ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

7

ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

Published:
Updated:

ಸಿನಿಮಾ ಎಂಬುದು ಇಪ್ಪತ್ತನೇ ಶತಮಾನದಲ್ಲಿ ತಂತ್ರಜ್ಞಾನ, ದೃಶ್ಯ-ಶಬ್ದ ಕಲೆಗಾರಿಕೆಯ ಹೆಣಿಗೆಯಲ್ಲಿ ಕಲಾಭಿವ್ಯಕ್ತಿಯಾಗಿಯೂ, ರಂಜನೆಯ ಮಾಧ್ಯಮವಾಗಿಯೂ ರೂಪ ಪಡೆಯಿತು. ಬೇರೆಲ್ಲಾ ಕಲಾಭಿವ್ಯಕ್ತಿ ಹಾಗೂ ರಂಜನೋದ್ಯಮಗಳಿಗಿಂತ ಹೆಚ್ಚು ವೇಗವಾಗಿ ಜಗತ್ತಿನಾದ್ಯಂತ ಹರಡಿಕೊಂಡು, ವಿಶ್ವಾತ್ಮಕ ಮಾಧ್ಯಮವಾಗಿ ಸಿನಿಮಾ ಬೆಳೆಯಿತು. ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುವ ಸಿನಿಮಾ ಪ್ರಯೋಗಗಳಿಗೆ ಸಂಕಲಿತ ಪ್ರದರ್ಶನವಾಗಿಯೂ, ಭಿನ್ನ ರಾಷ್ಟ್ರಗಳ ರಂಜನೋದ್ಯಮ ಸರಕುಗಳ ಪ್ರಸಾರಕ್ಕೆ ವ್ಯವಹಾರ ಕೇಂದ್ರವಾಗಿಯೂ ಕಾರ್ಯವೆಸಗಲು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಶುರುವಾದವು. ವೆನಿಸ್ (1932), ಕಾನ್ಸ್ (1946), ಬರ್ಲಿನ್ ಗಳಂತಹ (1951)ಖ್ಯಾತ ಸಿನಿಮೋತ್ಸವಗಳಿಂದ ಹಿಡಿದು ಇತ್ತೀಚಿನ ಮಹಿಳಾ ಕೇಂದ್ರಿತ- ಬಹುಲಿಂಗ ಕೇಂದ್ರಿತ ಚಿತ್ರೋತ್ಸವಗಳವರೆಗೆ ನೂರಾರು ಸಿನಿಮೋತ್ಸವಗಳು ಪ್ರತಿ ವರ್ಷ ಪ್ರಪಂಚದಾದ್ಯಂತ ನಡೆಯುತ್ತಿವೆ. ಪ್ರತಿಯೊಂದು ಸಿನಿಮೋತ್ಸವಕ್ಕೂ ತನ್ನದೇ ಆದ ನಿರ್ದಿಷ್ಟ  ಉದ್ದೇಶವಿದ್ದು, ಆಯಾ ಬಗೆಯ ಸಿನಿಮಾ ಪ್ರಯೋಗಗಳು ಹಾಗೂ ವೀಕ್ಷಕ ಅಭಿರುಚಿಗಳಿಗೆ ತಕ್ಕಂತೆ ಸಿನಿಮಾ ಆಯ್ಕೆ ಹಾಗೂ ಪ್ರದರ್ಶನಗಳು ನಡೆಯುತ್ತವೆ. ಅಂತರರಾಷ್ಟ್ರೀಯ ಮಟ್ಟದ ಈ ವಿದ್ಯಮಾನಗಳಿಗೆ ಸ್ಪಂದಿಸಿ, ಭಾರತದ ಕೇಂದ್ರ ಸರ್ಕಾರವೂ 1952ರಿಂದಲೇ ‘ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು’ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ. ಅದಕ್ಕಿಂತ ಭಿನ್ನ ಮಾದರಿಯಲ್ಲಿ ಕೋಲ್ಕತ್ತ  ಹಾಗೂ ಕೇರಳ ಅಂತರರಾಷ್ಟ್ರೀಯ ಸಿನಿಮೋತ್ಸವಗಳು ನಡೆಯುತ್ತಿದ್ದು, ತನ್ನದೇ ವಿಶಿಷ್ಟ ಆಸಕ್ತಿಯ ಪ್ರೇಕ್ಷಕ ವಲಯಗಳನ್ನು ಸೃಷ್ಟಿಸಿಕೊಳ್ಳುತ್ತಿವೆ. ಇಂತಹವುಗಳಲ್ಲಿ, 2006ರಲ್ಲಿ ಶುರುವಾದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ (ಇಂಗ್ಲಿಷ್ ಸಂಕ್ಷಿಪ್ತ ನಾಮ ‘ಬಿಫೆಸ್’)ಕೂಡ ಒಂದು. ‘ಬೆಂಗಳೂರಿಗೆ ಅಂತರರಾಷ್ಟ್ರೀಯ ಸಿನಿಮಾಗಳ ವೀಕ್ಷಣೆಗೆ ವೇದಿಕೆ ಒದಗಿಸುವುದು ಹಾಗೂ ಕನ್ನಡದ ಪ್ರಯೋಗಗಳಿಗೆ ಅಂತರರಾಷ್ಟ್ರೀಯ ಗಮನ ಸೆಳೆಯುವ ಅವಕಾಶ ಕಲ್ಪಿಸುವುದು’ ಎಂಬ ಈ ಸಿನಿಮೋತ್ಸವದ ಉದ್ದೇಶ ಧನಾತ್ಮಕವಾದದ್ದೇ. ಆದರೆ, ಇತರ ಅಂತರರಾಷ್ಟ್ರೀಯ ಸಿನಿಮೋತ್ಸವಗಳ ಹಾಗೆ ಈ ಉತ್ಸವವೂ ಮಹಾ ನಗರದ ಸುಶಿಕ್ಷಿತ ವರ್ಗದ ವೀಕ್ಷಣೆಗೆ ಸವಲತ್ತು ಒದಗಿಸುತ್ತಿತ್ತೇ ವಿನಾ, ಅದು ‘ಕರ್ನಾಟಕ ಅಂತರರಾಷ್ಟ್ರೀಯ ಸಿನಿಮೋತ್ಸವ’ ಆಗಿರಲಿಲ್ಲ. ಈ ಉತ್ಸವದ ವೇಳೆ, ಕರ್ನಾಟಕದ ಉಳಿದ ಭಾಗಗಳ ನಿಜ ಸಿನಿಮಾಸಕ್ತರು ಬಂದು ಪಾಲ್ಗೊಳ್ಳುವುದಕ್ಕೆ ಹಲವಾರು ಅಡೆತಡೆಗಳಿವೆ.

ಈ ಅಡೆತಡೆಗಳಲ್ಲಿ ಮೊದಲನೆಯದು: ಈ ಸಿನಿಮೋತ್ಸವದ ಆಯೋಜನೆ ನಡೆಯುವುದು, ಐದರಿಂದ ಹತ್ತು ಪ್ರದರ್ಶನಗಳನ್ನು ಏಕಕಾಲದಲ್ಲಿ ನಡೆಸಲು ಅನುಕೂಲವಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ. ಅವು ವ್ಯಾವಹಾರಿಕ ಮಾಲ್‌ಗಳಿರುವ ಪ್ರದೇಶಗಳಲ್ಲಿ ಇರುವುದರಿಂದ, ಹೊರ ಊರಿನಿಂದ ಬರುವವರಿಗೆ ಸುಲಭ ದರದ ವಸತಿ, ಊಟ-ತಿಂಡಿ ವ್ಯವಸ್ಥೆಗಳು ಲಭ್ಯವಿರುವುದಿಲ್ಲ. ಎಂಟು ದಿನ, ಪಟ್ಟು ಹಿಡಿದು ಅತ್ತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾಗಳ ಅನುಭವ ಪಡೆಯಬೇಕಾದರೆ, ಪ್ರದರ್ಶನ ನಡೆಯುವ ಕೇಂದ್ರಗಳಲ್ಲಿ ಕಾಲ್ನಡಿಗೆ ದೂರದಲ್ಲಿ ವಸತಿ, ಊಟ-ತಿಂಡಿಗಳ ವ್ಯವಸ್ಥೆ ಇರಬೇಕು. ಬೆಂಗಳೂರಲ್ಲಿ ಅಂತಹ ವಸತಿ, ಊಟೋಪಚಾರ ವ್ಯವಸ್ಥೆ ಅತಿ ದುಬಾರಿ. ಕಡಿಮೆ ದರದ ವಸತಿ ವ್ಯವಸ್ಥೆಗೆ ಅಂತಹ ಕೇಂದ್ರಗಳಿಂದ ಕನಿಷ್ಠ ಎಂಟತ್ತು ಮೈಲು ದೂರವಿರುವ ಪ್ರದೇಶಗಳನ್ನು ಹುಡುಕಿಕೊಳ್ಳಬೇಕು. ಅಂಥಲ್ಲಿಂದ ಬೆಳಗಿನ ಪ್ರದರ್ಶನಕ್ಕೆ ಹಲ್ಲು ಕಚ್ಚಿ ತಲುಪಬಹುದು. ಆದರೆ ರಾತ್ರಿಯ ಕೊನೆಯ ಪ್ರದರ್ಶನದ ನಂತರ ಹಾಸಿಗೆ ಸೇರಲು ಪಡಬೇಕಾದ ಪಾಡು ಅಷ್ಟಿಷ್ಟಲ್ಲ. ನೂರಾರು ರೂಪಾಯಿ ಬೆಲೆ ತೆತ್ತು ವಸತಿ ಸೇರುವುದು ದುಬಾರಿ ಎನಿಸಿದರೆ, ಕಡೆಯ ಎರಡು ಪ್ರದರ್ಶನಗಳನ್ನು ಎಷ್ಟೇ ಒಳ್ಳೆಯ ಸಿನಿಮಾಗಳಿದ್ದರೂ ಕಳೆದುಕೊಳ್ಳಬೇಕು. ಎಲ್ಲ ಅನುಕೂಲದ ಜೊತೆ ಪೂರ್ಣ ವೀಕ್ಷಣೆಯ ಅನುಭವ ಪಡೆಯಲು ಎಂಟು ದಿನಗಳಲ್ಲಿ ಕನಿಷ್ಠ ₹ 30-35 ಸಾವಿರ ಖರ್ಚು ಮಾಡಿಕೊಳ್ಳ ಬೇಕಾಗುತ್ತದೆ! ಅದೇ ಗೋವಾ ಸಿನಿಮೋತ್ಸವಕ್ಕೆ ಹೋದರೆ, ₹ 10-15 ಸಾವಿರದೊಳಗೆ ಹೊಂದಿಸಿಕೊಳ್ಳುವಂತಿರುತ್ತದೆ. ಈ ಕಾರಣವಾಗಿ ಬೆಂಗಳೂರು ಸಿನಿಮಾ ಹಬ್ಬವು, ಸ್ವಂತ ಸಾರಿಗೆ, ವಸತಿಯುಳ್ಳ ಬೆಂಗಳೂರು ವಾಸಿಗಳಿಗೆ ಅನುಕೂಲವೇ ಹೊರತಾಗಿ ಬಾಕಿ ಕರ್ನಾಟಕದವರಿಗೆ ದುಬಾರಿ ವ್ಯವಹಾರ.

ಇಂತಹ ಸನ್ನಿವೇಶದಲ್ಲಿ, 2016ರಲ್ಲಿ ಆಯೋಜಕರು, ನಿಜಕ್ಕೂ ಆರೋಗ್ಯಕರವಾದ ಬೆಳವಣಿಗೆಗೆ ನಾಂದಿ ಹಾಡಿದರು. ‘ಬಿಫೆಸ್’ನ ಕನಿಷ್ಠ 160 ಸಿನಿಮಾಗಳ ಪ್ರದರ್ಶನವನ್ನು ಮೈಸೂರಿನಲ್ಲಿ ಸಮಾನಾಂತರವಾಗಿ ಆಯೋಜಿಸುವ ಅವಕಾಶ ಮಾಡಿ ಕೊಟ್ಟರು. ಮೈಸೂರಿನಲ್ಲಿ ಹೊರ ಊರಿನವರು ಭಾಗವಹಿಸುವುದಕ್ಕೆ ಹಲವು ಅನುಕೂಲಗಳಿವೆ. ವಸತಿ, ಊಟ-ತಿಂಡಿ, ಪ್ರಯಾಣಗಳ ವೆಚ್ಚ ಬೆಂಗಳೂರಿಗಿಂತ ಕಡಿಮೆ. ಇದರ ಜೊತೆ, ಮೈಸೂರು ಹಾಗೂ ಆಸುಪಾಸಿನ ಊರುಗಳ ಶಿಕ್ಷಕರು, ವಿದ್ಯಾರ್ಥಿಗಳು ಅತಿ ಕಡಿಮೆ ಖರ್ಚಿನಲ್ಲಿ ಉತ್ತಮ ಸಿನಿಮಾಗಳ ಅನುಭವ ಪಡೆಯಬಹುದಾಯಿತು. ಇದಕ್ಕಿಂತ ಹೆಚ್ಚಾಗಿ ಮೈಸೂರಿನ ಹಿರಿಯ ನಾಗರಿಕರು ಹಾಗೂ ಆರೋಗ್ಯ ಸೂಕ್ಷ್ಮವಿರುವ ಜನರು, ವಿರಾಮದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಡಿಮೆ ಶ್ರಮದಲ್ಲಿ ಅಂತರರಾಷ್ಟ್ರೀಯ ಸಿನಿಮಾಗಳನ್ನು ನೋಡುವ ಭಾಗ್ಯ ಪಡೆದರು. 2016 ಮತ್ತು 2017ರಲ್ಲಿ ದಿನವೊಂದಕ್ಕೆ ಸರಾಸರಿ 600 ಜನ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಸಿನಿಮಾಗಳ ಅನುಭವ ಪಡೆದರು. ಅದು ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಯುಳ್ಳ ಮೈಸೂರಿಗೆ, ವ್ಯಾಪಾರ-ವ್ಯವಹಾರದ ನಗರಿ ಬೆಂಗಳೂರು ಸಲ್ಲಿಸಿದ ಕನಿಷ್ಠ ಗೌರವವಾಗಿತ್ತು. ಈ ವಿದ್ಯಮಾನಕ್ಕೆ ಆಯೋಜಕರ ಔದಾರ್ಯ ಮಾತ್ರವೇ ಕಾರಣವಾಗಿರಲಿಲ್ಲ. 2006ರಿಂದಲೇ ಮೈಸೂರಲ್ಲಿ ಬದ್ಧತೆಯುಳ್ಳ ಚಿತ್ರಸಮಾಜಗಳ ಕಾರ್ಯಚಟುವಟಿಕೆ ಶುರುವಾಗಿತ್ತು. 2016ರ ಹೊತ್ತಿಗೆ ಈ ಚಿತ್ರಸಮಾಜಗಳ ಕ್ರಿಯಾಶೀಲ ಚಟುವಟಿಕೆಯ ಕಾರಣವಾಗಿ ತಿಂಗಳಿಗೊಂದು ಸಾರಿ 200-300 ಜನ ಸಿನಿಮಾಸಕ್ತರು, ಕಲಾಭಿರುಚಿಯ ಅಂತರರಾಷ್ಟ್ರೀಯ ಸಿನಿಮಾಗಳ ಪ್ರೇಕ್ಷಕರಾಗುವಂತಹ ಫಲಪ್ರದ ವಾತಾವರಣ ನಿರ್ಮಾಣವಾಗಿತ್ತು.  ಈ ಭರವಸೆಯಲ್ಲೇ, ಮೈಸೂರಿನ ಚಿತ್ರಸಮಾಜಗಳ ಸಂಘಟಕರು, ‘ಬಿಫೆಸ್’ನ ಮೈಸೂರಿನ ಪ್ರದರ್ಶನಗಳನ್ನು ಸಂಘಟಿಸುವ ಜವಾಬ್ದಾರಿ ಹೊತ್ತುಕೊಂಡರು ಮತ್ತು ಎರಡು ವರ್ಷ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಪ್ರಯೋಗ ‘ಬಿಫೆಸ್‌’ಗೆ ಹೊಸ ಆಯಾಮವನ್ನು ದೊರಕಿಸಿಕೊಟ್ಟು, ಮಹಾನಗರ ಕೇಂದ್ರಿತ ‘ಅಂತರರಾಷ್ಟ್ರೀಯ ಸಿನಿಮಾ ಉತ್ಸವ’ದ ಫಲವನ್ನು ಹೆಚ್ಚು ನಗರ, ಪುಟ್ಟ ನಗರಗಳಿಗೆ ವಿಸ್ತರಿಸಬಹುದಾದ ಒಂದು ಮಾರ್ಗವನ್ನು ತೆರೆದು ತೋರಿತು. ಇದು ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ವನ್ನು ನೈಜ ‘ಕರ್ನಾಟಕ ಅಂತರಾಷ್ಟ್ರೀಯ ಸಿನಿಮೋತ್ಸವ’ವಾಗಿಸುವತ್ತ ಒಂದು ಪುಟ್ಟ ಫಲಪ್ರದ ಹೆಜ್ಜೆಯಾಗಿತ್ತು. ಎರಡು ವರ್ಷಗಳ ಸಿನಿಮೋತ್ಸವ ಆಯೋಜನೆಯ ಉತ್ಸಾಹಿತ ಅನುಭವದಲ್ಲಿ ಮೈಸೂರಿನ ಚಿತ್ರಸಮಾಜದ ಉತ್ಸಾಹಿಗಳು ಕಳೆದ ಎರಡು ವರ್ಷ ಯಶಸ್ವಿಯಾಗಿ ‘ದಸರಾ ಸಿನಿಮೋತ್ಸವ’ವನ್ನೂ ಆಯೋಜಿಸಿದ್ದರು. ಪ್ರಸ್ತುತ ಸರ್ಕಾರದ ಅನೇಕ ‘ಭಾಗ್ಯ ಯೋಜನೆ’ಗಳ ಹಾಗೆ, ಇದು ಒಂದು ಬಗೆಯ ‘ಸಿನಿಮಾ ಭಾಗ್ಯ’ ಯೋಜನೆ ಎಂದು ಮೆಚ್ಚುಗೆಯಿಂದ ಸಿನಿಮಾಭಿಮಾನಿಗಳು ಹೇಳಬಹುದಾದಷ್ಟು, ಮೈಸೂರಿನ ‘ಬಿಫೆಸ್’ಅನ್ನು ಸ್ಥಳೀಯ ಸಂಘಟಕರು ಸಾಧ್ಯ ಮಾಡಿದ್ದರು.  ಈ ವರ್ಷವೂ ಹೆಚ್ಚು ಹುಮ್ಮಸ್ಸಿನಲ್ಲಿ ಇದನ್ನು ಮುಂದುವರೆಸುವ ಉತ್ಸಾಹದಲ್ಲಿದ್ದರು.

ಆದರೆ, ಆಯೋಜಕರು ಯಾವ ಸಕಾರಣಗಳನ್ನೂ ಪ್ರಕಟಿಸದೇ, ‘ಬಿಫೆಸ್-2018’ರ ಮೈಸೂರು ಪ್ರದರ್ಶನವನ್ನು ಕೈದು ಮಾಡಿಬಿಟ್ಟಿದ್ದಾರೆ! ಸರ್ಕಾರದ ಧನಾತ್ಮಕ ಪ್ರಾಯೋಜಕತ್ವದಲ್ಲಿ ಮೊಳಕೆಯೊಡೆಯುತ್ತಿದ್ದ ‘ಅಂತರರಾಷ್ಟ್ರೀಯ ಸಿನಿಮೋತ್ಸವ’ದ ವಿಕೇಂದ್ರೀಕರಣ ಪ್ರಯೋಗವನ್ನು ಈ ಮೂಲಕ ಚಿಗುರಿನಲ್ಲೇ ಚಿವುಟಿ ಹಾಕಲಾಗಿದೆ. ಬೆಂಗಳೂರಿಗೆ ಹೋಲಿಸಿದರೆ, ಮೈಸೂರಿನಲ್ಲಿ ಪ್ರೇಕ್ಷಕರ ಸಂಖ್ಯೆ ಹತ್ತು ಪಟ್ಟು ಕಡಿಮೆ ಇದ್ದದ್ದೂ ಸರಿ; ಆಯ-ವ್ಯಯದ ವ್ಯಾಪಾರಿ ಲೆಕ್ಕಾಚಾರದಲ್ಲಿ, ಮೈಸೂರಿನ ಪ್ರದರ್ಶನ ಲುಕ್ಸಾನಿನ ಬಾಬತ್ತು ಎನ್ನುವುದು ಆಯೋಜಕರ ಲೆಕ್ಕಾಚಾರವೂ ಆಗಿರಬಹುದು. ಈ ಲೆಕ್ಕಾಚಾರದಲ್ಲಿ, ಸರ್ಕಾರಕ್ಕೆ ಸುಂಕ ಕೊಡುವ ಪ್ರತಿ ಸಿನಿಮಾಪ್ರೇಮಿಯೂ, ‘ನನ್ನ ಸುಂಕದಲ್ಲಿ ಬೆಂಗಳೂರಿನ ಮಹಾನಗರಿಗರಿಗೆ ಅತ್ತ್ಯುತ್ತಮ ಕಲೆಯ ಸವಲತ್ತೇಕೆ?’ ಎಂದು ಹತ್ತು ವರ್ಷ, ಛಿದ್ರ ಮನೋಭಾವದ ಪ್ರಶ್ನೆ ಕೇಳಿರಲಿಲ್ಲ. ‘ಅನ್ನ, ಆರೋಗ್ಯ, ಶಿಕ್ಷಣ ಭಾಗ್ಯ’ಗಳ ಕುರಿತು ಕರುಬುವ ಉಳ್ಳವರ ಕೇಡಿತನಕ್ಕೂ, ಮೈಸೂರಿನಿಂದ ‘ಅಂತರರಾಷ್ಟ್ರೀಯ ಸಿನಿಮಾ ಭಾಗ್ಯ’ವನ್ನು ಕೈದು ಮಾಡಿದ ಲೆಕ್ಕಾಚಾರಕ್ಕೂ, ಹೆಚ್ಚಿನ ವ್ಯತ್ಯಾಸವಿಲ್ಲ! ಇನ್ನೂ ಸಮಯ ಮಿಂಚಿಲ್ಲ. ಆಯೋಜನೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳು ಈ ಪ್ರಮಾದವನ್ನು ಸರಿಪಡಿಸಿ, ಮೈಸೂರು ಪ್ರದರ್ಶನಕ್ಕೆ ಅವಕಾಶ ಒದಗಿಸಬಹುದಾಗಿದೆ. ಅಯೋಜಕರು ಸರಿಯಾದ ಸಂಕಲ್ಪ ತೋರಬೇಕೆನ್ನುವುದು, ನನ್ನಂತಹ ನೂರಾರು ಸಿನಿಮಾಸಕ್ತರ ಬಲವಾದ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry