ರಂಭಾಪುರಿ ಸ್ವಾಮೀಜಿ ಹೇಳಿಕೆ ಹಿಂಪಡೆಯಲು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹ

7

ರಂಭಾಪುರಿ ಸ್ವಾಮೀಜಿ ಹೇಳಿಕೆ ಹಿಂಪಡೆಯಲು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹ

Published:
Updated:
ರಂಭಾಪುರಿ ಸ್ವಾಮೀಜಿ ಹೇಳಿಕೆ ಹಿಂಪಡೆಯಲು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹ

ಸುತ್ತೂರು (ಮೈಸೂರು): ‘ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ವಿಚಾರ ಇಂದು, ನಿನ್ನೆಯದಲ್ಲ. 12ನೇ ಶತಮಾನದಲ್ಲೇ ಹುಟ್ಟಿಕೊಂಡಿದೆ. ಈ ವಿಚಾರವಾಗಿ ರಂಭಾಪುರಿ ಮಠದ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಸಮಂಜಸವಲ್ಲ’ ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಸುತ್ತೂರಿನಲ್ಲಿ ಜಾತ್ರೆ ಅಂಗವಾಗಿ ಮಂಗಳವಾರ ನಡೆದ ಕೃಷಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಕೆಲ ಸ್ವಯಂಘೋಷಿತ ಮಠಾಧೀಶರು ಬಸವಣ್ಣನನ್ನು ಗುತ್ತಿಗೆ ಪಡೆದವರಂತೆ ಇಡೀ ವ್ಯವಸ್ಥೆಯನ್ನೇ ಕೆಡಿಸುತ್ತಿದ್ದಾರೆ. ಧರ್ಮವನ್ನು ಒಡೆಯುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿಕೆ ನೀಡಿರುವುದು ಸರಿಯಲ್ಲ. ತಕ್ಷಣ ತಮ್ಮ ಹೇಳಿಕೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಸದ್ಯ ನಡೆಯುತ್ತಿರುವ ಹೋರಾಟ ಧರ್ಮ ಸ್ಥಾಪನೆಗೆ ಅಲ್ಲ. ಲಿಂಗಾಯತವು ಅಲ್ಪಸಂಖ್ಯಾತ ಧರ್ಮವಾದರೆ ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಸೌಲಭ್ಯಗಳು ಸಿಗುತ್ತವೆ ಎಂಬ ಕಾರಣಕ್ಕೆ ಹೋರಾಟ ನಡೆದಿದೆ. ಸರ್ಕಾರ ಒಪ್ಪಲಿ ಬಿಡಲಿ; ಇದು ಬಸವಣ್ಣನವರಿಂದ ಸ್ಥಾಪಿತವಾದ ಧರ್ಮ. ಅದನ್ನೇ ನಾವು ಪ್ರತಿಪಾದಿಸುತ್ತಿದ್ದೇವೆ ಹೊರತು; ಯಾರಿಂದಲೂ ಧರ್ಮ ಒಡೆಯುವ ಕೆಲಸ ನಡೆದಿಲ್ಲ’ ಎಂದು ಹೇಳಿದರು.

‘ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹುಟ್ಟುಹಾಕಿದರು. ಲಿಂಗಾಯತ ಧರ್ಮ ಹಾಗೂ ಶರಣ ಸಾಹಿತ್ಯ ಕೂಡ ಇಲ್ಲಿ ನೆಲೆ ಕಂಡುಕೊಂಡಿದೆ. ಇಂತಹ ಕ್ಷೇತ್ರದಲ್ಲೇ ರಂಭಾಪುರಿ ಸ್ವಾಮೀಜಿ ವೈರುಧ್ಯದ ಮಾತನಾಡಿದ್ದಾರೆ. ಇದರಿಂದ ಸಮಾಜಕ್ಕೆ, ಉಳಿದ ಮಠಾಧೀಶರಿಗೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೂ ಮತ್ತಿತರ ಧರ್ಮಗಳಲ್ಲಿ ಇದ್ದ ಅಸಮಾನತೆ, ಅಮಾನವೀಯ ಪದ್ಧತಿ, ಕಂದಾಚಾರಗಳನ್ನು ಬಸವಾದಿ ಶರಣರು ವಿರೋಧಿಸಿದ್ದರು. ಯಜ್ಞ– ಯಾಗಾದಿಗಳನ್ನು ತೊರೆದರು. ಇದೆಲ್ಲದರ ಫಲವೇ ಲಿಂಗಾಯತ ಧರ್ಮದ ಉದಯ’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry