ಕಠಿಣ ಹಾದಿಯಲ್ಲಿ ಭಾರತದ ಹೋರಾಟ

7

ಕಠಿಣ ಹಾದಿಯಲ್ಲಿ ಭಾರತದ ಹೋರಾಟ

Published:
Updated:
ಕಠಿಣ ಹಾದಿಯಲ್ಲಿ ಭಾರತದ ಹೋರಾಟ

ಸೆಂಚೂರಿಯನ್: ದಕ್ಷಿಣ ಆಫ್ರಿಕಾದ ನೆಲದಲ್ಲಿ ಗೆಲುವಿನ ಸಿಹಿ ಸವಿಯುವ ಭಾರತ ತಂಡದ ಕನಸಿಗೆ ಪದಾರ್ಪಣೆ ಪಂದ್ಯ ಆಡುತ್ತಿರುವ ಲಂಗಿ ಗಿಡಿ (14ಕ್ಕೆ2) ಅಡ್ಡಿಯಾದರು.

ಮಂಗಳವಾರ ಸಂಜೆ 287 ರನ್‌ಗಳ ಗುರಿ ಬೆನ್ನತ್ತಿದ ತಂಡವು ದಿನದಾಟದ ಕೊನೆಗೆ 25 ಓವರ್‌ಗಳಲ್ಲಿ 35 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕ ‌ಆಟಗಾರ ಕೆ.ಎಲ್. ರಾಹುಲ್ (4) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ನಾಯಕ ವಿರಾಟ್ ಕೊಹ್ಲಿ (5 ರನ್) ಅವರನ್ನು ಗಿಡಿ ತಮ್ಮ ಸ್ವಿಂಗ್ ಬಲೆಗೆ ಸೆಳೆದುಕೊಂಡರು. ಕಗಿಸೊ ರಬಾಡ ಅವರಿಗೆ ಮುರಳಿ ವಿಜಯ್ ವಿಕೆಟ್  ಒಪ್ಪಿಸಿದರು.

ತಾಳ್ಮೆಯಿಂದ ಆಡುತ್ತಿರುವ ಚೇತೇಶ್ವರ್ ಪೂಜಾರ(ಬ್ಯಾಟಿಂಗ್ 11) ಮತ್ತು ಪಾರ್ಥಿವ್ ಪಟೇಲ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ. ವೇಗಿಗಳ ಕೈಯಿಂದ ಬಿಡುಗಡೆಯಾಗುವ ಚೆಂಡು ಚುರುಕಾಗಿ ಪುಟಿಯುತ್ತಿರುವ ಪಿಚ್‌ನಲ್ಲಿ ಸ್ವಲ್ಪಲಯ ತಪ್ಪಿದರೂ ವಿಕೆಟ್ ಬೀಳುವುದು ಖಚಿತ.

ಆದ್ದರಿಂದ ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾದ ಒತ್ತಡ ಭಾರತದ ಮುಂದಿದೆ. ರಬಾಡ. ಗಿಡಿ ಮತ್ತು ಮಾರ್ನ್‌ ಮಾರ್ಕೆಲ್ ಎಸೆತಗಳು ಶರವೇಗದಿಂದ ಸ್ಪಂಪ್‌ನತ್ತ ನುಗ್ಗುತ್ತಿರುವುದರಿಂದ ಕೊಹ್ಲಿ ಬಳಗದ ಹಾದಿ ಕಠಿಣವಾಗಿದೆ.

ಶಮಿ ಮಿಂಚು: ಎರಡನೇ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಇಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊಹಮ್ಮದ್ ಶಮಿ (49ಕ್ಕೆ4) ಕಡಿವಾಣ ಹಾಕಿದರು. ಇದರಿಂದಾಗಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗಳಿಗೆ ಆಲೌಟ್ ಆಯಿತು. ಆದರೂ  ಎಬಿ ಡಿವಿಲಿಯರ್ಸ್ (80 ರನ್) ಮತ್ತು ಫಾಫ್ ಡು ಪ್ಲೆಸಿ (48 ರನ್) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.ಡುಪ್ಲೆಸಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಕೊನೆಯ ಹಂತದಲ್ಲಿ ವೆರ್ನಾನ್ ಫಿಲ್ಯಾಂಡರ್ (26 ರನ್) ಕೂಡ ಬೌಲರ್‌ಗಳನ್ನು ಕಾಡಿದರು.

ಜಸ್‌ಪ್ರೀತ್ ಬೂಮ್ರಾ (70ಕ್ಕೆ3) ಮತ್ತು ಇಶಾಂತ್ ಶರ್ಮಾ (40ಕ್ಕೆ2) ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry