ಶುದ್ಧೀಕರಣ ಪ್ರಕ್ರಿಯೆ ಅಸಂಗತ ಪ್ರಹಸನ

7

ಶುದ್ಧೀಕರಣ ಪ್ರಕ್ರಿಯೆ ಅಸಂಗತ ಪ್ರಹಸನ

Published:
Updated:
ಶುದ್ಧೀಕರಣ ಪ್ರಕ್ರಿಯೆ ಅಸಂಗತ ಪ್ರಹಸನ

ನಟ ಪ್ರಕಾಶ್‍ ರೈ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಶಿರಸಿಯಲ್ಲಿನ ಮಠದ ಆವರಣ ಹಾಗೂ ಕಾರ್ಯಕ್ರಮದ ವೇದಿಕೆಯನ್ನು ಗೋಮೂತ್ರದಿಂದ ಶುದ್ಧೀಕರಿಸಿರುವ ಬಿಜೆಪಿ ಕಾರ್ಯಕರ್ತರ ನಡವಳಿಕೆ ಹಾಗೂ ಕರ್ನಾಟಕದವರನ್ನು ಹರಾಮಿಗಳು ಎಂದು ಕರೆದಿರುವ ಗೋವಾ ಸಚಿವರ ಅನಾಗರಿಕ ಮಾತು ನಮ್ಮ ರಾಜಕಾರಣ ಸಾಗಿರುವ ಅವನತಿಯ ದಿಕ್ಕನ್ನು ಸೂಚಿಸುವಂತಿದೆ. ಅಸಂಗತ ಪ್ರಹಸನದಂತಿರುವ ಈ ಎರಡು ಪ್ರಕರಣಗಳು, ಸಾಮಾಜಿಕ ಜೀವನದಲ್ಲಿ ಶಾಂತಿಯನ್ನು ಬಯಸುವವರಿಗೆ ಆಘಾತವನ್ನು ಉಂಟುಮಾಡುವಂತಹವು. ಶಿರಸಿಯ ರಾಘವೇಂದ್ರ ಮಠದಲ್ಲಿ ನಡೆದಿದ್ದ ‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿಯು ಏರ್ಪಡಿಸಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಕಾಶ್‍ ರೈ, ಸಂವಿಧಾನ ಬದಲಾಯಿಸುವ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿದ ಹೇಳಿಕೆಯನ್ನು ಟೀಕಿಸಿದ್ದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ‘ಗೋಮಾಂಸ ಸೇವಿಸುವ ಹಾಗೂ ಹಿಂದೂ ದೇವರುಗಳನ್ನು ಅಪಮಾನಿಸುವ ವ್ಯಕ್ತಿಯ ಭೇಟಿಯಿಂದ ಶಿರಸಿ ನಗರವೇ ಅಪವಿತ್ರ

ವಾಗಿದೆ’ ಎಂದು ಶುದ್ಧೀಕರಣ ಪಡೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಇದೆಲ್ಲ ಘಟನೆಗೆ ಕಾರಣವಾದ ಸೋಗಲಾಡಿ ಬುದ್ಧಿಜೀವಿಯನ್ನು ಹಿಂದೂ ಸಮಾಜ ಎಂದೂ ಕ್ಷಮಿಸದು ಎಂದು ಹೇಳಿದ್ದಾರೆ. ಭಿನ್ನವಾದ ವಿಚಾರಗಳನ್ನು ಪ್ರತಿಪಾದಿಸುವವರನ್ನು ಸ್ವಘೋಷಿತ ಬುದ್ಧಿಜೀವಿಗಳು, ಸೋಗಲಾಡಿಗಳು ಹಾಗೂ ಎಡಬಿಡಂಗಿಗಳು ಎಂದು ಹೀಗಳೆಯುವುದು ಧರ್ಮ-ಸಂಸ್ಕೃತಿ ರಕ್ಷಕರ ಬೀಸುಹೇಳಿಕೆಯಾಗಿದೆ. ಹಿಂದೂ ಸಮಾಜದ ಗುತ್ತಿಗೆ ವಹಿಸಿಕೊಂಡಂತೆ ಮಾತನಾಡುವುದು ಕೂಡ ಸ್ವಘೋಷಿತ ಯಜಮಾನಿಕೆ ಹಾಗೂ ಎಡಬಿಡಂಗಿತನವೇ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ. ಊರುಕೇರಿಗಳಲ್ಲಿನ ಹೊಲಸಿನ ಬಗ್ಗೆ ತಲೆ ಕೆಡಿಸಿಕೊಳ್ಳದವರು ಆಹಾರ ಹಾಗೂ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಮಾತ್ರ ಶುದ್ಧಿಯನ್ನು ಬಯಸುವುದು ಸೋಗಲಾಡಿತನವಲ್ಲದೆ ಇನ್ನೇನು?

‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಘೋಷಣೆಯಡಿ ನಡೆದಿದ್ದ ‘ಚಲೋ ಉಡುಪಿ’ ಕಾರ್ಯಕ್ರಮದ ಸಂದರ್ಭದಲ್ಲೂ ಊರನ್ನು ಶುದ್ಧಗೊಳಿಸುವ ಪ್ರಕ್ರಿಯೆ ನಡೆದಿತ್ತು. ದಲಿತರ ಪ್ರವೇಶದಿಂದಾಗಿ ಉಡುಪಿ ಮೈಲಿಗೆಯಾಗಿದೆ ಎಂದು ಕೆಲವರು ಹುಯಿಲೆಬ್ಬಿಸಿದ್ದರು. ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಸೇವಿಸಿದ ಹಿನ್ನೆಲೆಯಲ್ಲಿ ಅದನ್ನು ಗೋಮೂತ್ರ ಸಿಂಪಡಿಸಿ ಪವಿತ್ರಗೊಳಿಸಲಾಗಿತ್ತು. ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಮುಸ್ಲಿಮರಿಗೆ ಇಫ್ತಾರ್‍ ಕೂಟ ಏರ್ಪಡಿಸಿದ್ದು ಕೂಡ ಅಶುದ್ಧಿಯ ಕೂಗಿಗೆ ಕಾರಣವಾಗಿತ್ತು. ಶುದ‍್ಧಿ ಅಥವಾ ಪಾವಿತ್ರ್ಯದ ಹೆಸರಿನಲ್ಲಿ ನಡೆಯುವ ಇಂಥ ಕ್ರಿಯೆಗಳು ನಮ್ಮ ಅಂತರಂಗದ ಕೊಳಕನ್ನು ಅನಾವರಣಗೊಳಿಸುವ ಪ್ರಯತ್ನಗಳಾಗಿರುತ್ತವೆ. ಈ ಶುದ್ಧೀಕರಣ ಪ್ರಕ್ರಿಯೆಯೇ ಒಂದು ಅಶುದ್ಧಕ್ರಿಯೆಯಂತಿದೆ.

ಅಂತರಂಗ ಶುದ‍್ಧಿ ಇಂದಿನ ಅಗತ್ಯವಾಗಿದ್ದು, ಇದನ್ನು ಮಾನವೀಯ ನಡವಳಿಕೆಯಿಂದ ಸಾಧಿಸಬಹುದೇ ಹೊರತು ಗೋಮೂತ್ರದ ಸಿಂಪಡಿಕೆಯಿಂದಲ್ಲ. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಾತನಾಡಿರುವ ಗೋವಾದ ಜಲಸಂಪನ್ಮೂಲ ಸಚಿವ ಪಾಲ್ಯೇಕರ್‍ ಅವರು, ಕರ್ನಾಟಕದವರನ್ನು ಹರಾಮಿಗಳು ಎಂದು ಜರೆದಿರುವುದನ್ನು ಕೂಡ ಅನಾಗರಿಕತೆಯ ಹಿನ್ನೆಲೆಯಲ್ಲಿಯೇ ನೋಡಬೇಕು. ಪ್ರಜಾಪ್ರತಿನಿಧಿಗಳು ಪಾಲಿಸಬೇಕಾದ ಶಿಷ್ಟಾಚಾರದ ಜೊತೆಗೆ, ಮಾತಿನ ಘನತೆಯ ಪಾಠವನ್ನು ಕೀಳು ಅಭಿರುಚಿಯ ಸಚಿವರಿಗೆ ಹೇಳಿಕೊಡಬೇಕಾಗಿದೆ. ಎರಡು ರಾಜ್ಯಗಳ ನಡುವಣ ಬಿಕ್ಕಟ್ಟನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿಗಳು ಸಂಯಮ, ಪ್ರಬುದ್ಧತೆ ಹಾಗೂ ವಿವೇಕವನ್ನು ಪ್ರದರ್ಶಿಸುವುದು ಅಗತ್ಯ. ಆದರೆ, ತಮ್ಮ ಜವಾಬ್ದಾರಿಯನ್ನೇ ಮರೆತು ನಾಲಿಗೆ ಸಡಿಲಬಿಡುವ ವ್ಯಕ್ತಿಗಳು ಸಚಿವ ಸ್ಥಾನಕ್ಕೆ ಅಯೋಗ್ಯರಾದವರು. ಮನುಷ್ಯರಾಗಿ ಬಾಳುವುದನ್ನು ನಾವು ಕಲಿಯಬೇಕೇ ಹೊರತು, ಮನುಷ್ಯರ ನಡುವೆ ಗೋಡೆಗಳನ್ನು ಸೃಷ್ಟಿಸುವುದಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry