ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್‌ ಪಕ್ಷದ ಸಾಧನೆ

7

ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್‌ ಪಕ್ಷದ ಸಾಧನೆ

Published:
Updated:
ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್‌ ಪಕ್ಷದ ಸಾಧನೆ

ಪಚಪದ್ರಾ (ರಾಜಸ್ಥಾನ): ದೇಶದ ತುಂಬಾ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದೊಂದೇ ಕಾಂಗ್ರೆಸ್‌ ಪಕ್ಷದ ಬಹು ದೊಡ್ಡ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

₹43,129 ಕೋಟಿ ವೆಚ್ಚದ ಬಾಡಮೆರ್‌ ತೈಲ ಸಂಸ್ಕರಣಾ ಯೋಜನೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷುಲ್ಲಕ ಪ್ರಚಾರದ ಇಂತಹ ಕೆಲಸಗಳಿಂದಲೇ ಆ ಪಕ್ಷ ದೇಶದ ಜನರನ್ನು ಭ್ರಮೆಯಲ್ಲಿಟ್ಟುಕೊಂಡು ಬಂದಿದೆ ಎಂದರು.

ಈ ಯೋಜನೆಯ ಶ್ರೇಯಕ್ಕಾಗಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನಡೆದಿರುವ ಕೆಸರೆರಚಾಟ ಕುರಿತು ಅವರು ತಮ್ಮ ಭಾಷಣದಲ್ಲಿ

ಪ್ರಸ್ತಾಪಿಸಿದರು.

ಅಡಿಗಲ್ಲು ಹಾಕುವ ಕೆಲಸವೊಂದನ್ನೇ ಕಾಂಗ್ರೆಸ್‌ ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ. ಇದನ್ನು ಬಿಟ್ಟು ಬಡ ಜನರಿಗಾಗಿ ಆ ಪಕ್ಷ ಏನನ್ನೂ ಮಾಡಲಿಲ್ಲ. ಅನೇಕ ರೈಲ್ವೆ ಯೋಜನೆ ಘೋಷಿಸಿದರೂ ಇದುವರೆಗೂ ಕಾರ್ಯರೂ‍ಪಕ್ಕೆ ಬಂದಿಲ್ಲ ಎಂದರು.

ಕಾಂಗ್ರೆಸ್‌ ಮತ್ತು ಬರಗಾಲಕ್ಕೆ ಬಿಡದ ನಂಟು. ಆ ಪಕ್ಷ ಅಧಿಕಾರದಿಂದ ತೊಲಗಿದ ಮೇಲೆ ರಾಜಸ್ಥಾನದಲ್ಲಿ ಬರಗಾಲ ಮಾಯವಾಗಿದೆ ಎಂದು ಹಾಸ್ಯ ಮಾಡಿದರು.

‘ಕಾಂಗ್ರೆಸ್‌ಗೆ ಪ್ರಚಾರದ ಗೀಳು’: ‘ಬಡತನ ತೊಲಗಿಸಿ’ (ಗರೀಬಿ ಹಟಾವೊ) ಎಂಬ ಆಕರ್ಷಕ ಘೋಷಣೆಯನ್ನು ಕಾಂಗ್ರೆಸ್‌ ನೀಡಿತು. ಬಡವರಿಗಾಗಿ ಏನನ್ನೂ ಮಾಡಲಿಲ್ಲ. ಆದರೆ, ಬಿಜೆಪಿಯು ಬಡವರಿಗೆ ಉಚಿತವಾಗಿ ಅಡುಗೆ ಅನಿಲ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಮೂಲಕ ಬಡತನ ತೊಲಗಿಸುವ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

2014ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತರಾತುರಿಯಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಮಾಜಿ ಯೋಧರ ‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಗೆ ₹500 ಕೋಟಿ ಘೋಷಿಸಿತು. ಆದರೆ, ಯೋಜನೆಯ ಫಲಾನುಭವಿಗಳ ಮಾಹಿತಿ, ಅಂಕಿ–ಅಂಶ ಇರಲಿಲ್ಲ. ಆ ಮಾಹಿತಿ ಕಲೆ ಹಾಕಲು ಒಂದೂವರೆ ವರ್ಷ ಬೇಕಾಯಿತು ಎಂದರು.

ಕಾಂಗ್ರೆಸ್‌ ನೀಡಿದ್ದು ಕೇವಲ ₹500 ಕೋಟಿ. ಆದರೆ, ಯೋಜನೆಜಾರಿಗೆ ಆದ ವಾಸ್ತವ ವೆಚ್ಚ ₹12,000 ಕೋಟಿ. ಇದು ಆ ಪಕ್ಷದ ಪ್ರಚಾರದ ಗೀಳಿನ ಮತ್ತೊಂದು ನಿದರ್ಶನ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಹೆಸರಿಗಾಗಿ ಕೆಸರೆರಚಾಟ!

ಬಾಡಮೆರ್‌ ತೈಲ ಸಂಸ್ಕರಣಾ ಯೋಜನೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ಈ ಯೋಜನೆಯ ಶ್ರೇಯಸ್ಸು ತಮಗೆ ಸೇರಿದ್ದು ಎಂದು ಎರಡೂ ಪಕ್ಷಗಳು ಹೇಳುತ್ತಿವೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಾಡಮೆರ್‌ ತೈಲ ಸಂಸ್ಕರಣಾ ಯೋಜನೆಗೆ 2013ರ ಸೆಪ್ಟೆಂಬರ್‌ 22ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಮೋದಿ ಇದೀಗ ಎರಡನೇ ಬಾರಿ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ.

2014ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಕೆಲವೇ ಕೆಲವು ದಿನಗಳ ಮುನ್ನ ಕಾಂಗ್ರೆಸ್‌ ನೆಪಮಾತ್ರಕ್ಕೆ ತರಾತುರಿಯಲ್ಲಿ ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿತ್ತು ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್‌ ಆರೋಪಿಸಿದ್ದಾರೆ.

ಯೋಜನೆಗಾಗಿ ಭೂಮಿಯನ್ನೂ ಸ್ವಾಧೀನ ಪಡಿಸಿಕೊಂಡಿರಲಿಲ್ಲ ಮತ್ತು ಪರಿಸರ ಸಚಿವಾಲಯದ ಪರವಾನಗಿಯನ್ನೂ ಪಡೆದಿರಲಿಲ್ಲ. ಚುನಾವಣೆ ದೃಷ್ಟಿಯಿಂದ ನೆಪಮಾತ್ರಕ್ಕೆ ನಡೆಸಿದ ‘ರಾಜಕೀಯ ಗಿಮಿಕ್‌’ ಅದಾಗಿತ್ತು  ಎಂದು ಆರೋಪಿಸಿದ್ದಾರೆ.

ಕೆಲವೇ ದಿನಗಳಲ್ಲಿ ಅಲ್ವಾರ್‌, ಅಜ್ಮೇರ್‌ ಲೋಕಸಭಾ ಕ್ಷೇತ್ರ ಮತ್ತು ಮಂಡಲಗಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶೀಘ್ರ ನಡೆಯಲಿದ್ದು, ಅದಕ್ಕೂ ಮುನ್ನ ಈ ಸಮಾರಂಭ ನಡೆದಿರುವುದು ರಾಜಕೀಯ ಚರ್ಚೆಗೆ ಅವಕಾಶ ಒದಗಿಸಿದೆ.

ಈ ಮೂರು ಕ್ಷೇತ್ರಗಳಲ್ಲಿ ಜನವರಿ 29ರಂದು ಚುನಾವಣೆ ನಡೆಯಲಿದೆ. ವರ್ಷಾಂತ್ಯಕ್ಕೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry