ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ ಪತಂಜಲಿ ಉತ್ಪನ್ನ ಮಾರಾಟ

7

ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ ಪತಂಜಲಿ ಉತ್ಪನ್ನ ಮಾರಾಟ

Published:
Updated:
ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ ಪತಂಜಲಿ ಉತ್ಪನ್ನ ಮಾರಾಟ

ನವದೆಹಲಿ: ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದವು, 8 ಪ್ರಮುಖ ಇ–ಕಾಮರ್ಸ್‌ ಸಂಸ್ಥೆಗಳ ಜತೆ ಮಂಗಳವಾರ ಇಲ್ಲಿ ಒಪ್ಪಂದ ಮಾಡಿಕೊಂಡಿದೆ.

ತನ್ನ ಹಲವಾರು ಉತ್ಪನ್ನಗಳ ಮಾರಾಟ ಹೆಚ್ಚಿಸಲು ಪತಂಜಲಿಯು ಈ ಒಪ್ಪಂದಕ್ಕೆ ಬಂದಿದೆ.

‘ಸಾಂಪ್ರದಾಯಿಕ ರಿಟೇಲ್‌ ಮಾರುಕಟ್ಟೆಗೆ ಪೂರಕವಾಗಿ ಆನ್‌ಲೈನ್‌ ಮಾರಾಟವು ಗ್ರಾಹಕರಿಗೆ ಹೆಚ್ಚು ಅನುಕೂಲ ಮತ್ತು ಆಯ್ಕೆಗಳನ್ನು ಒದಗಿಸಲಿದೆ. ಪ್ರಸಕ್ತ ವರ್ಷ ₹ 1,000 ಕೋಟಿಗಳಷ್ಟು ಆನ್‌ಲೈನ್‌ ವಹಿವಾಟು ನಡೆಸಲು ಗುರಿ ಹಾಕಿಕೊಳ್ಳಲಾಗಿದೆ’ ಎಂದು ರಾಮದೇವ್‌ ಅವರು  ಹೇಳಿದರು. ಒಪ್ಪಂದಕ್ಕೆ ಸಹಿ ಹಾಕಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಈ ವರ್ಷ ಸಂಸ್ಥೆಯು ಬಾಟಲಿ ನೀರನ್ನು ‘ದಿವ್ಯ ಜಲ’  ಮತ್ತು ವಸ್ತ್ರ, ಪಾದರಕ್ಷೆಗಳನ್ನು ‘ಪರಿಧನ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಸಂಸ್ಥೆಯು ಮಾರಾಟ ಹೆಚ್ಚಿಸಲು 20 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಿದೆ. ಸಂಸ್ಥೆಯ ವಿವಿಧ ಉತ್ಪನ್ನಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು ₹ 50 ಸಾವಿರ ಕೋಟಿಗಳಿಗೆ ತಲುಪಿದೆ’ ಎಂದರು.

ಇ–ಕಾಮರ್ಸ್‌ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇಟಿಎಂ ಮಾಲ್‌, 1ಎಂಜಿ, ಬಿಗ್‌ ಬಾಸ್ಕೆಟ್‌, ಗ್ರೋಫರ್ಸ್‌, ಶಾಪ್‌ ಕ್ಲೂಸ್‌ ಮತ್ತು ನೆಟ್‌ಮೆಡ್ಸ್‌ ಜತೆ  ಒಪ್ಪಂದಕ್ಕೆ ಬರಲಾಗಿದೆ.

ವೈದ್ಯರ ಶಿಫಾರಸು ಅಗತ್ಯವಾಗಿರುವ ಪತಂಜಲಿ ಔಷಧಿಗಳನ್ನು ನೆಟ್‌ಮೆಡ್ಸ್‌ ಮತ್ತು ‘1ಎಂಜಿ’ಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

‘ತಮ್ಮ ಸಂಸ್ಥೆಯು ಪತಂಜಲಿಯಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಿದೆ’ ಎಂದು ಶಾಪ್‌ಕ್ಲೂಸ್‌ನ ಕಾರ್ಯಾಚರಣೆ ವಿಭಾಗದ ಹಿರಿಯ ಅಧ್ಯಕ್ಷ ವಿಶಾಲ್‌ ಶರ್ಮಾ ಹೇಳಿದ್ದಾರೆ.

ಇ–ಕಾಮರ್ಸ್‌ ತಾಣಗಳಲ್ಲಿ ಪತಂಜಲಿಯಾಗಲಿ ಅಥವಾ ಆನ್‌ಲೈನ್‌ ಮಾರಾಟ ಸಂಸ್ಥೆಗಳಾಗಲಿ ರಿಯಾಯ್ತಿ ದರದಲ್ಲಿ ಪತಂಜಲಿ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ರಿಟೇಲ್‌ ಮಳಿಗೆಗಳ ದರಗಳೇ ಇಲ್ಲಿಯೂ ಅನ್ವಯಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry