ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಟ್ರೋಲಿಯಂ ಉತ್ಪನ್ನಗಳಿಗೆ ಕಡಿವಾಣ’

Last Updated 16 ಜನವರಿ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಉಸಿರಾಟ ಯೋಗ್ಯ ಪರಿಸರವನ್ನು ನಾವು ಮರಳಿ ಪಡೆಯುತ್ತೇವೆ. ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುತ್ತೇವೆ, ಇಂಧನ ಪೋಲಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ನೂರಾರು ಮಕ್ಕಳು ಒಕ್ಕೊರಲಿನಿಂದ ಪ್ರಮಾಣ ಸ್ವೀಕರಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಹಾಗೂ ಸಂಶೋಧನಾ ಸಂಸ್ಥೆ (ಪಿಸಿಆರ್‌ಎ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿ­ಟೆಡ್ (ಐಒಸಿ) ಸಹಯೋಗದಲ್ಲಿ ಇಂಧನ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಫೆ.15ರವರೆಗೆ ನಡೆಯುವ ಕಾರ್ಯಕ್ರಮದ ಮೂಲಕ ಸುಮಾರು 30 ಸಾವಿರ ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಲಾಗಿದೆ. ಇದರ ಭಾಗವಾಗಿ ಮಕ್ಕಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ತೈಲ ಮತ್ತು ಅನಿಲ ಸಂರಕ್ಷಣೆ ಕುರಿತ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳು, ಬೀದಿ ನಾಟಕಗಳು, ವಿದ್ಯಾರ್ಥಿನಿಯರು ಹಾಗೂ ಗೃಹಿಣಿಯರಿಗಾಗಿ ಗುಂಪು ಚರ್ಚೆ, ಪ್ರಬಂಧ ಮತ್ತು ಘೋಷ ವಾಕ್ಯ ರಚನಾ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಚರ್ಚಾಸ್ಪರ್ಧೆ, ವಾಹನಗಳ ಮಾಲಿನ್ಯದ ಉಚಿತ ತಪಾಸಣೆ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ವಿಶೇಷ ತರಬೇತಿ ಕಾರ್ಯಾಗಾರಗಳು ನಡೆಯಲಿವೆ.

ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ‘ದೇಶದ ಒಟ್ಟು ಬೇಡಿಕೆಯ ಶೇ 80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಶೇ 80ರಿಂದ 90ರಷ್ಟು ವಿದೇಶಿ ವಿನಿಮಯ ಇದಕ್ಕಾಗಿಯೇ ವ್ಯಯವಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಇಂಧನ ಬಳಸುವ ಮತ್ತು ಮಾಲಿನ್ಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಸಾರ್ವಜನಿಕರು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಬದಲು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಸವಾರಿ ಜನಪ್ರಿಯಗೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಐಒಸಿ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್‌, ‘ಜನರಲ್ಲಿ ಇಂಧನ ಕುರಿತು ಅರಿವು ಮೂಡಿಸಲು 1991ರಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಿದೆವು. ಆಗ ಸಪ್ತಾಹ ಕಾರ್ಯಕ್ರಮ ನಡೆಯುತ್ತಿತ್ತು. ನಂತರ ಅದನ್ನು ಪಾಕ್ಷಿಕವಾಗಿ ಆಚರಿಸಿದೆವು. 2015ರಿಂದ ಒಂದು ತಿಂಗಳು ಕಾರ್ಯಕ್ರಮ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಶುಭಂಕರ್‌ ದತ್‌, ‘ಮಕ್ಕಳು ಇಂಧನ ಉಳಿತಾಯವನ್ನು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಇಂಧನ ಹೆಚ್ಚು ಬಳಸಿದಷ್ಟು ಪರಿಸರ ಮಾಲಿನ್ಯ ಅಧಿಕವಾಗುತ್ತದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎಂದರು.

ಪಿಸಿಆರ್‌ಎ ಸಹಾಯಕ ನಿರ್ದೇಶಕ ಕವಿನ್‌ ಕುಮಾರ್‌, ‘ಮನೆಗಳಲ್ಲಿ ಪ್ರತಿ ದಿನ ಶೇ 15ರಿಂದ 20ರಷ್ಟು ಇಂಧನ ಪೋಲಾಗುತ್ತಿದೆ. ಅನಗತ್ಯವಾಗಿ ಉರಿಯುತ್ತಿರುವ ದೀಪಗಳನ್ನು ಆರಿಸುವ ಅಭ್ಯಾಸವನ್ನು ಮಕ್ಕಳು ರೂಢಿಸಿಕೊಳ್ಳಬೇಕು’ ಎಂದರು.

150 ಎಲೆಕ್ಟ್ರಿಕ್ ಬಸ್‌ಗಳ ಟೆಂಡರ್‌ ಪ್ರಕ್ರಿಯೆ 2–3 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಮಾರ್ಚ್‌ನಲ್ಲಿ ಈ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ
–ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ

ಫೆ.12ಕ್ಕೆ ವಾಹನ ವಿರಳ ಸಂಚಾರ ದಿನಕ್ಕೆ ಚಾಲನೆ

‘ದೆಹಲಿ ಪರಿಸ್ಥಿತಿ ನಗರಕ್ಕೆ ಬರಬಾರದೆಂದು ವಾಹನಗಳ ವಿರಳ ಸಂಚಾರ ದಿನ ಪ್ರಾರಂಭಿಸುತ್ತಿದ್ದೇವೆ. ಫೆ.12ಕ್ಕೆ ಇದಕ್ಕೆ ಚಾಲನೆ ನೀಡಲಾಗುವುದು. ಅಂದು ಬಿಎಂಟಿಸಿ ಮತ್ತು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಲಾಗುವುದು. ಸಾರ್ವಜನಿಕರು ಇದನ್ನು ಯಶಸ್ವಿಗೊಳಿಸಬೇಕು’ ಎಂದು ಎಚ್‌.ಎಂ. ರೇವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT