ಆಹಾರ ಸಬ್ಸಿಡಿ ಹೆಚ್ಚಳ ನಿರೀಕ್ಷೆ

7
ಕನಿಷ್ಠ ಬೆಂಬಲ ಬೆಲೆ ಏರಿಕೆ ಪರಿಣಾಮ

ಆಹಾರ ಸಬ್ಸಿಡಿ ಹೆಚ್ಚಳ ನಿರೀಕ್ಷೆ

Published:
Updated:
ಆಹಾರ ಸಬ್ಸಿಡಿ ಹೆಚ್ಚಳ ನಿರೀಕ್ಷೆ

ನವದೆಹಲಿ: 2018–19ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಆಹಾರ ಸಬ್ಸಿಡಿಯು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಸಬ್ಸಿಡಿ ದರದಲ್ಲಿ ವಿತರಿಸುವ ಆಹಾರ ಧಾನ್ಯಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಗೊಂಡಿದೆ. ಹೀಗಾಗಿ ಆಹಾರ ಸಬ್ಸಿಡಿ ಮೊತ್ತವು ₹ 1.60 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.

ಅಕ್ಕಿ, ಗೋಧಿಗಳ ಕನಿಷ್ಠ ಬೆಂಬಲ ಬೆಲೆಯು ಶೇ 7 ರಿಂದ 8ರಷ್ಟು ಹೆಚ್ಚಳಗೊಂಡಿರುವುದರಿಂದ ಆಹಾರ ಸಚಿವಾಲಯಕ್ಕೆ ನಿಗದಿ ಮಾಡುವ ಬಜೆಟ್‌ ನೆರವು ಹೆಚ್ಚಳಗೊಳ್ಳಲಿದೆ. ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುತ್ತಿರುವ ಪ್ರತಿ ಕೆಜಿಗೆ ₹ 2 ರಂತೆ ಗೋಧಿ ಮತ್ತು ₹ 3ಕ್ಕೆವಿತರಿಸಲಾಗುವ ಅಕ್ಕಿ ಬೆಲೆಯನ್ನು 2018–19ನೇ ಹಣಕಾಸು ವರ್ಷದಲ್ಲಿ ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಬ್ಸಿಡಿ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಕೇಂದ್ರ ಸರ್ಕಾರವು 2016ರ ನವೆಂಬರ್‌ ತಿಂಗಳಿನಿಂದ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಜಾರಿಗೆ ತಂದಿದೆ. ಇದರಡಿ ಪ್ರತಿ ತಿಂಗಳೂ 80 ಕೋಟಿ ಜನರಿಗೆ ಗರಿಷ್ಠ ಸಬ್ಸಿಡಿ ದರಗಳಲ್ಲಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ.

2017–18ನೇ ಸಾಲಿನಲ್ಲಿ ಸರ್ಕಾರವು ಆಹಾರ ಸಬ್ಸಿಡಿಗೆ ₹ 1.45 ಲಕ್ಷ ಕೋಟಿ ವೆಚ್ಚ ಮಾಡಲು ನಿರ್ಧರಿಸಿತ್ತು.

ಮುಂದಿನ ಹಣಕಾಸು ವರ್ಷದಲ್ಲಿ  ಆಹಾರ ಸಚಿವಾಲಯಕ್ಕೆ ಬಜೆಟ್‌ನಲ್ಲಿ ಹೆಚ್ಚು ಹಣ ತೆಗೆದು ಇರಿಸುವ ಸಾಧ್ಯತೆ ಇದೆ. ಆಹಾರ ಸಬ್ಸಿಡಿಯೂ ಒಳಗೊಂಡಂತೆ ₹ 2.20 ಲಕ್ಷ ಕೋಟಿ ನಿಗದಿ ಮಾಡುವ ನಿರೀಕ್ಷೆ ಇದೆ. ‍ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಮೊತ್ತ ₹ 1.96 ಲಕ್ಷ ಕೋಟಿಗಳಷ್ಟಿದೆ.

ಜಿಲ್ಲೆಯಲ್ಲಿನ ಯಾವುದೇ ಪಡಿತರ ಅಂಗಡಿಯಿಂದ ಸರಕು ಖರೀದಿಸಲೂ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ ಅವಕಾಶ ಮಾಡಿಕೊಡಲಿದೆ. ಇದರಿಂದ ಫಲಾನುಭವಿಗಳು ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಯಾವುದೇ ಪಡಿತರ ಅಂಗಡಿಯಿಂದ ಖರೀದಿಸಲು ಸಾಧ್ಯವಾಗಲಿದೆ. ಕ್ರಮೇಣ ಈ ಸೌಲಭ್ಯವನ್ನು ಇಡೀ ರಾಜ್ಯಕ್ಕೂ ವಿಸ್ತರಿಸುವ ಆಲೋಚನೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry