‘ಶ್ರದ್ಧೆಯೇ ಮದ್ದು’

7

‘ಶ್ರದ್ಧೆಯೇ ಮದ್ದು’

Published:
Updated:
‘ಶ್ರದ್ಧೆಯೇ ಮದ್ದು’

ನಾನು ವಕೀಲಿವೃತ್ತಿ ಆರಂಭಿಸಿ 46 ವರ್ಷಗಳಾಯ್ತು. ಯಾವುದೇ ವೃತ್ತಿಯಲ್ಲಿ ಯಾವುದೇ ವ್ಯಕ್ತಿಯಾದರೂ ಸಂತೋಷವಾಗಿರುವಾಗ ಹಗುರವಾಗಿರುತ್ತಾನೆ. ಕೆಲಸದ ತೀವ್ರತೆಯಿಂದ ದೂರ ಇರುತ್ತಾನೆ. ಆದರೆ ಒತ್ತಡ ಇದ್ದಾಗ ವ್ಯಕ್ತಿ ಗಂಭೀರನಾಗುತ್ತಾನೆ. ಭಿನ್ನವಾಗಿ ಕಾಣುತ್ತಾನೆ.

ನಮ್ಮ ವೃತ್ತಿಯಲ್ಲಿಯ ಒತ್ತಡ ಅವಶ್ಯಕವಾದ ದುರದೃಷ್ಟ! ವಕೀಲಿವೃತ್ತಿಗೆ ಪ್ರವೇಶಿಸುವ ಯಾವುದೇ ವಕೀಲ ಆರಂಭದಲ್ಲಿ ಒತ್ತಡದಲ್ಲಿರುತ್ತಾನೆ. ವಕೀಲಿವೃತ್ತಿ ಎಂದರೆ ತಮ್ಮ ಪಾಡಿಗೆ ತಾವು ವ್ಯಕ್ತಿಗತವಾಗಿ ಮಾಡಿ ಹೋಗುವ ಕೆಲಸವಲ್ಲ. ನ್ಯಾಯಾಲಯದಲ್ಲಿ ನಾವು ಕೆಲಸದಲ್ಲಿ ತೊಡಗಿರುವ ಸಂದರ್ಭದಲ್ಲಿ ನಮ್ಮ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುವ, ಅದರಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಾಯುತ್ತಿರುವ ಪ್ರತಿವಾದಿ ಇರುತ್ತಾನೆ. ತಪ್ಪುಗಳನ್ನು ಮಾಡದೇ ಕೆಲಸ ಮಾಡಬೇಕಾಗುತ್ತದೆ. ನ್ಯಾಯಮೂರ್ತಿಗಳು ಸಹ ನನ್ನ ಎಲ್ಲ ಕ್ರಿಯೆಗಳನ್ನೂ ಗಮನಿಸುತ್ತಿರುತ್ತಾರೆ. ಎದುರುಬಣದ ವಕೀಲರು, ನ್ಯಾಯಮೂರ್ತಿಗಳು ಸಹ ಆಕ್ಷೇಪಿಸಬಹುದು. ಇಂತಹ ಪರಿಸ್ಥಿತಿಗೆ ಸಿಲುಕಿಕೊಳ್ಳದೆ ನಾನು ಕೆಲಸ ಮಾಡಬೇಕು. ಪ್ರತಿಕ್ಷಣವೂ ಒತ್ತಡ ಇದ್ದೇ ಇರುತ್ತದೆ. ಪ್ರತಿದಿನ, ಪ್ರತಿಕ್ಷಣ ಜಾಗರೂಕತೆಯಿಂದ ಇರಬೇಕು.

ಹೊಸದಾಗಿ ವೃತ್ತಿ ಆರಂಭಿಸಿದಾಗ ಜೊತೆಯಲ್ಲಿ ಹಿರಿಯ ಮಾರ್ಗದರ್ಶಿ ವಕೀಲರು ಇದ್ದರೂ, ನಮ್ಮೊಳಗೆ ಸಾಕಷ್ಟು ಅನುಭವದ ಬೆಂಬಲ ಇರುವುದಿಲ್ಲ. ನನಗೂ ಹಾಗೆಯೆ ಆಗಿತ್ತು. ಎಲ್ಲವೂ ಹೊಸದಾಗಿ ಕಾಣುತ್ತಿತ್ತು. ಪರಿಸ್ಥಿತಿಗಳನ್ನು ಎದುರಿಸಲು ಹೆಚ್ಚು ಹೆಚ್ಚು ತಯಾರಿ ಮಾಡಿಕೊಳ್ಳಬೇಕಾಗುತ್ತಿತ್ತು. ಹೆಚ್ಚು ಕ್ರಿಯಾಶೀಲನಾಗಿ ಇರುಬೇಕಾಗುತ್ತಿತ್ತು. ಎದುರಾಗುವ ಒತ್ತಡ ಹಿಮ್ಮೆಟ್ಟಿಸಲು, ಒತ್ತಡ ಸಂದರ್ಭಗಳನ್ನು ತಹಬದಿಗೆ ತಂದುಕೊಳ್ಳಲು ಅವುಗಳನ್ನು ಮೀರಿ ನಿಲ್ಲಲು ಸಾಕಷ್ಟು ಓದಬೇಕಿತ್ತು. ಎಲ್ಲವನ್ನೂ ಗಮನಿಸಬೇಕಿತ್ತು, ಆಲೋಚಿಸಬೇಕಿತ್ತು. ಒಂದು ರೀತಿ ಧ್ಯಾನಸ್ಥ ಸ್ಥಿತಿ ಅವಶ್ಯಕ.

ನಮ್ಮ ವೃತ್ತಿಯಲ್ಲಿ ಅಚಾನಕ್ಕಾಗಿ ನಮಗೆ ಎದುರಾಗುವ ಸಂದರ್ಭಗಳೇ ಹೆಚ್ಚು. ನಮಗೆ ಎದುರಾಗುವ ಸಾಕ್ಷಿಗಳು ಒಂದೇ ತರಹದಲ್ಲಿ ಇರುವುದಿಲ್ಲ. ಪ್ರತ್ಯಕ್ಷ ಸಾಕ್ಷಿ, ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು, ಬೆರಳಚ್ಚು ತಜ್ಞರು – ಹೀಗೆ ಸಾಕಷ್ಟು ರೀತಿಯವರು ಇರುತ್ತಾರೆ. ಅವರನ್ನೆಲ್ಲಾ ಪಾಟೀಸವಾಲು ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ತಜ್ಞತೆ ಹೊಂದಿರುವ ಸಾಕ್ಷಿಗಳನ್ನು ಪಾಟೀಸವಾಲು ಮಾಡಬೇಕಾದರೆ ಅವತ್ತಿನ ಮಟ್ಟಿಗೆ ಆ ಪ್ರಕರಣದಲ್ಲಿ ಅವರನ್ನು ಸರಿಗಟ್ಟುವಂತಹ ತಜ್ಞರಾಗಿರಬೇಕು. ಇಲ್ಲದಿದ್ದರೆ ಪಾಟೀಸವಾಲು ಮಾಡಲಾಗುವುದಿಲ್ಲ. ವೈದ್ಯರನ್ನು ಪಾಟೀಸವಾಲು ಮಾಡಲು ವೈದ್ಯಕೀಯ ಜ್ಞಾನದ ಪರಿಚಯ ಇರಲೇಬೇಕು. ಪ್ರಾರಂಭದಲ್ಲಿ ಇವೆಲ್ಲಾ ತುಂಬಾ ಗಂಭೀರ ಸನ್ನಿವೇಶಗಳಾಗಿ ಕಾಣುತ್ತವೆ. ಆಗೆಲ್ಲಾ ಒತ್ತಡ ಎದುರಾಗುತ್ತದೆ.

ಪ್ರಾರಂಭದ ವರ್ಷಗಳಲ್ಲಿ ಸವಾಲೊಡ್ಡುವ, ದೊಡ್ಡ ಪ್ರಕರಣಗಳು ಬರುವುದಿಲ್ಲ. ಎಷ್ಟೋ ಬಾರಿ ಅನಿವಾರ್ಯವಾಗಿ ಸಮಾಜಸೇವೆ ಎಂದು ಕಡಿಮೆ ಶುಲ್ಕದ ಅಥವಾ ಶುಲ್ಕವೇ ಇಲ್ಲದ ಪ್ರಕರಣಗಳನ್ನು ನಡೆಸಬೇಕಾಗುತ್ತದೆ. ಬಂದ ಪ್ರಕರಣಗಳನ್ನೆಲ್ಲಾ ತೆಗೆದುಕೊಳ್ಳುತ್ತೇವೆ. ಹಂತಹಂತವಾಗಿ ವೃತ್ತಿಯಲ್ಲಿ ಕಲಿಯುವುದಷ್ಟೇ ಮುಖ್ಯವಾಗಿರುತ್ತದೆ. ಈ ಸಂದರ್ಭದಲ್ಲಿಯೂ ಒತ್ತಡ ಉಂಟಾಗುತ್ತದೆ.

ಹತ್ತು ಪ್ರಕರಣ ಗೆದ್ದರೂ ಸಾಧನೆಯನ್ನು ಗುರುತಿಸುವವರು ಇರುವುದಿಲ್ಲ. ಒಂದೆರಡು ಪ್ರಕರಣ ಸೋತರೂ ಗುಲ್ಲಾಗುತ್ತದೆ. ಅದು ನಮ್ಮ ವೃತ್ತಿಗೆ ಹಿನ್ನಡೆ ಉಂಟುಮಾಡುತ್ತದೆ. ಆ ರೀತಿ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಯೋಚಿಸುತ್ತೇವೆ. ಆ ಯೋಚನೆಯೇ ನಮಗೆ ಒತ್ತಡ ಸೃಷ್ಟಿಸುತ್ತದೆ. ಆರಂಭಿಕ ಹಂತದಲ್ಲಿ ಒತ್ತಡ ಒಂದು ರೀತಿ ಇದ್ದರೆ, ವೃತ್ತಿಯಲ್ಲಿ ಪಳಗಿದ ನಂತರ ಮತ್ತೊಂದು ರೀತಿಯಲ್ಲಿ ಒತ್ತಡ ಕಾಣಿಸಿಕೊಳ್ಳುತ್ತದೆ.

ವೃತ್ತಿಯಲ್ಲಿ ಬೆಳೆಯುತ್ತಾ ಹೋದಂತೆ ಸವಾಲುಗಳನ್ನೊಳಗೊಂಡ ಪ್ರಕರಣಗಳು ಬರುತ್ತವೆ. ದೊಡ್ಡ ವ್ಯಕ್ತಿಗಳು ಸಿಕ್ಕಿಹಾಕಿಕೊಂಡ ಪ್ರಕರಣಗಳಲ್ಲಿ, ಹೆಸರು ಪಡೆದ, ನಿಸ್ಸೀಮ ವಕೀಲರು ತಮ್ಮ ಪ್ರಕರಣ ನಡೆಸಬೇಕು ಎನ್ನುವ ಹಂಬಲ ಇರುತ್ತದೆ. ಪ್ರಕರಣ ದೊಡ್ಡಮಟ್ಟದಲ್ಲಿ ಸುದ್ದಿ ಆಗಿದ್ದರೆ ಆರೋಪಿಗೆ ಮತ್ತು ಆರೋಪಿ ಪರ ವಕೀಲರಿಗೆ ಅದು ಒಳ್ಳೆಯದಲ್ಲ. ಜಗತ್ತಿನ ಕಣ್ಣು ಪ್ರಕರಣದ ನಡಾವಳಿ, ವಿದ್ಯಮಾನಗಳ ಮೇಲೆ ಇರುತ್ತದೆ. ಅದನ್ನು ಅಲಕ್ಷ್ಯ ಮಾಡಲು ಸಾಧ್ಯವಿಲ್ಲ. ಆಗ ಇದು ಒತ್ತಡವಾಗಿ ಪರಿವರ್ತನೆಯಾಗುತ್ತದೆ. ವಕೀಲವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡವರಿಗೆ ಒತ್ತಡ ಸದಾ ಬೆನ್ನಟ್ಟಿರುತ್ತದೆ. ಒತ್ತಡದಲ್ಲಿಯೇ ನಮ್ಮ ಕಲಿಕೆ ಸಾಧಿಸಬೇಕು. ಒತ್ತಡವನ್ನು ಬೆಳವಣಿಗೆಯ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಸವಾಲುಗಳಿರುವ ಪ್ರಕರಣಗಳನ್ನು ಕೈಬಿಟ್ಟು ವೃತ್ತಿಯಿಂದ ಪಲಾಯನ ಮಾಡಬೇಕಾದ ಸ್ಥಿತಿ ಬರುತ್ತದೆ.

ಒತ್ತಡವನ್ನು ವೃತ್ತಿಗಷ್ಟೆ ಸೀಮಿತಗೊಳಿಸಲು ಹೋದರೆ ಅದು ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಒತ್ತಡ ಇಲ್ಲದಿದ್ದರೆ ವೃತ್ತಿ ಮತ್ತು ಜೀವನ ನೀರಸವಾಗುತ್ತದೆ ಎನ್ನುವುದರಲ್ಲಿ ನಂಬಿಕೆ ಇಡಬೇಕು. ವೃತ್ತಿಯಲ್ಲಿ 15-20 ವರ್ಷಗಳಾದ ನಂತರ ಒತ್ತಡವನ್ನೂ ಕಲಿಕೆಯ ಅವಕಾಶವನ್ನಾಗಿ ಬಳಸಿಕೊಳ್ಳಲು ಪ್ರಾರಂಭಿಸುತ್ತೇವೆ. ಕಾರಣ ಆ ಸ್ತರಕ್ಕೆ ತಲುಪುವ ಹೊತ್ತಿಗೆ ಒತ್ತಡ ನಮಗೆ ಏಕಾಗ್ರತೆಯನ್ನೂ ತಂದುಕೊಡುತ್ತದೆ ಎಂದು ಅರಿವಾಗಿರುತ್ತದೆ. ಅನುಭವಗಳ ಬೆಂಬಲ ವೃತ್ತಿಗೆ ಭದ್ರಬುನಾದಿ ಆಗುತ್ತದೆ. ಒತ್ತಡವನ್ನು ಹಾಗೆಂದು ಭಾವಿಸದೆ ಕೆಲಸ ನಿರ್ವಹಿಸುವ ಹಂತವನ್ನು ನಾವು ತಲುಪುತ್ತೇವೆ.

ವೈದ್ಯಕೀಯ ಪರಿಭಾಷೆಯಲ್ಲಿ ಒತ್ತಡವನ್ನು ಕಾಯಿಲೆ ಎಂದೇ ಕರೆಯುತ್ತಾರೆ. ಆದ್ದರಿಂದ ಆ ಕಾಯಿಲೆಗೆ ಬಲಿಯಾಗದೇ ಸಂದರ್ಭ ನಿರ್ವಹಿಸಬೇಕು. ಪ್ರತಿಯೊಂದು ಪ್ರಕರಣವನ್ನೂ ಕೈಗೆತ್ತಿಕೊಂಡಾಗ ಅದರಲ್ಲಿನ ಯಾವ ಅಂಶಗಳ ಕುರಿತು ಹೆಚ್ಚು ಶ್ರಮಿಸಬೇಕು, ಓದಿಕೊಂಡು ವಿಶೇಷ ತಯಾರಿ ಮಾಡಿಕೊಳ್ಳಬೇಕು ಎಂದು ಗುರುತಿಸಿಕೊಳ್ಳುತ್ತೇನೆ. ಪ್ರತಿ ಪ್ರಕರಣದ ತಯಾರಿಯಲ್ಲಿಯೂ ಸಂಪೂರ್ಣ ಆಸ್ಥೆ ವಹಿಸಿ ತಳಸ್ಪರ್ಶಿ ಸಿದ್ಧತೆ ಮಾಡಿಕೊಳ್ಳುತ್ತೇನೆ. ಇದರಿಂದ ಒತ್ತಡದ ಪ್ರಮಾಣ ಗಣನೀಯವಾಗಿ ಕಡಿಮೆ ಆಗುತ್ತದೆ.

ವೃತ್ತಿಯನ್ನು ಹಗುರವಾಗಿ ಪರಿಗಣಿಸಿದಾಗ ಒತ್ತಡ ನಮ್ಮ ಮೇಲೆ ಪ್ರಭಾವ ಬೀರಲಾರಂಭಿಸುತ್ತದೆ. ವೃತ್ತಿಯಲ್ಲಿ ಸೇರಿಹೋಗಿರುವ ಒತ್ತಡಗಳನ್ನು ಕಂಡುಕೊಳ್ಳಬಹುದಾದರೆ, ಅದು ಉಂಟಾಗುವ ಮುಂಚೆಯೇ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಸಾಧ್ಯ ಆಗುತ್ತದೆ. ಇದು ನಾನು ಒತ್ತಡ ನಿಭಾಯಿಸಲು ಕಂಡುಕೊಂಡಿರುವ ರೀತಿ.

ಜಗತ್ತು ನಮ್ಮ ಕಾರ್ಯಸ್ವರೂಪವನ್ನು ಗಮನಿಸಲು ಆರಂಭಿಸುವುದೇ ನಮ್ಮ ಮೇಲಿನ ದೊಡ್ಡ ಒತ್ತಡ. ಒತ್ತಡದ ಕುರಿತು ನಮಗೆ ಅರಿವು ಇದ್ದೇ ಇರುತ್ತದೆ. ಒತ್ತಡ ಎದುರಿಸಲು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತ್ಯಾಗವನ್ನು ಸಹ ಮಾಡಬೇಕಾಗುತ್ತದೆ. ನಾನು 26-27 ವರ್ಷಗಳಿಂದ ಚಿತ್ರಮಂದಿರಕ್ಕೆ ಹೋಗಿಲ್ಲ. ಮನೆಯಲ್ಲಿ ಟಿವಿ ಇದ್ದರೂ ಸಿನಿಮಾ ನೋಡಲು ಸಾಧ್ಯವಾಗುವುದಿಲ್ಲ. ಮಕ್ಕಳ ಬೆಳವಣಿಗೆ ಗಮನಿಸಲು ಆಗಿರುವುದಿಲ್ಲ. ಅವೆಲ್ಲಾ ಹೊಣೆ ಮನೆಯವರ ಮೇಲೆಯೇ ಬೀಳುತ್ತದೆ. ಅನೇಕ ಸಲ ಆರೋಗ್ಯದ ಕಡೆಯೂ ಗಮನ ಕೊಡಲಾಗುವುದಿಲ್ಲ. ಜ್ವರ, ತಲೆನೋವು ಇದ್ದರೂ ಕೆಲಸ ಮಾಡುತ್ತೇವೆ. ಪ್ರತ್ಯೇಕಿಸಿ ನೋಡಿದಾಗ ಇವೆಲ್ಲ ಸಣ್ಣದು ಎನಿಸುತ್ತವೆ. ಆದರೆ ಒಟ್ಟಾಗಿ ಪರಿಗಣಿಸಿದಾಗ ಇವೆಲ್ಲ ತ್ಯಾಗ ಎಂದು ಎಲ್ಲರಿಗೂ ಅರಿವಾಗುತ್ತದೆ.

ಯಾವುದೇ ವೃತ್ತಿಯನ್ನು ಪರಿಗಣಿಸಿ, ಅದರಲ್ಲಿ ಮಹತ್ವಾಕಾಂಕ್ಷೆ ಇರುತ್ತದೆ. ಮಹತ್ವಾಕಾಂಕ್ಷೆ ಸಹ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಕಾರಿ. ಆರೋಗ್ಯಕರ ಮಹತ್ವಾಕಾಂಕ್ಷೆ ನನಗೆ ಪ್ರೇರೇಪಣೆ ನೀಡುತ್ತದೆ. ನಮ್ಮೊಳಗೆ  ಮಹತ್ವಾಕಾಂಕ್ಷೆ ಇದ್ದರೆ ಅದು ಒತ್ತಡವನ್ನು ಎದುರಿಸಲು ಸಹಕಾರಿ.

ನಾನು ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈವರೆಗೂ 700ಕ್ಕೂ ಹೆಚ್ಚು ಕೊಲೆ ಪ್ರಕರಣಗಳ ವಿಚಾರಣೆ ನಡೆಸಿದ್ದೇನೆ. ಈಗಲೂ ಪ್ರತಿ ಪ್ರಕರಣವನ್ನೂ ಹೊಸದಾಗಿಯೇ ಪರಿಗಣಿಸುತ್ತೇನೆ. ಅನುಭವದ ಬೆಂಬಲದಿಂದ ಹೊಸರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತೇನೆ. ಈ ರೀತಿಯ ತಯಾರಿ ಒತ್ತಡ ನಿರ್ವಹಣೆಗೆ ಸಹಕಾರಿ.

ಭಾನುವಾರ ನಾನು ತಯಾರಿಯ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಈ ದಿನ ನಾನು ತಪ್ಪದೆ ಸಣ್ಣಕತೆಗಳು, ಕಾದಂಬರಿಗಳನ್ನು ಓದುತ್ತೇನೆ. ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಸಾಹಿತ್ಯದ ಗೀಳು ಹೆಚ್ಚು. ವೃತ್ತಿಯ ಆಚೆಗಿನ ನನ್ನ ಓದು ಹೆಚ್ಚಿದೆ.

ಕೆಲವೊಮ್ಮೆ ಕಚೇರಿಯಿಂದ ಬಂದ ಬಳಿಕ ಬೇಸರವಾದರೆ ರಾತ್ರಿ ಮಲಗುವ ಮುನ್ನ ಸಾಹಿತ್ಯದ ಪುಸ್ತಕವನ್ನು ಓದಿ ಮಲಗಿಕೊಳ್ಳುತ್ತೇನೆ. ನನ್ನ ನಾಳೆಯ ಕೆಲಸಕ್ಕೆ ಬೇಕಾದ ಯೋಚನೆಗಳನ್ನು ಇದು ಉದ್ದೀಪನಗೊಳಿಸುತ್ತದೆ. ಸಾಹಿತ್ಯ ನನ್ನ ಚೈತನ್ಯದ ಮೂಲ. ಕಾನೂನುಪುಸ್ತಕಗಳಿಗಿಂತ ಸಾಹಿತ್ಯದ ಪುಸ್ತಕಗಳು ನನ್ನ ಬಳಿ ಸ್ವಲ್ಪ ಹೆಚ್ಚೇ ಇವೆ.

‌ಕನ್ನಡ, ಇಂಗ್ಲಿಷ್ ಸಾಹಿತ್ಯವನ್ನು ಓದುತ್ತೇನೆ. ಸಾಕಷ್ಟು ಸಿದ್ಧತೆಯ ನಂತರವೂ ನಾಳೆಯ ಪಾಟೀಸವಾಲಿನ ಸಿದ್ಧತೆಯಲ್ಲಿ ಯಾವುದೋ ಒಂದು ಅಂಶ ಬಾಕಿ ಇದೆ ಎಂದು ಅನಿಸಿ ಒತ್ತಡ ಉಂಟಾಗುತ್ತದೆ. ಇದನ್ನು ನನ್ನ ಸಾಹಿತ್ಯದ ಓದು ನಿವಾರಿಸುತ್ತದೆ. ಎಷ್ಟೋ ಬಾರಿ ನನ್ನ ಪಾಟೀಸವಾಲಿಗೆ ಬೇಕಾದ ಅಂಶಗಳನ್ನು ಸಾಹಿತ್ಯದ ಓದಿನಿಂದ ನನಗೇ ತಿಳಿಯದಂತೆ ಪಡೆದುಕೊಂಡಿರುತ್ತೇನೆ. ಸಾಹಿತ್ಯದ ಓದು ನನಗೆ ಒತ್ತಡ ನಿಭಾಯಿಸಲು ಸಹಾಯ ಮಾಡುತ್ತದೆ.

ಕೆಲವು ಕ್ಲಿಷ್ಟಕರ ಪ್ರಕರಣ ಎದುರಾದಾಗ ತೀರಾ ನಂಬಿಕಸ್ಥರಾದ ಕೆಲವು ಸಮಾನಮನಸ್ಕ ವೃತ್ತಿಪರ ಗೆಳೆಯರ ಜತೆ ಚರ್ಚಿಸುತ್ತೇನೆ. ಬಹಳ ಮಹತ್ತರ ಪ್ರಕರಣ ನಡೆಸುವ ವೇಳೆ ಈ ಚರ್ಚೆ ಸಾಕಷ್ಟು ಸಹಾಯ ಮಾಡುತ್ತದೆ. ನನಗೆ ಎದುರಾಗಬಹುದಾದ ಒತ್ತಡ ಇದರಿಂದ ಕಡಿಮೆಯಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry