ಇಬ್ಬರ ಜಗಳದಲ್ಲಿ ಬಡವಾಯ್ತು ಅಫ್ಗಾನಿಸ್ತಾನ

7

ಇಬ್ಬರ ಜಗಳದಲ್ಲಿ ಬಡವಾಯ್ತು ಅಫ್ಗಾನಿಸ್ತಾನ

Published:
Updated:
ಇಬ್ಬರ ಜಗಳದಲ್ಲಿ ಬಡವಾಯ್ತು ಅಫ್ಗಾನಿಸ್ತಾನ

ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧ ಬಹಳ ಕಾಲದಿಂದ ಹಳಸುತ್ತಲೇ ಬಂದಿದೆ. ಹಾಗಾಗಿ ಇದನ್ನು ಬಣ್ಣಿಸಲು ಪರಿಣತರಲ್ಲಿ ರೂಪಕಗಳೇ ಇಲ್ಲ. ಬೇರ್ಪಡುವಿಕೆ, ವಿಚ್ಛೇದನ ಎಂದು ಹೇಳಲಾಗುತ್ತಿದ್ದರೂ ಬೆನ್ನಿಗೆ ಚೂರಿ ಹಾಕುತ್ತಿರುವ ಗೆಳೆಯರು ಎಂಬುದು ಮೆಚ್ಚಿನ ರೂಪಕವಾಗಿದೆ.

ಕೆಲವು ವರ್ಷಗಳ ಹಿಂದೆ ಹಿಲರಿ ಕ್ಲಿಂಟನ್‍ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಇಸ್ಲಾಮಾಬಾದ್‍ಗೆ ಭೇಟಿ ನೀಡಿದ್ದರು. ‘ದುಮ್ಮಾನದ ಅತ್ತೆಯಂತೆ ಅಮೆರಿಕ ಯಾಕೆ ವರ್ತಿಸುತ್ತಿದೆ’ ಎಂದು ಆಗ ಹಿಲರಿ ಅವರನ್ನು ಕೇಳಲಾಗಿತ್ತು. ‘ಪಾಕಿಸ್ತಾನದ ಜನರು ಯಾವ ರೀತಿ ಎಂದರೆ ಕೆಲವೇ ಸಾವಿರ ಡಾಲರ್‍ ಕೊಟ್ಟರೆ ಅವರು ತಮ್ಮ ತಾಯಿಯನ್ನೂ ಮಾರುತ್ತಾರೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದು ವರದಿಯಾಗಿತ್ತು. ಇದು ಜನರಿಗೆ ನೋವು ಉಂಟು ಮಾಡಿತ್ತು.

ಈ ನಿಸ್ಸಾರ ಹೋಲಿಕೆಗಳು ಮೂಲಭೂತವಾದ ಸತ್ಯಾಂಶಗಳನ್ನು ಅಡಗಿಸಿಡುತ್ತವೆ. ಈ ಎರಡು ದೇಶಗಳ (ಅಮೆರಿಕ ಮತ್ತು ಪಾಕಿಸ್ತಾನ) ನಡುವಣ ವಿಲಕ್ಷಣ ಸಂಬಂಧ ಅಫ್ಗಾನಿಸ್ತಾನ ಎಂಬ ದೇಶವನ್ನು ನಾಶ ಮಾಡಿದೆ. ಅಮೆರಿಕದ ವಾಣಿಜ್ಯ ಕೇಂದ್ರದ ಮೇಲೆ 9/11ರ ದಾಳಿ ನಡೆದ ನಂತರ ಅಫ್ಗಾನಿಸ್ತಾನದ ನಾಶ ಆರಂಭವಾಯಿತು ಎಂದು ತಜ್ಞರು ಹೇಳುತ್ತಾರೆ. ಆದರೆ ಅದು ಹಾಗಲ್ಲ. ಇದು ಆರಂಭವಾದದ್ದು 40 ವರ್ಷಗಳ ಹಿಂದೆ, 1979ರಲ್ಲಿ. ಅಮೆರಿಕದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಜನರಲ್‍ಗಳು, ಡಾಲರು ತುಂಬಿದ್ದ ಸೂಟ್‌ಕೇಸ್‌ಗಳ ಸೌದಿ ಗೆಳೆಯರ ಜತೆ ಸೇರಿ ಅಫ್ಗಾನಿಸ್ತಾನಕ್ಕೆ ಕಾಲಿಟ್ಟಾಗ ಇದು ಆರಂಭವಾಯಿತು. ಸೋವಿಯತ್‍ ಒಕ್ಕೂಟವನ್ನು ಮಣಿಸಿ ಕಮ್ಯುನಿಸಂ ಅನ್ನು ಸೋಲಿಸುವುದು ಇವರ ಕನಸಾಗಿತ್ತು.

ಸೋವಿಯತ್‍ ಒಕ್ಕೂಟದ ಮುಷ್ಟಿಯಿಂದ ಅಫ್ಗಾನಿಸ್ತಾನವನ್ನು ಬಿಡಿಸುವುದು ಇವರ ಘೋಷಿತ ಉದ್ದೇಶವಾಗಿತ್ತು. ಎರಡಕ್ಕೂ ಹೆಚ್ಚು ತಲೆಮಾರುಗಳಿಂದ ಅಫ್ಗನ್ನರು ಯುದ್ಧವನ್ನು ಬಿಟ್ಟು ಬೇರೇನನ್ನೂ ಕಂಡಿಲ್ಲ. ಈ ಎಲ್ಲ ವರ್ಷಗಳಲ್ಲಿ ತೋಳು ತಿರುಚುವುದು ಮತ್ತು ಕಾಲುಚೇಷ್ಟೆಗಳನ್ನು ಅಮೆರಿಕ ಮಾಡುತ್ತಲೇ ಬಂದಿದೆ. ಆದರೆ, ಈಗ, ವಂಚನೆಯನ್ನು ಮಾತ್ರ ಪ್ರತಿಫಲವಾಗಿ ಪಡೆಯುವುದಕ್ಕಾಗಿ ಪಾಕಿಸ್ತಾನಕ್ಕೆ ಕೋಟ್ಯಂತರ ಡಾಲರ್‌ಗಳನ್ನು ನೀಡಿ ಅಮೆರಿಕ ಮೋಸ ಹೋಗಿದೆ ಎಂದು ಆ ದೇಶದ ಈಗಿನ ಅಧ್ಯಕ್ಷ ಹೇಳುತ್ತಾರೆ. ಅಫ್ಗಾನಿಸ್ತಾನದಲ್ಲಿ ಯಾವುದೇ ನೆರವು ದೊರೆಯುತ್ತಿಲ್ಲ ಎಂದು ಹೇಳಿ ಪಾಕಿಸ್ತಾನಕ್ಕೆ ನೀಡುತ್ತಿರುವ ನೆರವು ನಿಲ್ಲಿಸಲು ಅಮೆರಿಕದ ಡೊನಾಲ್ಡ್‌ ಟ್ರಂಪ್‍ ಸರ್ಕಾರ ನಿರ್ಧರಿಸಿದೆ. ಆದರೆ ಇದು

ಅಫ್ಗಾನಿಸ್ತಾನದಲ್ಲಿ ನೆರವು ಪಡೆದುಕೊಳ್ಳುವುದಕ್ಕಾಗಿ

ಪಾಕಿಸ್ತಾನಕ್ಕೆ ನೆರವು ನೀಡುವಷ್ಟೇ ಕೆಟ್ಟ ನಿರ್ಧಾರ. ಹುಸಿ ಸೋಗನ್ನೇ ಇರಿಸಿಕೊಂಡು ಯುದ್ಧ ಮತ್ತೆಯೂ ಮುಂದುವರಿಯಲಿದೆ. ಪಾಕಿಸ್ತಾನವು ತನ್ನ ವಂಚನೆಯನ್ನು ‘ರಕ್ಷಣಾ ಹಿತಾಸಕ್ತಿ’ ಎಂಬ ವೇಷದ ಮರೆಯಲ್ಲಿ ಮರೆಸಿ ಇರಿಸಿರುವ  ರೀತಿಯಲ್ಲಿಯೇ ‘ಅಮೆರಿಕ ಬಹಳ ಮುಗ್ಧ‍’ ಎಂಬ ಮಿಥ್ಯೆಯ ಅಡಿಯಲ್ಲಿ ಡೊನಾಲ್ಡ್‌ ಟ್ರಂಪ್‍ ಅಡಗಿಕೊಳ್ಳುತ್ತಿದ್ದಾರೆ.

ಈ ನಾಲ್ಕೂ ದಶಕಗಳಲ್ಲಿ, ಶಾಶ್ವತವಾಗಿ ಯುದ್ಧ ಮಾಡುತ್ತಲೇ ಇರುವುದು ಅಂತಹ ಕೆಟ್ಟ ವಿಚಾರವೇನೂ ಅಲ್ಲ ಎಂದು ದೇಶವನ್ನು ನಂಬಿಸುವಲ್ಲಿ ಪಾಕಿಸ್ತಾನದ ಸೇನೆ ಯಶಸ್ವಿಯಾಗಿದೆ. ಪಾಕಿಸ್ತಾನ ಕೂಡ ಅಫ್ಗಾನಿಸ್ತಾನವಾಗುವ ಅಂಚಿನಲ್ಲಿದೆ ಎಂದು ಪರಿಣತರು ಹೇಳುವುದನ್ನು ಅವರು ತಲೆಗೆ ಹಾಕಿಕೊಳ್ಳುತ್ತಿಲ್ಲ. ಇದು ಇನ್ನೊಂದು ಅವಮಾನವಾಗಿದ್ದು ಎರಡೂ ದೇಶಗಳಿಗೆ ನೋವು ಉಂಟು ಮಾಡುತ್ತಿದೆ.

ಶಾಲೆಗಳು, ಮಸೀದಿಗಳು ಮತ್ತು ಚರ್ಚುಗಳನ್ನು ಪಾಕಿಸ್ತಾನದ ತಾಲಿಬಾನ್‍ ಸ್ಫೋಟಿಸಿದೆ; ರಾಜಕೀಯ ಕ್ಷೇತ್ರದ ಹಿರಿಯ ಮುಖಂಡರನ್ನು ಹತ್ಯೆ ಮಾಡಿದೆ. ಹೀಗೆ ಪಾಕಿಸ್ತಾನದಲ್ಲಿ ಸಾಕಷ್ಟು ರಕ್ತ ಹರಿದಿರುವುದಷ್ಟೇ ಅಲ್ಲ, ಇದು ಹೊಸದೊಂದು ಮನಸ್ಥಿತಿ ಸೃಷ್ಟಿಸುವುದಕ್ಕೂ ಕಾರಣವಾಗಿದೆ- ಸಣ್ಣ ನರಹತ್ಯೆಗಳು ಸಾಮಾನ್ಯ ಎಂಬುದಷ್ಟೇ ಅಲ್ಲ, ಅದನ್ನು ವೈಭವೀಕರಿಸುವ ಮನಸ್ಥಿತಿಯೂ ಸೃಷ್ಟಿಯಾಗಿದೆ. ಶಾಲಾ ಮಕ್ಕಳ ಸಾಮೂಹಿಕ ಹತ್ಯೆಯನ್ನು ಸಾಮೂಹಿಕ ತ್ಯಾಗ ಎಂದು ಕರೆಯಲಾಗಿದೆ. ತಮ್ಮ ಕೆಲಸಗಳಿಗೆ ಹೋಗುವ ನಾಗರಿಕರು ಸ್ಫೋಟದಲ್ಲಿ ಸತ್ತು ಹೋದಾಗ ಅವರು ಹುತಾತ್ಮರು ಎಂದು ಸಂಭ್ರಮಿಸಲಾಗಿದೆ. ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳಲಾದ ಇಸ್ಲಾಂನ ಮೂಲಭೂತವಾದಿ ವ್ಯಾಖ್ಯಾನ ಅಫ್ಗಾನಿಸ್ತಾನದಲ್ಲಿನ ಜಿಹಾದ್‍ ಸಂದರ್ಭದಲ್ಲಿ ಸ್ಪಷ್ಟ ರೂಪ ಪಡೆಯಿತು. ಇದು ಈಗ ಎಷ್ಟು ಸಹಜವಾಗಿದೆ ಎಂದರೆ, ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಪೌರರು ವಿರೋಧಿಸಿದರೆ ಅವರನ್ನು ಅಮೆರಿಕದ ಏಜೆಂಟ್‍ ಅಥವಾ ಕಾಫಿರ್‍ (ಇಸ್ಲಾಂ ವಿರೋಧಿ) ಎಂದು ಬಣ್ಣಿಸಲಾಗುತ್ತದೆ.

ಪಾಕಿಸ್ತಾನ ‘ಡಬಲ್‍ ಗೇಮ್‍’ ಆಡುತ್ತಿದೆ ಎಂದು ಅಮೆರಿಕನ್ನರು ಹೇಳುತ್ತಾರೆ; ಆದರೆ ಪಾಕಿಸ್ತಾನವು ತನ್ನದೇ ನಾಗರಿಕರ ಜತೆ ಆಡುತ್ತಿರುವ ಆಟವನ್ನು ಅವರು ನೋಡಬೇಕು.

ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಎಷ್ಟು ತ್ಯಾಗ ಸಹಿಸಿಕೊಳ್ಳಲಾಗಿದೆ ಎಂಬುದನ್ನು ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಸಂಸ್ಥೆಗಳು ಪಟ್ಟನೆ ಹೇಳುತ್ತವೆ. ‘ನಮ್ಮಲ್ಲಿ ಆಗಿರುವ ಸಾವು ನೋವನ್ನು ನೋಡಿ, ನಮಗೆ ಆಗಿರುವ ಆರ್ಥಿಕ ನಷ್ಟವನ್ನು ಗಮನಿಸಿ’ ಎಂದು ಪಾಕಿಸ್ತಾನವು ಅಮೆರಿಕಕ್ಕೆ ಹೇಳುತ್ತದೆ. ಆದರೆ, ತನ್ನದೇ ಜನರತ್ತ ತಿರುಗಿ, ‘ನಿಜವಾದ ಸಮಸ್ಯೆ ತಾಲಿಬಾನ್‍ ಅಲ್ಲ, ಅಮೆರಿಕ’ ಎಂದು ನಂಬಿಸುವ ಪ್ರಯತ್ನ ಮಾಡುತ್ತದೆ.

ತಾಲಿಬಾನ್‍ ಅನ್ನು ಬರಸೆಳೆದು ಅಪ್ಪಿಕೊಂಡ ಮರುದಿನ ಪಾಕಿಸ್ತಾನದ ಆಡಳಿತವು ಅಮೆರಿಕಕ್ಕೆ ಹೀಗೆ ಹೇಳುತ್ತದೆ: ‘ತಾಲಿಬಾನ್‍ ಮೇಲೆ ಬಾಂಬ್‍ ಹಾಕಲು ನೀವು ನಮ್ಮ ನೆಲೆಗಳನ್ನು ಉಪಯೋಗಿಸಬಹುದು. ಆದರೆ ದಯವಿಟ್ಟು ಅದನ್ನು ಜೋರಾಗಿ ಹೇಳಬೇಡಿ. ಯಾಕೆಂದರೆ, ತಾಲಿಬಾನ್‍ ನಮ್ಮ ನಿಜವಾದ ಗೆಳೆಯ ಎಂದು  ಜನರಿಗೆ ಹೇಳಿದ್ದೇವೆ. ನಿಮ್ಮ ವಿಮಾನ ಹಾರಾಟ ಆರಂಭಿಸುತ್ತಿದ್ದಂತೆಯೇ, ಕೆಲವು ಒಳ್ಳೆಯ ತಾಲಿಬಾನ್‍ಗಳಿಗೆ ಸುರಕ್ಷಿತವಾಗಿ ಅಡಗಿಕೊಳ್ಳಿ ಎಂದು ನಾವು ಹೇಳಿದರೆ ಅದನ್ನು ನಮ್ಮ ವಿರುದ್ಧ ಬಳಸಿಕೊಳ್ಳಬೇಡಿ’.

ಪಾಕಿಸ್ತಾನದ ಮೇಲೆ ಅಮೆರಿಕ ಅಥವಾ ಭಾರತ ದಾಳಿ ನಡೆಸಿದರೆ ನಾವು ಪಾಕಿಸ್ತಾನದ ಜತೆ ನಿಲ್ಲುತ್ತೇವೆ ಎಂದು ದೇಶದ ಮೇಲೆಯೇ ದಾಳಿ ನಡೆಸುತ್ತಿರುವ  ತಾಲಿಬಾನ್‌ನ ಕೆಲವರು ಹೇಳುತ್ತಾರೆ. 2011ರಲ್ಲಿ ಒಸಾಮಾ ಬಿನ್‌ ಲಾದೆನ್‌ನನ್ನು ಅಮೆರಿಕದ ಸೈನಿಕರು ಕೊಂದ ಬಳಿಕ ಈ ಸೈದ್ಧಾಂತಿಕ ಗೋಜಲು ಇನ್ನಷ್ಟು ಗೊಂದಲಮಯವಾಗಿದೆ. ಪಾಕಿಸ್ತಾನದಲ್ಲಿ ಬಂದು ಅಡಗಿಕೊಂಡ ಲಾಡೆನ್‌ ನಮ್ಮ ಸಾರ್ವಭೌಮತೆಯನ್ನು ಧಿಕ್ಕರಿಸಿದನೇ ಅಥವಾ ನಮ್ಮ ದೇಶಕ್ಕೆ ಬಂದು ಆತನನ್ನು ಕೊಂದ ಅಮೆರಿಕನ್ನರಿಂದ ನಮ್ಮ ಪರಮಾಧಿಕಾರದ ಉಲ್ಲಂಘನೆಯಾಗಿದೆಯೇ ಎಂಬುದು ಇನ್ನೂ ಜನರಿಗೆ ಸ್ಪಷ್ಟವಾಗಿಲ್ಲ. ಅಮೆರಿಕದ ಸೈನಿಕರ ಜತೆಗೆ ಪಾಕಿಸ್ತಾನದ ಸೇನೆಯೂ ಶಾಮೀಲಾಗಿತ್ತೇ ಅಥವಾ ಸೇನೆ ಅದಕ್ಷವೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಇದೆ. ಇವು ಎರಡೂ ಯಾಕೆ ಆಗಿರಬಾರದು?

ಆದರೆ, ಈ ಪ್ರಶ್ನೆ ಕೇಳಿದ ಪಾಕಿಸ್ತಾನೀಯರನ್ನು ಪೀಡಿಸ

ಲಾಗಿದೆ. ಸೇನೆಯು ದೇಶವನ್ನು ಹಲವಾರು ಬಾರಿ ವಿಷಮ ಪರಿಸ್ಥಿತಿಗೆ ದೂಡಿದೆ. ಹಾಗಾಗಿ ಎಂದೂ ಕೊನೆಯಾಗದ ಯುದ್ಧ ನಡೆಯುತ್ತಲೇ ಇರಬೇಕು ಎಂಬ ತರ್ಕವನ್ನು ಜನರು ಬಹುತೇಕ ಅಂತರಂಗಕ್ಕೆ ಇಳಿಸಿಕೊಂಡಿದ್ದಾರೆ.

ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧವನ್ನು ತನ್ನ ನೆರವು ಇಲ್ಲದೆ ಗೆಲ್ಲುವುದಕ್ಕೆ ಅಮೆರಿಕಕ್ಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಸೇನೆಯು ಭಾವಿಸಿದೆ. ಯಾರನ್ನೋ ನಿಯೋಜಿಸಿ ಅವರ ಮೂಲಕ ಅಫ್ಗಾನಿಸ್ತಾನವನ್ನು ನಿಯಂತ್ರಿಸಬಹುದು ಎಂಬ ಪುರಾತನವಾದ ಭ್ರಾಂತಿಯಲ್ಲಿಯೇ ಸೇನೆ ಇನ್ನೂ ಇದೆ. ಹಿಂದೆ ನಿಯೋಜನೆಗೊಂಡಿದ್ದವರು ಮತ್ತು ಈಗ ನಿಯೋಜಿಸಲಾಗಿರುವವರನ್ನು ಮುಂದೆ ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಸೇನೆಗೆ ಯಾವುದೇ ಅಂದಾಜು ಇಲ್ಲ.

ಪಾಕಿಸ್ತಾನದ ಹಾಗೆಯೇ ಅಮೆರಿಕ ಕೂಡ ಈ ಸಂಘರ್ಷದ ಗೀಳಿನಲ್ಲಿಯೇ ಇದೆ. ಇದೊಂದು ಶಾಶ್ವತ ವಿಯೆಟ್ನಾಂ. ಜಾಗತಿಕ ಶಕ್ತಿಯಾಗಿ ಅಮೆರಿಕದ ಸ್ಥಾನ ಮುಂದುವರಿಯಬೇಕಾದರೆ ಇನ್ನೊಂದು ಯುದ್ಧ ನಡೆಯುವುದು ಅಗತ್ಯ. ಈ ಎಲ್ಲ ವರ್ಷಗಳಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಕಾದಾಡಿದಾಗಲೆಲ್ಲ ಮುನ್ನೆಲೆಯಲ್ಲಿದ್ದ ವಿಷಯ– ನೀಡಿದ ಡಾಲರ್‌ಗಳ ಮೊತ್ತ ಎಷ್ಟು ಮತ್ತು ಎಷ್ಟು ಜನ ಕೆಟ್ಟವರನ್ನು ಕೊಲ್ಲಲಾಗಿದೆ ಎಂಬುದೇ ಆಗಿತ್ತು. ನರಕದಿಂದ ನಡೆಸುವ ಈ ಲೆಕ್ಕಾಚಾರದಲ್ಲಿ ಗೆಳೆಯರ ನಡುವೆ ನಡೆದ ಕೆಲವು ಸಾಮೂಹಿಕ ಹತ್ಯೆಗಳಿಗೆ ಏನು ಅರ್ಥ?

ಆಂತರಿಕ ನೀತಿಗೆ ಸಂಬಂಧಿಸಿ ಟ್ರಂಪ್‌ ಅವರು ತಲೆಕೆಟ್ಟವರಂತೆ ವರ್ತಿಸುತ್ತಾರೆ ಎಂದು ಅಮೆರಿಕದ ಕೆಲವು ಪಂಡಿತರು ಹೇಳುತ್ತಾರೆ. ಆದರೆ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ವಿಚಾರಕ್ಕೆ ಬಂದರೆ ಟ್ರಂಪ್‌ ಪರವಾಗಿಲ್ಲ ಎಂದು ಇಡೀ ಜಗತ್ತು ನಂಬಬೇಕು ಎಂದು ಈ ಪಂಡಿತರು ನಿರೀಕ್ಷಿಸುತ್ತಾರೆ. ಟ್ರಂಪ್‌ ಅವರಿಗಿಂತ ಹಿಂದಿನ ಅರ್ಧ ಡಜನ್‌ ಅಧ್ಯಕ್ಷರ ಹಾಗೆಯೇ ಟ್ರಂಪ್‌ ಕೂಡ ಜಗತ್ತಿನ ಈ ಭಾಗದ ಸಮಸ್ಯೆಯನ್ನು ಸರಿಪಡಿಸುತ್ತಾರೆ ಎಂಬುದು ಅವರ ನಂಬಿಕೆ.

ಈಗಿನ ಬಿಕ್ಕಟ್ಟಿನ ಪರಿಹಾರಕ್ಕೆ ತಮ್ಮ ಹೊಸ ಮಿತ್ರರಾಷ್ಟ್ರವಾದ ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸುವಂತೆ ಭಾರಿ ಬುದ್ಧಿವಂತ ಟ್ರಂಪ್‌ ಕೋರಬೇಕು ಎಂದು ಕೆಲವು ಪರಿಣತರು ಹೇಳಿದ್ದಾರೆ. ಪಾಕಿಸ್ತಾನದ ಮೇಲೆ ಸೌದಿ ಅರೇಬಿಯಾ ಹೊಂದಿರುವ ಪ್ರಭಾವ ಬಳಸಿ ಈ ಮಧ್ಯಸ್ಥಿಕೆ ನಡೆಯಲಿ ಎಂದೂ ಈ ಪಂಡಿತರು ಹೇಳುತ್ತಾರೆ. ಇದನ್ನು ಕಲ್ಪಿಸಿಕೊಳ್ಳಿ: ನಾಲ್ಕು ದಶಕದ ಬಳಿಕ, ಅಮೆರಿಕದ ಅಧ್ಯಕ್ಷ, ಸೌದಿಯ ರಾಜಕುಮಾರ ಮತ್ತು ಪಾಕಿಸ್ತಾನದ ಕೆಲವು ಜನರಲ್‌ಗಳು ಮತ್ತೆ ಅಫ್ಗಾನಿಸ್ತಾನದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಇದರಿಂದ ಏನು ತಪ್ಪು ಆಗಬಹುದು?

-ಮೊಹಮ್ಮದ್‌ ಹನೀಫ್‌

ಲೇಖಕ ಪಾಕಿಸ್ತಾನದ ಕಾದಂಬರಿಕಾರ ಮತ್ತು ಅಂಕಣಕಾರ

ದಿ ನ್ಯೂಯಾರ್ಕ್‌ ಟೈಮ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry