ಇಂದಿರಾ ಕ್ಯಾಂಟೀನ್‌ ರೀತಿ ಮರಳು ವಿತರಿಸಿ

7

ಇಂದಿರಾ ಕ್ಯಾಂಟೀನ್‌ ರೀತಿ ಮರಳು ವಿತರಿಸಿ

Published:
Updated:
ಇಂದಿರಾ ಕ್ಯಾಂಟೀನ್‌ ರೀತಿ ಮರಳು ವಿತರಿಸಿ

ಬೆಂಗಳೂರು: ‘ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿ ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

‘ಮರಳು ಮಾರಾಟವನ್ನು ಖಾಸಗಿಯವರ ಹಿಡಿತದಿಂದ ತಪ್ಪಿಸಬೇಕು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯ ವಿತರಿಸುವ  ಹಾಗೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ವಿತರಿಸುವ ಮಾದರಿಯಲ್ಲಿಯೇ ಮರಳು ಮಾರಾಟವನ್ನೂ ಸರ್ಕಾರಿ ಡಿಪೊಗಳಲ್ಲಿ ವಿತರಿಸಬೇಕು’ ಎಂದೂ ಸಲಹೆ ನೀಡಿದೆ.

ಹಾವೇರಿ ಜಿಲ್ಲೆಯ ಕಲ್ಲಿಹಾಳ್‌ನ ವನಜಾಕ್ಷಿ ಎಂಬುವರು, ಸರ್ಕಾರದ ವತಿಯಿಂದ ನಡೆಸಿದ್ದ ಮರಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ‘ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಲಾಗಿದ್ದರೂ ನನ್ನ ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಆರೋಪಿಸಿ ವನಜಾಕ್ಷಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮಂಗಳವಾರ ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಮರಳು ನೀತಿಯಯನ್ನು ತರಾಟೆ ತೆಗೆದುಕೊಂಡ ನ್ಯಾಯಪೀಠ, ‘ಸರ್ಕಾರಕ್ಕೆ ಇಲಾಖೆಯನ್ನು ನಡೆಸುವುದು ಗೊತ್ತಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿತು.

‘ಸರ್ಕಾರಕ್ಕೆ ಮೆದುಳು ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಇದು ಸೂಕ್ತ ಜ್ಞಾನವಿಲ್ಲದೆ ರೂಪಿಸಿರುವ ನೀತಿ. ನಮ್ಮ ಜೀವಮಾನದಲ್ಲಿಯೇ ಇಂತಹ ಪ್ರಕರಣವನ್ನು ನೋಡಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸಂಜೆ ವಿಚಾರಣೆಗೆ ಹಾಜರಾಗಿ ಸಮಜಾಯಿಷಿ ನೀಡಲು ಮುಂದಾದರು. ಆದರೆ, ಅವರನ್ನು ಮಧ್ಯದಲ್ಲಿಯೇ ತಡೆದ ನ್ಯಾಯಪೀಠ, ‘ನೀವು ನೇರವಾಗಿ ಕೋರ್ಟ್‌ಗೆ ಏನೂ ಹೇಳಬೇಡಿ. ನಿಮ್ಮ ಸರ್ಕಾರಿ ವಕೀಲರ ಮೂಲಕ ತಿಳಿಸಿ’ ಎಂದು ತಾಕೀತು ಮಾಡಿತು.

‘ಜಗತ್ತಿನ ಯಾವುದೇ ದೇಶದಲ್ಲಾದರೂ ಇಂತಹ ಮರಳು ನೀತಿ ಕಂಡಿದ್ದೀರಾ, ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಕೂಗಿದರೂ, ಅದನ್ನು ಸ್ವೀಕರಿಸಲು ಸರ್ಕಾರಕ್ಕೆ ಏನು ಅಡ್ಡಿಯಿದೆ, ಹೆಚ್ಚು ಹಣ ನೀಡುತ್ತೀವೆಂದರೂ ಟೆಂಡರ್ ಏಕೆ ನಿರಾಕರಿಸಲಾಗುತ್ತಿದೆ’ ಎಂದು ನ್ಯಾಯಪೀಠ ಕಟುವಾಗಿ ಪ್ರಶ್ನಿಸಿತು.

‘ನಿಜವಾಗಿಯೂ ಜನರಿಗೆ ಒಳ್ಳೆಯದಾಗಬೇಕು ಹಾಗೂ ಎಲ್ಲರಿಗೂ ಮರಳು ಸಿಗಬೇಕು ಎಂಬ ಸದುದ್ದೇಶ ಸರ್ಕಾರಕ್ಕೆ ಇದ್ದರೆ ಇಂದಿರಾ ಕ್ಯಾಂಟೀನ್ ಹಾಗೂ ನ್ಯಾಯಬೆಲೆ ಅಂಗಡಿ ಮಾದರಿಯಲ್ಲಿ ಡಿಪೊ ಆರಂಭಿಸಿ ಮರಳು ವಿತರಣೆ ಮಾಡಿ’ ಎಂದು ನ್ಯಾಯಪೀಠ ಸಲಹೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry