ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ವಂಚನೆ: ತಟಸ್ಥ ಸಂಸ್ಥೆಯಿಂದ ಸಮೀಕ್ಷೆ

ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಸಮೀಕ್ಷೆ ನಡೆಸಲು ನಿರ್ಧಾರ
Last Updated 16 ಜನವರಿ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವ ಮಾಲೀಕರನ್ನು ಪತ್ತೆ ಹಚ್ಚಲು ತಟಸ್ಥ ಸಂಸ್ಥೆಯ ನೆರವು ಪಡೆಯಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದಾಗಿದೆ.

ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದು, ಇದರ ಪ್ರಸ್ತಾವವನ್ನು ಕೌನ್ಸಿಲ್‌ ಸಭೆಯ ಅನುಮೋದನೆಗೆ ಕಳುಹಿಸಲಾಗಿದೆ.

ಈ ಎರಡು ವಲಯಗಳಲ್ಲಿ ಮನೆಗಳು, ನಿವೇಶನಗಳು ಹಾಗೂ ವಾಣಿಜ್ಯ ಕಟ್ಟಡಗಳು ಎಷ್ಟಿವೆ, ಸ್ವಯಂ ಘೋಷಿಸಿಕೊಂಡಿರುವ ಆಸ್ತಿಗಳೆಷ್ಟು, ಇದರಲ್ಲಿ ವ್ಯತ್ಯಾಸ ಕಂಡುಬಂದಿದೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ. ಆಸ್ತಿ ತೆರಿಗೆ ಪಾವತಿಸಿದವರು ಹಾಗೂ ಪಾವತಿ ಮಾಡದಿರುವವರ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮಾಲೀಕರು ತೆರಿಗೆ ಪಾವತಿಸದೇ ಇರಲು ಕಾರಣಗಳೇನು ಎಂಬ ಬಗ್ಗೆಯೂ ವರದಿ ಪಡೆಯಲಾಗುತ್ತದೆ.

‘ಪಾಲಿಕೆಯು ಆರ್ಥಿಕವಾಗಿ ಸದೃಢವಾಗಬೇಕಾದರೆ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಾಲಕಾಲಕ್ಕೆ ಕಟ್ಟಬೇಕು. ಆದರೆ, 2017–18ನೇ ಸಾಲಿ
ನಲ್ಲಿ ಆಸ್ತಿ ಸಂಗ್ರಹಣೆ ಬೇಡಿಕೆಗೆ ತಕ್ಕಂತೆ ತೆರಿಗೆ ವಸೂಲಿ ಮಾಡಲು ಸಾಧ್ಯವಾಗಿಲ್ಲ. ತೆರಿಗೆ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ತಟಸ್ಥ ಸಂಸ್ಥೆಯ ಮೂಲಕ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದೇವೆ. ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಟೆಂಡರ್‌ ಕರೆಯುತ್ತೇವೆ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಮಹಾದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ತಟಸ್ಥ ಸಂಸ್ಥೆಯು ನೀಡುವ ವರದಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಆಸ್ತಿ ತೆರಿಗೆ ವಂಚನೆ ಮಾಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

‘2016–17ನೇ ಸಾಲಿನ ಡಿಸೆಂಬರ್‌ ವೇಳೆಗೆ ₹1,700 ಕೋಟಿ ಸಂಗ್ರಹಗೊಂಡಿತ್ತು. ಪ್ರಸಕ್ತ ಸಾಲಿನಲ್ಲಿ ₹300 ಕೋಟಿ ಹೆಚ್ಚುವರಿಯಾಗಿ ಸಂಗ್ರಹಗೊಂಡಿದೆ. ಪಾಲಿಕೆಗೆ‌ ಬರುವ ಆದಾಯವನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್‌ ರೂಪಿಸಬೇಕಿದೆ. ಹೀಗಾಗಿ, ಆದಾಯದ ಕ್ರೋಡೀಕರಣಕ್ಕೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.

ಮಹದೇವಪುರ ವಲಯದಲ್ಲಿ 2017–18ನೇ ಸಾಲಿನಲ್ಲಿ ₹978.88 ಕೋಟಿ ಮೊತ್ತದ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಗುರಿ ಇದೆ. ಈ ಪೈಕಿ 2017ರ ಡಿಸೆಂಬರ್‌ 12ರವರೆಗೆ ₹461.03 ಕೋಟಿ ವಸೂಲಿ ಆಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ₹172.42 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಖಾಲಿ ನಿವೇಶನದಲ್ಲಿ ನಾಮಫಲಕ:ಆಸ್ತಿ ತೆರಿಗೆ ಪಾವತಿಸದ ಮಾಲೀಕರಿಗೆ ಚುರುಕು ಮುಟ್ಟಿಸಲು ‘ಈ ಸ್ವತ್ತು ಪಾಲಿಕೆಗೆ ಸೇರಿದ್ದು’ ಎಂಬ ನಾಮಫಲಕ ಹಾಕುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. ನಗರದಲ್ಲಿ 18.77 ಲಕ್ಷ ಆಸ್ತಿಗಳಿವೆ. ಈ ಪೈಕಿ ಅನೇಕ ಆಸ್ತಿಗಳಿಂದ ತೆರಿಗೆ ಬರಬೇಕಿದೆ. ಅಂತಹ ಮಾಲೀಕರನ್ನು ಗುರುತಿಸಿ, ಖಾಲಿ ನಿವೇಶನ ಹಾಗೂ ಮನೆಗಳ ಮುಂದೆ ನಾಮಫಲಕ ನೆಡಲಾಗುವುದು. ಭೂಮಾಲೀಕರು ಭಯಪಟ್ಟು ತೆರಿಗೆ ಪಾವತಿಸಲು ಮುಂದೆ ಬರುತ್ತಾರೆ ಎಂದು ಅವರು ತಿಳಿಸಿದರು.

‘ಮಾರಪ್ಪನಪಾಳ್ಯ ವಾರ್ಡ್‌ನ ನಿವೇಶನವೊಂದರಲ್ಲಿ ನಾಮಫಲಕವನ್ನು ಇತ್ತೀಚೆಗೆ ಅಳವಡಿಸಿದ್ದೆವು. ಈ ವಿಷಯ ತಿಳಿದ ಆಸ್ತಿಯ ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದರು. ಅವರು ಕೂಡಲೇ ತೆರಿಗೆ ಪಾವತಿಸಿದ್ದರು’ ಎಂದು ಹೇಳಿದರು.

ಅಂಕಿ–ಅಂಶ


₹3,863 ಕೋಟಿ

2017–18ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಗುರಿ

₹2,005 ಕೋಟಿ

ಈವರೆಗೆ ಸಂಗ್ರಹಗೊಂಡಿರುವ ಆಸ್ತಿ ತೆರಿಗೆ

₹1,436 ಕೋಟಿ

ಚಲನ್‌ ಮೂಲಕ ಪಾವತಿಯಾದ ಆಸ್ತಿ ತೆರಿಗೆ

₹519 ಕೋಟಿ

ಆನ್‌ಲೈನ್‌ ಮೂಲಕ ಪಾವತಿಯಾದ ಆಸ್ತಿ ತೆರಿಗೆ

₹50 ಕೋಟಿ

ಐಎಫ್‌ಎಂಎಸ್‌ ಮೂಲಕ ಪಾವತಿಯಾದ ಆಸ್ತಿ ತೆರಿಗೆ

2017–18ನೇ ಸಾಲಿನಲ್ಲಿ ಆಸ್ತಿ ತೆರಿಗೆ ವಿವರ (2017ರ ಡಿ.12ರವರೆಗೆ ಆಸ್ತಿ ತೆರಿಗೆ ಸಂಗ್ರಹ– ಕೋಟಿ ₹ಗಳಲ್ಲಿ)

ವಲಯ ಒಟ್ಟು ಆಸ್ತಿ ಕಳೆದ ವರ್ಷದ ಬಾಕಿ ಈ ವರ್ಷದ ಬೇಡಿಕೆ ಒಟ್ಟು ಬೇಡಿಕೆ ವಸೂಲಿ ಬಾಕಿ

ಬೊಮ್ಮನಹಳ್ಳಿ 2.82 ಲಕ್ಷ 149 207 356 183 172

ದಾಸರಹಳ್ಳಿ 79 ಸಾವಿರ 44 59 104 58 45

ಪೂರ್ವ 2.96 ಲಕ್ಷ 370 460 831 379 451

ಮಹದೇವಪುರ 3.30 ಲಕ್ಷ 491 487 979 461 518

ಆರ್‌.ಆರ್‌.ನಗರ 2.30 ಲಕ್ಷ 86 127 213 115 98

ದಕ್ಷಿಣ 2.64 ಲಕ್ಷ 284 387 671 314 357

ಪಶ್ಚಿಮ 2.19 ಲಕ್ಷ 191 267 460 220 240

ಯಲಹಂಕ 1.77 ಲಕ್ಷ 89 161 250 149 102

ಒಟ್ಟು 18.77 ಲಕ್ಷ 1,704 2,155 3,864 1,879 1,983

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT