ಯಶಸ್ಸಿನ ಬೆನ್ನೇರಿ...

7

ಯಶಸ್ಸಿನ ಬೆನ್ನೇರಿ...

Published:
Updated:

ನಾವು ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಗಳಿಸಬಾರದು ಎಂಬ ಸ್ವಾರ್ಥಬುದ್ಧಿಯಿಂದ ಆ ಕೆಲಸದಲ್ಲಿನ ನಕಾರಾತ್ಮಕ ವಿಷಯಗಳಿಗೇ ಹೆಚ್ಚು ಒತ್ತುಕೊಟ್ಟು ಜನರು ಆಡಿಕೊಳ್ಳುತ್ತಿರುತ್ತಾರೆ. ಈ ರೀತಿ ಮಾಡಿದಾಗ ಹಿಂಜರಿಕೆಯ ಸ್ವಭಾವವುಳ್ಳವರು, ತಮ್ಮಲ್ಲಿ ಸಾಧಿಸುವ ಸಾಮರ್ಥ್ಯ ಇದ್ದರೂ ಇನ್ನೊಬ್ಬರ ಮಾತಿಗೆ ಹೆದರಿ, ಸಿಕ್ಕ ಅವಕಾಶಗಳನ್ನು ಕಳೆದುಕೊಂಡು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ‘ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಮುನ್ನುಗುವ ಧೈರ್ಯವಂತರು ಮಾತ್ರವೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಯಶಸ್ಸನ್ನು ಕಾಣುತ್ತಾರೆ.

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ ಗಣಿಸಿದೆ, ಕೇವಲ ಸಾಧನೆಯತ್ತ ಗಮನ ಕೊಟ್ಟಿರುವುದೇ ಎದ್ದು ಕಾಣುತ್ತದೆ. ಬಲ್ಬ್ ಕಂಡುಹಿಡಿಯುವ ಮೂಲಕ ಜಗತ್ತಿಗೆ ಬೆಳಕನ್ನು ನೀಡಿದ ಎಡಿಸನ್  ಹಲವು ಬಾರಿ ವಿಫಲರಾದ ಮೇಲೆಯಷ್ಟೆ ಯಶಸ್ಸನ್ನು ಕಂಡವರು. ‘ವಿಫಲತೆಯೇ ಯಶಸ್ಸಿನ ಮೆಟ್ಟಿಲು’ ಎಂಬಂತೆ ಒಳ್ಳೆಯ ಕೆಲಸವನ್ನು ಮಾಡುವಾಗ ಎದುರಾಗುವ ನೋವು, ಹತಾಶೆ, ಅವಮಾನ, ತೆಗಳಿಕೆ – ಇವುಗಳನ್ನೇ ಮೆಟ್ಟಿಲು

ಗಳನ್ನಾಗಿಸಿಕೊಂಡರೆ ಗೆಲುವಿನ ಫಲ ಸಿಗುವುದು ನಿಶ್ಚಿತ.

ಯಶಸ್ಸಿನ ಪಯಣ ಸರಿಯಾಗಿ ದಡ ಸೇರಬೇಕಾದರೆ ಸಾಧಿಸುವ ಛಲ ಮತ್ತು ಧೈರ್ಯ ಬೇಕು. ಜೊತೆಗೆ ಕೆಲವು ಯೋಜನೆಗಳನ್ನು ಕೂಡ ರೂಪಿಸಿ ಕೊಳ್ಳಬೇಕು. ಯಶಸ್ಸಿನ ಮೆಟ್ಟಿಲೇರಲು ಸಹಾಯವಾಗುವ ಸಲಹೆಗಳು ಕೆಲವು ಇಲ್ಲಿವೆ.

* ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಆ ವಿಷಯದಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಅವನ್ನು ಚೆನ್ನಾಗಿ ಅಧ್ಯಯನ ಮಾಡಿ, ಪರಿಣತಿಯನ್ನು ಸಂಪಾದಿಸಬೇಕು. ಈಗಾಗಲೇ ಯಶಸ್ಸು ಗಳಿಸಿದ ಜನರ ಅನುಭವ ನಮಗೆ ಮಾರ್ಗದರ್ಶಕವಾಗಬಹುದು.

* ಇದರ ಜೊತೆಗೆ ಅದೇ ಉದ್ಯೋಗದಲ್ಲಿ ವಿಫಲರಾಗಿರುವವರನ್ನು ಭೇಟಿ ಮಾಡಿ ಅವರ ವೈಫಲ್ಯಕ್ಕೆ ಕಾರಣ ವನ್ನು ಕಂಡುಕೊಂಡು, ಅಂಥವು ನಮಗೆ ಎದುರಾಗದಂತೆ ಎಚ್ಚರ ವಹಿಸಬೇಕು.

*ಮನೆಯವರ ಸಹಕಾರವಿಲ್ಲದೇ ಯಾವ ಕೆಲಸವನ್ನು ಮಾಡುವುದು ಅಸಾಧ್ಯ. ಆದ್ದರಿಂದ ಮನೆಯವರ ಒಪ್ಪಿಗೆ ಮತ್ತು ಸಲಹೆಗಳನ್ನು ಪಡೆದು ನಮ್ಮ ಗುರಿಯತ್ತ ನಡೆಯುವುದು ಮುಖ್ಯ.

*ಯಾವುದೇ ಕೆಲಸಗಳಲ್ಲಿ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಸವಾಲುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು. ಆಗ ಸವಾಲಿನಲ್ಲೇ ಅದರ ಪರಿಹಾರದ ಗುಟ್ಟು ಕೂಡ ಅಡಗಿರುವ ಸಂಗತಿ ನಮಗೆ ಹೊಳೆಯುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry