ಹಜ್‌: ಉಳಿತಾಯದ ಹಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ

7

ಹಜ್‌: ಉಳಿತಾಯದ ಹಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ

Published:
Updated:
ಹಜ್‌: ಉಳಿತಾಯದ ಹಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ

ನವದೆಹಲಿ: ಹಜ್‌ ಸಹಾಯಧನವನ್ನು ನಿಲ್ಲಿಸಿದ್ದರಿಂದ ಸರ್ಕಾರಕ್ಕೆ ಉಳಿತಾಯವಾಗುವ ₹700 ಕೋಟಿಯನ್ನು ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲಾಗುವುದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಬದಲಿಗೆ ಸಶಕ್ತಗೊಳಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಹಜ್‌ ಸಹಾಯಧನವನ್ನು ರದ್ದು ಮಾಡಲಾಗಿದೆ ಎಂದು  ನಖ್ವಿ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಜ್ ಸಹಾಯಧನವಾಗಿ ನೀಡುತ್ತಿದ್ದ ಮೊತ್ತ ₹700 ಕೋಟಿ ಇತ್ತು. ಹಜ್‌ ಯಾತ್ರಿಕರನ್ನು ಮೆಕ್ಕಾಕ್ಕೆ ಕರೆದೊಯ್ಯುತ್ತಿದ್ದ ಏರ್‌ ಇಂಡಿಯಾಕ್ಕೆ ಈ ಮೊತ್ತದಲ್ಲಿ ಬಹುಪಾಲು ಸಂದಾಯವಾಗುತ್ತಿತ್ತು. ಹಜ್‌ ಯಾತ್ರೆಯ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಪ್ರಯಾಣದ ಬೇರೆ ಆಯ್ಕೆಗಳನ್ನು ಶೋಧಿಸಲಾಗಿದೆ. ಹಡಗುಗಳ ಮೂಲಕ ಹಜ್‌ ಯಾತ್ರೆ ಕೈಗೊಳ್ಳುವುದಕ್ಕೆ ಅವಕಾಶ ನೀಡುವ ಸರ್ಕಾರದ ಪ್ರಸ್ತಾವಕ್ಕೆಸೌದಿ ಅರೇಬಿಯಾ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ನಖ್ವಿ ತಿಳಿಸಿದ್ದಾರೆ.

‘ಸಹಾಯಧನ ಇರಲೇ ಇಲ್ಲ’: ಹಜ್‌ ಸಹಾಯಧನ ಎಂಬ ರಿಯಾಯಿತಿ ಇರಲೇ ಇಲ್ಲ. ಹಜ್‌ ಸಹಾಯಧನದ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗುತ್ತಿತ್ತು. ಹಾಗಾಗಿ ಸಹಾಯಧನ ರದ್ದು ಮಾಡುವ ಸರ್ಕಾರದ ನಿರ್ಧಾರಕ್ಕೆ ಅರ್ಥವೇ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಪ್ರತಿಕ್ರಿಯೆ ನೀಡಿದೆ.

‘ಹಜ್‌ಗೆ ಹೋಗುವವರಿಗೆ ಸಹಾಯ ಧನ ನೀಡಲಾಗುತ್ತಿರಲಿಲ್ಲ. ಬದಲಿಗೆ, ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಕ್ಕೆ ನೀಡಲಾಗುತ್ತಿತ್ತು. ಇದು ಕಣ್ಣೊರೆಸುವ ತಂತ್ರ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರಹ್ಮಾನಿ ಹೇಳಿದ್ದಾರೆ.

ಹಿಂದೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಳಸಿ: ಹಜ್ ಸಹಾಯಧನದಿಂದ ಉಳಿತಾಯವಾಗುವ ಹಣವನ್ನು ಹಿಂದೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಒತ್ತಾಯಿಸಿದೆ.

‘ಹಿಂದೂಗಳ ಸಾಮೂಹಿಕ ಆಗ್ರಹದ ಫಲವಾಗಿ ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ’ ಎಂದು ಪರಿಷತ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry