ಪೂರ್ಣ ಪ್ರಮಾಣದ ಆನ್‌ಲೈನ್ ಕೋರ್ಸ್

7
ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಸೂಚ್ಯಂಕ ಹೆಚ್ಚಿಸಲು ಕ್ರಮ

ಪೂರ್ಣ ಪ್ರಮಾಣದ ಆನ್‌ಲೈನ್ ಕೋರ್ಸ್

Published:
Updated:

ನವದೆಹಲಿ: ದೇಶದ ಶೇ 15ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್‌ಗಳ ಶಿಕ್ಷಣ ನೀಡಲು ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಸೂಚ್ಯಂಕವನ್ನು (ಜಿಇಆರ್) ಶೇ 25.2ರಿಂದು 2020ರಷ್ಟರಲ್ಲಿ ಶೇ 30ರವರೆಗೆ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಂಗಳವಾರ ಇಲ್ಲಿ ನಡೆದ ‘ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ–(ಸಿಎಬಿಇ)’ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

‘ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳ ಶೇ 20ರಷ್ಟನ್ನು ಆನ್‌ಲೈನ್‌ನಲ್ಲೇ ಪೂರೈಸಲು ಅವಕಾಶ ಮಾಡಿಕೊಡುವ ಸಲುವಾಗಿ ಕಳೆದ ವರ್ಷ ‘ಸ್ವಯಂ’ ಯೋಜನೆ ಆರಂಭಿಸಲಾಗಿತ್ತು. ಹೊಸ ಕಾರ್ಯಕ್ರಮ ‘ಸ್ವಯಂ’ಗಿಂತಲೂ ಭಿನ್ನವಾಗಿರುತ್ತದೆ. ಇದರಲ್ಲಿ ತಾಂತ್ರಿಕೇತರ ಕೋರ್ಸ್‌ಗಳನ್ನು ಸಂಪೂರ್ಣವಾಗಿ (ಶೇ 100) ಆನ್‌ಲೈನ್‌ನಲ್ಲೇ ಪೂರೈಸಲು ಅವಕಾಶ ಇರಲಿದೆ. ಈ ಸಂಬಂಧ ಅಗತ್ಯ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಶೀಘ್ರವೇ ಅವು ಅಂತಿಮಗೊಳ್ಳಲಿವೆ. ಎಲ್ಲಾ ರಾಜ್ಯಗಳಲ್ಲಿ ಕಾಲೇಜುಗಳನ್ನು ಎರಡು ಪಾಳಿಗಳಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ’ ’ ಎಂದು ಜಾವಡೇಕರ್ ಹೇಳಿದ್ದಾರೆ.

ಹೀಗಿರಲಿದೆ ಕಾರ್ಯಕ್ರಮ

* ನ್ಯಾಕ್‌ನಿಂದ ಎ+, ಎ++ ಕ್ರಮಾಂಕ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗಷ್ಟೇ ಆನ್‌ಲೈನ್‌ ಕೋರ್ಸ್‌ ನೀಡಲು ಅವಕಾಶವಿರಲಿದೆ

* ತಾಂತ್ರಿಕೇತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ

* ಆನ್‌ಲೈನ್‌ ಕೋರ್ಸ್‌, ತರಗತಿಗಳನ್ನು ನಡೆಸಲು ಶಿಕ್ಷಣ ಸಂಸ್ಥೆಗಳು ಸಿಬ್ಬಂದಿಗಾಗಿ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ

* ದೋಷವಿಲ್ಲದ ಮತ್ತು ವಿದ್ಯಾರ್ಥಿಗಳ ದಕ್ಷತೆಯನ್ನು ಕಾಯ್ದುಕೊಳ್ಳುವಂತಹ ಪಠ್ಯಕ್ರಮ ಹಾಗೂ ಬೋಧನಾಕ್ರಮವನ್ನು ರೂಪಿಸಲು ಕೇಂದ್ರ ಸರ್ಕಾರವೇ ಮಾರ್ಗಸೂಚಿ ಸಿದ್ಧಪಡಿಸಲಿದೆ

* ಪ್ರತಿ ಸೆಮಿಸ್ಟರ್‌ನ ಅಂತ್ಯದಲ್ಲೂ ಸ್ಪರ್ಧಾತ್ಮಕವಾಗಿ ಪರೀಕ್ಷೆ ನಡೆಸಲಾಗುತ್ತದೆ

‘ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಿ’

ನವದೆಹಲಿ (ಪಿಟಿಐ): ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲು ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರ ಒತ್ತಾಯಿಸಿದೆ.

ದೆಹಲಿಯಲ್ಲಿ ನಡೆದ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಸಭೆಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದಾರೆ.

‘ಉನ್ನತ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸ್ವಾಯತ್ತೆ ಸಾಧಿಸಲು ಲಾಭದಾಯಕವಲ್ಲದ ಕಂಪನಿಗಳಿಗೆ ಸಮನಾದ ಔದ್ಯೋಗಿಕ ಸಂಸ್ಥೆಯನ್ನು ಆರಂಭಿಸಲು ಅವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. ಜತೆಗೆ ಎಲ್ಲಾ ರಾಜ್ಯಗಳಲ್ಲಿ ಕೌಶಲ ವಿಶ್ವವಿದ್ಯಾಲಯಗಳು ಮತ್ತು ಉದ್ಯೋಗಶೀಲತಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಚಿಂತನೆಯನ್ನು ಅವರು ಕೇಂದ್ರ ಸರ್ಕಾರದ ಮುಂದಿರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry