಯಲ್ಲಿ ಎರಡು ಗಾಳಿಯ ರಬ್ಬರ್ ಚೀಲಗಳನ್ನು ಅಳವಡಿಸಲಾಗಿರುತ್ತದೆ. ಗೊರಕೆಯ ಸದ್ದು ಕೇಳಿದ ಕೂಡಲೇ ಗಾಳಿ ಚಲನೆಯನ್ನು ಆರಂಭಿಸಿ ಗೊರಕೆ ಹೊಡೆಯುವವರು ಮಲಗಿರುವ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಅರ್ಥಾತ್‌ ಮಗ್ಗಲು ಬದಲಾಯಿಸುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಅಂಗಾತ ಮಲಗಿಕೊಂಡು ಗೊರಕೆ ಹೊಡೆಯುತ್ತಿರುತ್ತಾನೆ ಎಂದಿಟ್ಟುಕೊಳ್ಳಿ, ಆಗ ರಬ್ಬರ್ ಬಾಕ್ಸ್‌ನಲ್ಲಿರುವ ಗಾಳಿ ಚಲನೆಗೊಂಡು ಆ ವ್ಯಕ್ತಿಯ ಮಗ್ಗುಲನ್ನು ಬದಲಾಯಿಸುತ್ತದೆ. ಈ ನೂತನ ತಂತ್ರಜ್ಞಾನವನ್ನು ಈ ಸ್ಮಾರ್ಟ್ ಬೆಡ್‌ನಲ್ಲಿ ಅಳವಡಿಸಲಾಗಿದೆ.

ಈ ಹಾಸಿಗೆ ಇಡೀ ರಾತ್ರಿ ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತದೆ. ಗೊರಕೆ ಸದ್ದು ಕೇಳಿದ ಕೂಡಲೇ ಹಾಸಿಗೆ ಮೇಲೆ ಮಲಗಿರುವ ವ್ಯಕ್ತಿಯ ಮಗ್ಗುಲನ್ನು ಬದಲಾಯಿಸುತ್ತದೆ. ಈ ಕಾರ್ಯಚರಣೆ ಮಲಗಿರುವ ವ್ಯಕ್ತಿಗೆ ಗೊತ್ತಾಗದಿರುವಂತೆ ನಡೆಯುವುದು ವಿಶೇಷ. ಮುಂಜಾನೆ ಬೇಗ ಏಳುವುದಕ್ಕೂ ಈ ಹಾಸಿಗೆ ಅಲಾರಂ ಕೂಗುತ್ತದೆ. ಶೀಘ್ರದಲ್ಲೇ ಇಂತಹ ಹಾಸಿಗೆಗಳು ಮಾರುಕಟ್ಟೆ ಪ್ರವೇಶ ಮಾಡಲಿವೆ. ಗೊರಕೆಯಿಂದ ನಿದ್ರಾಭಂಗಕ್ಕೆ ಒಳಗಾಗುತ್ತಿರುವವರು ಇನ್ನು ಮುಂದೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry