ಫೆಡರರ್‌, ನೊವಾಕ್‌ ಶುಭಾರಂಭ

7
ಎರಡನೇ ಸುತ್ತಿಗೆ ಮುನ್ನಡೆದ ಪ್ರಮುಖ ತಾರೆಯರು

ಫೆಡರರ್‌, ನೊವಾಕ್‌ ಶುಭಾರಂಭ

Published:
Updated:

ಮೆಲ್ಬರ್ನ್‌ (ಎಎಫ್‌ಪಿ): ಹಾಲಿ ಚಾಂಪಿ ಯನ್‌ ರೋಜರ್‌ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ರಾಡ್‌ ಲೇವರ್‌ ಅರೆನಾದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಫೆಡರರ್‌ 6–3, 6–4, 6–3ರಲ್ಲಿ ಸ್ಲೊವೇನಿಯಾದ ಅಲ್‌ಜಾಜ್‌ ಬೆಡೆನ್ ಅವರನ್ನು ಪರಾಭವಗೊಳಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20ನೇ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಸ್ವಿಟ್ಜರ್‌ಲೆಂಡ್‌ನ ಆಟಗಾರ ಫೆಡರರ್ ಮೂರೂ ಸೆಟ್‌ಗಳಲ್ಲೂ ಪರಾಕ್ರಮ ಮೆರೆದರು. ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ರೋಜರ್‌ ಆರಂಭಿಕ ಸೆಟ್‌ನಲ್ಲಿ ಮಿಂಚಿದರು. ಬಿರುಗಾಳಿ ವೇಗದ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು 24 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಆ ನಂತರದ ಎರಡೂ ಸೆಟ್‌ಗಳಲ್ಲೂ ಫೆಡರರ್‌ ಆಟ ಕಳೆಗಟ್ಟಿತು. ಮನ ಮೋಹಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು ಚೆಂಡನ್ನು ಡ್ರಾಪ್‌ ಮಾಡುವಲ್ಲೂ ಜಾಣ್ಮೆ ತೋರಿ 51ನೇ ಶ್ರೇಯಾಂಕಿತ ಆಟಗಾರ ಬೆಡೆನೆ ಸವಾಲು ಮೀರಿದರು.

ಮಿಂಚಿದ ಜೊಕೊವಿಚ್‌: ‌ ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಎರಡನೇ ಸುತ್ತಿಗೆ ಮುನ್ನಡೆದರು. ಗಾಯದಿಂದ ಗುಣಮುಖರಾದ ಬಳಿಕ ಆಡಿದ ನೊವಾಕ್‌ 6–1, 6–2, 6–4ರಲ್ಲಿ ಅಮೆರಿಕದ ಡೊನಾಲ್ಡ್‌ ಯಂಗ್‌ ಅವರನ್ನು ಮಣಿಸಿದರು.

ಶರಪೋವಾಗೆ ಜಯ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರಷ್ಯಾದ ಮರಿಯಾ ಶರಪೋವಾ ಎರಡನೇ ಸುತ್ತು ಪ್ರವೇಶಿಸಿದರು.‌ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಶರಪೋವಾ 6–1, 6–4ರ ನೇರ ಸೆಟ್‌ಗಳಿಂದ ಜರ್ಮನಿಯ ತತಜನಾ ಮಲೆಕ್‌ ಅವರನ್ನು ಸೋಲಿಸಿದರು.

ಯೂಜ್ನಿ ಬೌಷಾರ್ಡ್‌ 6–3, 7–6 ರಲ್ಲಿ ಒಸೀಯನ್‌ ಡೊಡಿನ್‌ ಎದುರು ಗೆಲುವು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry