ವಿಶ್ವದ ಯೋಶೋಗಾಥೆಯಾದ ಕೊಪ್ಪಳದ ತ್ರಿವಳಿಗಳು !

7
‘ ಕಾಂಗರು ಮದರ್‌ ಕೇರ್‌’ನಿಂದ ಬದುಕಿದ ಹೆಣ್ಣು ಮಕ್ಕಳು

ವಿಶ್ವದ ಯೋಶೋಗಾಥೆಯಾದ ಕೊಪ್ಪಳದ ತ್ರಿವಳಿಗಳು !

Published:
Updated:
ವಿಶ್ವದ ಯೋಶೋಗಾಥೆಯಾದ ಕೊಪ್ಪಳದ ತ್ರಿವಳಿಗಳು !

ಬೆಂಗಳೂರು: ಹುಟ್ಟುವಾಗಲೇ ‘ಯಮಪಾಶ’ ಕ್ಕೆ ಸಿಲುಕಿದ್ದ ಈ ಮೂರು ಕಂದಮ್ಮಗಳನ್ನು ಬದುಕಿಸಿದ್ದು ಅಮ್ಮನ ಅದಮ್ಯ ಇಚ್ಛಾ ಶಕ್ತಿ. ಈ ಕಥೆಯೀಗ ವಿಶ್ವದ ‘ಯಶೋಗಾಥೆ’ ಆಗಿದೆ. ಈ ತ್ರಿವಳಿಗಳ ಮರುಜನ್ಮದ ವೃತ್ತಾಂತವನ್ನು ವಿಶ್ವ ಆರೋಗ್ಯ ಸಂಸ್ಥೆ ಜಗದೆಲ್ಲೆಡೆ ಸಾರಲು ಮುಂದಾಗಿದೆ!

ಈ ತ್ರಿವಳಿ ಹೆಣ್ಣು ಮಕ್ಕಳಿಗೆ (ಮಹಾದೇವಿ, ಸೃಷ್ಟಿ ಮತ್ತು ಲಕ್ಷ್ಮಿ) ಈಗ ಬರೋಬ್ಬರಿ ಒಂದು ವರ್ಷ.  ಅವುಗಳ ಹಾಲು ನಗು ವಿಶ್ವದ ಎಲ್ಲೆಡೆ ತಲುಪಿದೆ.

ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 2016 ರ ಅಕ್ಟೋಬರ್‌ 25 ರಂದು ರೇಣುಕಾ ಹಡಪದ್‌ ತ್ರಿವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದರು. ಈ ವರ್ತಮಾನ ಕೇಳುತ್ತಲೇ, ಆಕೆಯ ಗಂಡ ಸೋಮಪ್ಪಗೆ ಸಿಡಿಲು ಬಡಿದಂತಾಗಿ ಅಲ್ಲಿಂದ ಹೊರ ಹೋದರು. ಇದಕ್ಕೆ ಕಾರಣ, ಈ ಹಿಂದೆ ಎರಡು ಹೆಣ್ಣು ಮಕ್ಕಳು ಜನಿಸಿದ್ದವು.

ಮೂರು ಶಿಶುಗಳು ಹುಟ್ಟುವಾಗ ಕಡಿಮೆ ತೂಕ (low birth weight) ಹೊಂದಿದ್ದವು. ತುರ್ತು ಆರೈಕೆಯ ಅಗತ್ಯವಿತ್ತು. ಕಡಿಮೆ ತೂಕದ ಮಕ್ಕಳ ಸ್ಥಿತಿ ಸುಧಾರಿಸಲು ವಿಶ್ವ ಆರೋಗ್ಯ ಸಂಸ್ಥೆಯು ರಾಜ್ಯದ ಆರೋಗ್ಯ ಇಲಾಖೆ ಜತೆ ಸೇರಿ ‘ಕಾಂಗರು ಮದರ್‌ ಕೇರ್‌’ ಎಂಬ ವಿಶಿಷ್ಟ ಯೋಜನೆಯನ್ನು ‘ಪೈಲಟ್‌ ಯೋಜನೆ’ಯಾಗಿ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೊಳಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಮತ್ತು ಇಥಿಯೋಪಿಯಾದ ಏಳು ಸ್ಥಳಗಳಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಭಾರತದ ಮೂರು ಸ್ಥಳಗಳಲ್ಲಿ ರಾಜ್ಯದ ಕೊಪ್ಪಳವೂ ಒಂದು.

ಹುಟ್ಟಿದಾಗ ತಲಾ 1500 ಗ್ರಾಂಗಳಿಗಿಂತ ಕಡಿಮೆ ತೂಕ ಇದ್ದ ಮಕ್ಕಳು ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಶಿಶುಗಳನ್ನು ಬೆಚ್ಚಗಿಡುವ, ತೂಕ ಹೆಚ್ಚಿಸುವ ಮತ್ತು ಆರೈಕೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು. ಆದರೆ, ಒಂದು ಪೈಸೆಯೂ ಖರ್ಚು ಆಗದ ‘ಕಾಂಗರೊ ಮದರ್‌ ಕೇರ್‌’ ಚಿಕಿತ್ಸೆ ನೀಡಲು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ತಂಡ ದಂಪತಿ ಮನವೊಲಿಸಲು ಯತ್ನಿಸಿತು.

ಆರಂಭದಲ್ಲಿ ಆ ಬಗ್ಗೆ ಇಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಹೆಣ್ಣು ಮಕ್ಕಳ ಮಹತ್ವವನ್ನು ಅವರಿಗೆ ತಿಳಿಸಲಾಯಿತು. ಮೋದಿಯವರ ಬೇಟಿ ಬಚಾವೊ ಬೇಟಿ ಪಡಾವೋ ಬಗ್ಗೆಯೂ ಹೇಳಲಾಯಿತು. ಹಲವು ಹೆಣ್ಣು ಮಕ್ಕಳ ಯಶಸ್ಸಿನ ಕಥೆಗಳನ್ನು ಹೇಳಿದ ಬಳಿಕ ರೇಣುಕಾ ಒಪ್ಪಿಗೆ ಸೂಚಿಸಿದರು. 28 ದಿನಗಳು ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೇಣುಕಾ ಗಂಡನ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ತವರಿಗೆ ಹೋದರು.

ಮಕ್ಕಳ ತೂಕ 1,500 ಗ್ರಾಂಗಳಿಂದ 2,500 ಗ್ರಾಂಗಳಿಗೆ ಹೆಚ್ಚುವವರೆಗೆ ಈ ಆರೈಕೆ ನೀಡಲಾಯಿತು. 2017 ರ ಮಾರ್ಚ್‌ ತಿಂಗಳಲ್ಲಿ ಮೂರು ಮಕ್ಕಳು ಸಾಮಾನ್ಯ ಸ್ಥಿತಿಗೆ ಬಂದವು. ಈ ವೇಳೆಗಾಗಲೇ ಸೋಮಪ್ಪನ ಮನಸ್ಸೂ ಪರಿವರ್ತನೆ ಆಗಿತ್ತು. ಐದೂ ಹೆಣ್ಣು ಮಕ್ಕಳನ್ನೂ ಪ್ರೀತಿಯಿಂದ  ನೋಡಿಕೊಳ್ಳಲಾರಂಭಿಸಿದರು. ಈಗ ಇವರು ಹೆಣ್ಣು ಮಕ್ಕಳ ಅಗತ್ಯ ಮತ್ತು ಕಾಂಗರೊ ಮದರ್‌ ಕೇರ್‌ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

‘ಕಡಿಮೆ ತೂಕದ ಮಕ್ಕಳನ್ನು ಉಳಿಸಲು ಸಾಧ್ಯವಾಗುತ್ತದೆ. ರೇಣುಕಾ ಅವರನ್ನು ಚಾಂಪಿಯನ್‌ ಎಂದು ಬಣ್ಣಿಸಿದ್ದು, ಇತರ ಹೆಣ್ಣು ಮಕ್ಕಳ ಪೋಷಕರಿಗೆ ಸ್ಫೂರ್ತಿ ನೀಡಲು ಇದರಿಂದ ಸಾಧ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ಸಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆ ಸೇಂಟ್‌ ಜಾನ್ಸ್‌ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಮತ್ತು ಕರ್ನಾಟಕ ಹೆಲ್ತ್‌ ಪ್ರಮೋಷನ್‌ ಟ್ರಸ್ಟ್‌ ಕೈಜೋಡಿಸಿವೆ.

ಬೆಚ್ಚನೆಯ ಅಪ್ಪುಗೆಯೇ ಸಂಜೀವಿನಿ

ಹುಟ್ಟುವಾಗ ಕಡಿಮೆ ತೂಕ ಇರುವ ನವಜಾತ ಶಿಶುಗಳಿಗೆ ತಾಯಿ ಅಥವಾ ತಂದೆಯ ಬೆಚ್ಚನೆಯ ಅಪ್ಪುಗೆಯೇ ಶ್ರೇಷ್ಠ. ಪೋಷಕರ ಚರ್ಮದ ಬಿಸಿ ಶಿಶುವಿಗೆ ನಿರಂತರವಾಗಿ ನೀಡಬೇಕು. ಇದರಿಂದ ಶಿಶುವಿನ ಆರೋಗ್ಯ ಸುಧಾರಿಸುತ್ತದೆ. ದಿನದ 24 ಗಂಟೆಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೊತ್ತು ನೀಡಬೇಕು. ಇದನ್ನೇ ‘ಕಾಂಗರೊ ಮದರ್‌ ಕೇರ್‌’ ಎನ್ನಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry