‘ತಂದೆಯೇ ನನ್ನ ಮೊದಲ ಗುರು’

7

‘ತಂದೆಯೇ ನನ್ನ ಮೊದಲ ಗುರು’

Published:
Updated:
‘ತಂದೆಯೇ ನನ್ನ ಮೊದಲ ಗುರು’

ಸಂಗೀತ ಪರಂಪರೆಯ ಮನೆತನದಿಂದ ಬಂದ ಅಂಬಿ ಸುಬ್ರಹ್ಮಣ್ಯಂ ಅವರಿಗೆ ಪಿಟೀಲಿನ ಮೇಲೆ ಅಪಾರ ಪ್ರೀತಿ. ಬೆಂಗಳೂರಿನವರೇ ಆದ ಇವರಿಗೆ ಬಾಲ್ಯದಿಂದಲೂ ಕಲೆ ಒಲಿದಿತ್ತು. ತಂದೆ ಎಲ್.ಸುಬ್ರಹ್ಮಣ್ಯಂ, ತಾಯಿ ಬಾಲಿವುಡ್‌ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಇಬ್ಬರ ಪ್ರತಿಭೆಯೂ ಮಗನಿಗೂ ಒಲಿದಿತ್ತು. ಹಾಗಾಗಿ ಸಹಜವಾಗಿ ಇವರಲ್ಲೂ ಸಂಗೀತದ ಆಸಕ್ತಿ ಒಡಮೂಡಿತ್ತು. ಪಿಟೀಲು ಇವರ ನೆಚ್ಚಿನ ವಾದ್ಯ.

ಮೂರನೇ ವಯಸ್ಸಿನಿಂದಲೇ ಅಂಬಿ ಅವರ ಸಂಗೀತಾಭ್ಯಾಸ ಆರಂಭವಾಯಿತು. ತಂದೆಯೇ ಗುರು. ಆರು ವರ್ಷದವರಿದ್ದಾಗ ಮೊದಲ ಬಾರಿ ವೇದಿಕೆ ಏರಿ ಪಿಟೀಲು ನುಡಿಸಿದ್ದರು. ‘ನನ್ನ ಮೊದಲ ಹಾಗೂ ಕೊನೆಯ ಗುರು ನನ್ನ ತಂದೆಯೇ. ಆದರೆ ಗಾಯನ ಮತ್ತು ಪಿಟೀಲು ನುಡಿಸಾಣಿಕೆಯನ್ನು ಬೇರೆ ಶಿಕ್ಷಕರಿಂದ ಕಲಿತಿದ್ದೆ’ ಎಂದು ತಮ್ಮ ಕಲಿಕೆಯ ಹಾದಿಯನ್ನು ಚಿಕ್ಕದಾಗಿ ಹೇಳುತ್ತಾರೆ.

ಎಂ.ಎಸ್‌. ಸುಬ್ಬುಲಕ್ಷ್ಮಿ ಹಾಗೂ ತಂದೆ ಎಲ್‌. ಸುಬ್ರಹ್ಮಣ್ಯಂ ಇವರ ಸಂಗೀತ ಕಲೆಗೆ ಸ್ಫೂರ್ತಿ. ಮೊದಲೆಲ್ಲಾ ವೇದಿಕೆ ಏರಿ ಹಾಡುತ್ತಿದ್ದ ಇವರು ಇತ್ತೀಚೆಗೆ ಹಾಡುವುದನ್ನು ಕಡಿಮೆ ಮಾಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದ್ದಾರೆ. ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

ಎಂ.ಬಿ.ಎ ಪದವಿ ಮುಗಿಸಿ, ಸಂಗೀತದಲ್ಲಿ ಪಿ.ಎಚ್‌ಡಿ ಮಾಡಿದ್ದಾರೆ ಅಂಬಿ. ‘ಸಂಗೀತಕ್ಕೆ ತಂದೆ– ತಾಯಿ ಸಹಕಾರ ಮುಂಚಿನಿಂದಲೂ ಇತ್ತು, ಆದರೆ ಅದರ ಜೊತೆಗೂ ಓದಿಗೂ ಪ್ರಾಮುಖ್ಯ ನೀಡಿದ್ದರು. ನನ್ನ ಸಹೋದರಿ ಕೂಡ ಸಂಗೀತದಲ್ಲಿ ಭವಿಷ್ಯ ಕಟ್ಟಿಕೊಂಡವರು. ನಾನು ಈಗ ಇರುವುದರಲ್ಲೇ ಸಂತೋಷವಾಗಿದ್ದೇನೆ‌, ಹಾಗಾಗಿ ಹೊಸತೊಂದು ಯೋಜನೆಯ ಬಗ್ಗೆ ಯೋಚಿಸುವುದಿಲ್ಲ‍’ ಎಂದು ನೆಮ್ಮದಿಯ ಮಾತುಗಳನ್ನು ಆಡುತ್ತಾರೆ. ಸಾಪಾ (ಸುಬ್ರಹ್ಮಣಿಂ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್‌) ಎನ್ನುವ ಸಂಗೀತ ಶಾಲೆಗೆ ಇವರು ಸಹ ನಿರ್ದೇಶಕರಾಗಿದ್ದಾರೆ. ‘ಸಾಪಾ’  ಮೂಲಕ ಶಾಲಾ ಮಕ್ಕಳಿಗೆ ಸಂಗೀತವನ್ನು ಕಲಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 20,000 ಮಕ್ಕಳಿಗೆ ಸಂಗೀತಭ್ಯಾಸ ಮಾಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry