‘ಬಿಜೆಪಿಯೇ ದೊಡ್ಡ ನಾಟಕ ಕಂಪನಿ’

7

‘ಬಿಜೆಪಿಯೇ ದೊಡ್ಡ ನಾಟಕ ಕಂಪನಿ’

Published:
Updated:

ಚಿಕ್ಕಬಳ್ಳಾಪುರ: ‘ಬಿಜೆಪಿಯೇ ದೊಡ್ಡ ನಾಟಕ ಕಂಪೆನಿ. ಪ್ರಧಾನಿ ಮೋದಿ ಅದರ ಮಾಲೀಕ. ಪಕ್ಷದ ಅಧ್ಯಕ್ಷ ಅಮಿತ್‌ ಶಾ ಮ್ಯಾನೇಜರ್, ಕರ್ನಾಟಕ ಮತ್ತು ಗೋವಾದಲ್ಲಿರುವ ಮುಖಂಡರು ಪಾತ್ರಧಾರಿಗಳು. ಇವರಲ್ಲೇ ಕೆಲವರಿಗೆ ಹೀರೊ, ಹೀರೊಯಿನ್ ಮತ್ತು ಜೋಕರ್ ಪಾತ್ರವನ್ನೂ ಕೊಟ್ಟಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹದಾಯಿ ವಿವಾದ ವಿಚಾರದಲ್ಲಿ ಯಡಿಯೂರಪ್ಪ ‘ಉತ್ತರಕುಮಾರನ ಪೌರುಷ ಒಲೆ ಮುಂದೆ’ ಎನ್ನುವಂತೆ ವರ್ತಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ರೈತರಿಗೆ ಯಾವುದೇ ಅನುಕೂಲ ಮಾಡಿಸಲಿಲ್ಲ. ಇದೀಗ ಇವರ ಯೋಗ್ಯತೆ ರಾಜ್ಯದ ಜನರಿಗೆ ಗೊತ್ತಾಗಿದೆ. ಬಿಜೆಪಿಯವರು ಇವತ್ತು ತಾವು ಬೈಯಿಸಿಕೊಳ್ಳುವುದಲ್ಲದೆ ಕರ್ನಾಟಕದವರನ್ನು ಬೈಯಿಸಿದ್ದಾರೆ’ ಎಂದು ಆರೋಪ ಮಾಡಿದರು.

‘ಮಹದಾಯಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಗೋವಾ, ಮಹಾರಾಷ್ಟ್ರ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ನ್ಯಾಯಮಂಡಳಿಯು ಸಲಹೆ ನೀಡಿದೆ. ಈ ವಿಚಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ಗೋವಾ ಮತ್ತು ಮಹಾರಾಷ್ಟ್ರದವರು ಸಹಕರಿಸುತ್ತಿಲ್ಲ. ಅವರಿಗೆ ಸಂಧಾನ ಇಷ್ಟವಿಲ್ಲದಿದ್ದರೆ ಅದನ್ನಾದರೂ ಹೇಳಲಿ. ಮುಂದಿನ ತೀರ್ಮಾನ ನ್ಯಾಯಮಂಡಳಿ ಕೈಗೊಳ್ಳುತ್ತದೆ’ ಎಂದು ಹೇಳಿದರು.

‘ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಅವರು ಕರ್ನಾಟಕದ ಜನರ ವಿರುದ್ಧ ಕೆಟ್ಟ ಪದ ಬಳಸುತ್ತಾರೆ. ನಾವು ಅವರಿಗಿಂತಲೂ ಕೆಟ್ಟದಾಗಿ ಮಾತನಾಡಬಹುದು. ಆದರೆ ನಾವು ಹಾಗೆ ಮಾಡಲ್ಲ. ಮುಖ್ಯಮಂತ್ರಿ ಪರ್ರೀಕರ್ ತಮ್ಮ ಸಚಿವರಿಗೆ ಬುದ್ಧಿ ಹೇಳಬೇಕಿತ್ತು. ಆದರೆ ಅವರೇ ಈ ರೀತಿ ಮಾತನಾಡಿ ಎಂದು ಹೇಳಿದ್ದಾರೋ ಯಾರಿಗೆ ಗೊತ್ತು? ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಈ ವಿಚಾರದಲ್ಲಿ ಅವರು ಮೌನ ಮುರಿಯುತ್ತಿದ್ದರು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry