ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌

7

ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌

Published:
Updated:

ನವದೆಹಲಿ: ಆಧುನಿಕ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ದೇಶದ ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ಗಳನ್ನು ವಿತರಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ಸೇರಿದಂತೆ ಮಾಹಿತಿ– ಸಂವಹನ– ತಂತ್ರಜ್ಞಾನದ ಇನ್ನಿತರ ಸಲಕರಣೆಗಳನ್ನು ನೀಡುವ ಸಚಿವಾಲಯದ ನಿರ್ಧಾರಕ್ಕೆ ಕೇಂದ್ರದ ಶಿಕ್ಷಣ ಸಲಹಾ ಮಂಡಳಿಯು (ಸಿಎಬಿಇ) ಸೋಮವಾರ ನೀಡಿದ ಒಪ್ಪಿಗೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.  

‘ಆಪರೇಷನ್‌ ಡಿಜಿಟಲ್‌ ಬೋರ್ಡ್‌’ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿವೆ’ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಸಿಎಬಿಇಯೊಂದಿಗೆ ನಡೆದ ಸಭೆಯ ನಂತರ ಹೇಳಿದ್ದಾರೆ.

ಇದನ್ನು ಕಾರ್ಯರೂಪಕ್ಕೆ ತರಲು, ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ ಇಂಡಿಯಾ ಐಎನ್‌ಸಿ ಕಂಪನಿಯ ನೆರವು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದರ ಅನುಷ್ಠಾನಕ್ಕೆ, ಸಮುದಾಯ ಸಹಭಾಗಿತ್ವದ ಮೂಲಕವೂ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

‘ಶಿಕ್ಷಣದ ಗುಣಮಟ್ಟ ವೃದ್ಧಿಯಾಗಲು ಇದು ನೆರವಾಗಲಿದೆ. ಆಸಕ್ತಿಕರ ವಿಧಾನಗಳಿಂದ ಮಕ್ಕಳಿಗೆ ಎಲ್ಲ ರೀತಿಯ ಮಾಹಿತಿ ಒದಗಿಸುವುದು ಇದರ ಉದ್ದೇಶ. ಇದರಿಂದ ಶಿಕ್ಷಕರ ಹೊಣೆಗಾರಿಕೆ ಹೆಚ್ಚಾಗಲಿದೆ’ ಎಂದೂ ತಿಳಿಸಿದರು.

ಪೂರ್ವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೂ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ವಿಸ್ತರಿಸುವಂತೆ ಸಿಎಬಿಇ ಉಪಸಮಿತಿ ನೀಡಿದ್ದ ಶಿಫಾರಸುಗಳ ಅನುಷ್ಠಾನದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ಇದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಬೇಕು. ಆದ್ದರಿಂದ, ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

20 ರಾಜ್ಯಗಳ ಶಿಕ್ಷಣ ಸಚಿವರು ಹಾಗೂ ಇನ್ನುಳಿದ ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry