‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

7
ಅಮೆರಿಕದಿಂದ ಮನವೊಲಿಕೆ ಪ್ರಯತ್ನ: ರಕ್ಷಣಾ ಸಚಿವ ಖುರಂ ದಸ್ತಗೀರ್ ಖಾನ್ ಹೇಳಿಕೆ

‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

Published:
Updated:
‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

ಇಸ್ಲಾಮಾಬಾದ್: ‘ಪಾಕಿಸ್ತಾನಕ್ಕೆ ಭಾರತದಿಂದ ಬೆದರಿಕೆ ಇಲ್ಲ. ಹೀಗಾಗಿ, ಭಾರತದ ಬಗ್ಗೆ ಹೊಂದಿರುವ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಅಮೆರಿಕ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ’ ಎಂದು ರಕ್ಷಣಾ ಸಚಿವ ಖುರಂ ದಸ್ತಗೀರ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಹಾಗೂ ವಿದೇಶಾಂಗ ನೀತಿಗಳ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಗಡಿ ನಿಯಂತ್ರಣ ರೇಖೆಯಲ್ಲಿ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತ ತೋರುವ ಆಕ್ರಮಣಕಾರಿ ನೀತಿಯನ್ನು ಅಮೆರಿಕ ಕಡೆಗಣಿಸಿದೆ’ ಎಂದು ತಿಳಿಸಿದ್ದಾರೆ.

‘ಪಾಕ್ ಗಡಿಯಲ್ಲಿ ಭಾರತ ಸೇನಾ ನೆಲೆ ಸ್ಥಾಪಿಸಿ ಯೋಧರನ್ನು, ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಭಾರತದಿಂದ ಕದನ ವಿರಾಮ ಉಲ್ಲಂಘನೆ ಹಾಗೂ ನಾಗರಿಕರ ಹತ್ಯೆಗಳು ಪದೇ ಪದೇ ನಡೆಯುತ್ತಿವೆ. ಈ ವಿಷಯದಲ್ಲಿ 2017 ಭೀಕರ ವರ್ಷವಾಗಿತ್ತು’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಭಾರತದ ಸಾಮರ್ಥ್ಯ ಹಾಗೂ ಉದ್ದೇಶ ಪಾಕಿಸ್ತಾನದ ಕುರಿತು ಆಕ್ರಮಣಕಾರಿಯಾಗಿಯೇ ಇದೆ. ಸೇನೆಯ ವಿಷಯದಲ್ಲಿ  ಭಾರತ ಅತ್ಯಂತ ಸಮರ್ಥವಾಗಿದೆ ಹಾಗೂ ಆಕ್ರಮಣಕಾರಿ ನೆರೆರಾಷ್ಟ್ರವಾಗಿದೆ. ಭಾರತ ಸರ್ಕಾರ ಪ್ರಸ್ತುತ ತಳೆದಿರುವ ಪಾಕಿಸ್ತಾನ ವಿರೋಧಿ ನಿಲುವಿನಿಂದಾಗಿ ಶಾಂತಿ ಮಾತುಕತೆ ನಡೆಸುವ ಸಾಧ್ಯತೆ ಕಡಿಮೆ’ ಎಂದಿದ್ದಾರೆ.

‘ಒಕ್ಕೂಟ ಆಡಳಿತ ಇರುವ ಬುಡಕಟ್ಟು ಪ್ರದೇಶಗಳು ಮತ್ತು ಕರಾಚಿ ಹಾಗೂ ಬಲೂಚಿಸ್ತಾನದಲ್ಲಿ ‘ಝರ್ಬ್–ಇ–ಅಜ್ಬ್’ ಕಾರ್ಯಾಚರಣೆ ನಡೆಸಲಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಯಾವುದೇ ಅಡಗುತಾಣ ಇಲ್ಲ. ಅಫ್ಗಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಅಮೆರಿಕ ಗೆಲುವು ಸಾಧಿಸದೆ ಇರುವುದರಿಂದ ಪಾಕಿಸ್ತಾನವನ್ನು ಬಲಿಪಶು ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

’2001ರಿಂದಲೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನದ ಪ್ರಜೆಗಳು ಮಾಡಿರುವ ತ್ಯಾಗವನ್ನು ಅಮೆರಿಕ ಗುರುತಿಸಬೇಕು’ ಎಂದು ಅವರು ತಿಳಿಸಿದ್ದಾರೆ..

’ಅಮೆರಿಕದ ಜತೆ ಸೌಹಾರ್ದಯುತವಾಗಿ ನೇರ ಮಾತುಕತೆ ನಡೆಸುವ ಸಮಯ ಇದಾಗಿದೆ. ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಇರುವ ತಪ್ಪು ತಿಳಿವಳಿಕೆಯನ್ನು ಸಹ ಹೋಗಲಾಡಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ಡಿಜಿಎಂಒ ಮಟ್ಟದ ಮಾತುಕತೆಗೆ ಪಾಕ್‌ ಪರಿಶೀಲನೆ

ಇಸ್ಲಾಮಾಬಾದ್ (ಪಿಟಿಐ): ಭಾರತದ ಜತೆ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ನಡೆಸಲು ಪಾಕಿಸ್ತಾನ ಪರಿಶೀಲನೆ ನಡೆಸುತ್ತಿದೆ.

ಸೋಮವಾರ ನಡೆದ ಸಭೆಯೊಂದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪ್ರಸ್ತಾವಿತ ಸಭೆ ನಡೆಸುವ ಸಲುವಾಗಿ ಉಭಯ ರಾಷ್ಟ್ರಗಳ ನಡುವೆ ಹೊಸದಾಗಿ ವಿಶ್ವಾಸ ಮೂಡಿಸುವ ಕ್ರಮ ಕೈಗೊಳ್ಳಲು ಪಾಕ್ ಮುಂದಾಗಿದೆ. ಇದರ ಭಾಗವಾಗಿ ಗಡಿಯಲ್ಲಿ ಕಡಿಮೆ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಪರಿಗಣಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ 2013ರ ಡಿಸೆಂಬರ್‌ 24ರಂದು ಕೊನೆಯ ಬಾರಿಗೆ ಪಾಕ್ ಭಾರತ ನಡುವೆ ಡಿಜಿಎಂಒ ಮಟ್ಟದ ಮಾತುಕತೆ ನಡೆದಿತ್ತು.

ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವುದು ಮಾತುಕತೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‍ಪಾಕಿಸ್ತಾನ ಅಣ್ವಸ್ತ್ರ ವಂಚಕ’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್ ರಾವತ್ ನೀಡಿದ್ದ ಹೇಳಿಕೆಯನ್ನು ಇದೇ ವೇಳೆ ನಡೆದ ಸೆನೆಟ್‌ ಸಮಿತಿಯಲ್ಲಿ ಒಮ್ಮತದಿಂದ ಖಂಡಿಸಲಾಗಿದೆ. ಇದು ಮೂರ್ಖತನ ಹಾಗೂ ಪ್ರಚೋದನಾಕಾರಿ ಹೇಳಿಕೆಯಾಗಿದೆ’ ಸಮಿತಿ ಪ್ರತಿಕ್ರಿಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry