ಶಮನವಾಗದ ಬಿಕ್ಕಟ್ಟು

7

ಶಮನವಾಗದ ಬಿಕ್ಕಟ್ಟು

Published:
Updated:
ಶಮನವಾಗದ ಬಿಕ್ಕಟ್ಟು

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಉಂಟಾಗಿದ್ದ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರಿದಿದೆ. ತಮ್ಮ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮಂಗಳವಾರ ಭೇಟಿಯಾದರು.

ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರ ಜತೆ ಸುಮಾರು 15 ನಿಮಿಷ ಮಿಶ್ರಾ ಮಾತುಕತೆ ನಡೆಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮೂಲಗಳು ಹೇಳಿವೆ. ಈ ಸಂದರ್ಭದಲ್ಲಿ ಬೇರೆ ಕೆಲವು ನ್ಯಾಯಮೂರ್ತಿಗಳೂ ಇದ್ದರು.

ಈ ಭೇಟಿಯ ಬಳಿಕ ಎಲ್ಲ ನ್ಯಾಯಮೂರ್ತಿಗಳು ನ್ಯಾಯಾಂಗ ಕಲಾಪದಲ್ಲಿ ಭಾಗವಹಿಸಿದರು.

ಸಿಜೆಐ ವಿರುದ್ಧದ ಆರೋಪದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಪರಿಹಾರವಾಗಿದೆ ಎಂಬ ಅಭಿಪ್ರಾಯ ಸೋಮವಾರ ವ್ಯಕ್ತವಾಗಿತ್ತು. ಆದರೆ ಬಿಕ್ಕಟ್ಟು ಸಂಪೂರ್ಣವಾಗಿ ಶಮನ ಆಗಿಲ್ಲ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದ್ದಾರೆ. 2–3 ದಿನಗಳಲ್ಲಿ ಬಿಕ್ಕಟ್ಟಿಗೆ ಪರಿಹಾರ ದೊರೆಯಬಹುದು ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬೇಜವಾಬ್ದಾರಿ ಅರ್ಜಿ: ಸಿಜೆಎಆರ್‌ಗೆ ‘ಸುಪ್ರಿಂ’ ತರಾಟೆ

ನವದೆಹಲಿ: ವೈದ್ಯಕೀಯ ಕಾಲೇಜು ಹಗರಣದಲ್ಲಿ ‘ಅನುಕೂಲಕರ ತೀರ್ಪು’ ಪಡೆಯಲು ನ್ಯಾಯಮೂರ್ತಿಗಳಿಗೆ ಲಂಚ ನೀಡಲಾಗಿದೆ ಎಂಬ ಪ್ರಕರಣದ

ತನಿಖೆಗೆ ವಿಶೇಷ ತಂಡ (ಎಸ್‌ಐಟಿ) ರಚಿಸಬೇಕು ಎಂದು ಕೋರಿ ನ್ಯಾಯಾಂಗ ಉತ್ತರದಾಯಿತ್ವ ಮತ್ತು ಸುಧಾರಣೆ (ಸಿಜೆಎಆರ್‌) ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸಂಸ್ಥೆಯು ತನ್ನ ಉತ್ತರದಾಯಿತ್ವವನ್ನು ಮರೆತು ಈ ಅರ್ಜಿ ಸಲ್ಲಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದು ‘ವಿಧಿಯ ವ್ಯಂಗ್ಯ’ ಎಂದು ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ.

‘ಸಂಸ್ಥೆಯು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸಾರ್ವಜನಿಕರಿಗೆ ಒಳಿತು ಮಾಡುವ ಬದಲಿಗೆ ಹಾನಿಯನ್ನೇ ಮಾಡಿದೆ. ಇಂತಹ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಈ ರೀತಿಯ ಅರ್ಜಿ ಸಲ್ಲಿಸುವುದನ್ನು ನಿಷೇಧಿಸುವುದೇ ಇದಕ್ಕೆ ಪರಿಹಾರ’ ಎಂದು ನ್ಯಾಯಮೂರ್ತಿಗಳಾದ ಆರ್‌.ಕೆ. ಅಗರ್‌ವಾಲ್‌, ಅರುಣ್‌ ಮಿಶ್ರಾ ಮತ್ತು ಎ.ಎಂ. ಖಾನ್ವಿಲ್ಕರ್‌ ಅವರ ಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಮತ್ತು ಇತರರ ವಿರುದ್ಧ ಆರೋಪಗಳನ್ನು ಹೊರಿಸಿದ ಈ ಅರ್ಜಿ ಸಲ್ಲಿಸಿದ ರೀತಿ ಬೇಜವಾಬ್ದಾರಿಯಿಂದ ಕೂಡಿದೆ.

ನ್ಯಾಯಾಂಗದ ಉತ್ತರದಾಯಿತ್ವಕ್ಕಾಗಿ ಕೆಲಸ ಮಾಡುವ ಸಂಸ್ಥೆಯೇ ಇಂತಹ ಅರ್ಜಿ ಸಲ್ಲಿಸಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಸಿಜೆಎಆರ್‌ ಸಂಸ್ಥೆಗೆ ಸುಪ್ರೀಂ ಕೋರ್ಟ್‌ ಕಳೆದ ವಾರ ₹25 ಲಕ್ಷ ದಂಡ ವಿಧಿಸಿತ್ತು. ಈ ಮೊತ್ತವನ್ನು ಸುಪ್ರೀಂ ಕೋರ್ಟ್‌ ವಕೀಲರ ಸಂಘದ ವಕೀಲರ ಅಭಿವೃದ್ಧಿ ನಿಧಿಯಲ್ಲಿ

ಆರು ತಿಂಗಳೊಳಗೆ ಠೇವಣಿ ಇರಿಸಬೇಕು ಎಂದು ಸೂಚಿಸಿತ್ತು. ಈ ತೀರ್ಪನ್ನು ಸೋಮವಾರ ಬಹಿರಂಗಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಬಿ. ಸಾವಂತ್‌, ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್‌ ಸಿಜೆಎಆರ್‌ನ ಸದಸ್ಯರಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಲಭ್ಯವಿರುವ ಎಲ್ಲ ವೇದಿಕೆಗಳ ಮೂಲಕ ವಿರೋಧಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry