ಮೊಬೈಲ್‌ ಟವರ್‌ ಘೋಷಣೆ: 20ರ ಗಡುವು

7

ಮೊಬೈಲ್‌ ಟವರ್‌ ಘೋಷಣೆ: 20ರ ಗಡುವು

Published:
Updated:

ಬೆಂಗಳೂರು: ನಗರದಲ್ಲಿ ಅಳವಡಿಸಿರುವ ಮೊಬೈಲ್‌ ಟವರ್‌ ಹಾಗೂ ಒಎಫ್‌ಸಿಗಳ ಮಾಹಿತಿಯ ಅಫಿಡವಿಟ್‌ಗಳನ್ನು ಎಲ್ಲ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು (ಟಿಎಸ್‌ಪಿ) ಇದೇ 20ರೊಳಗೆ ಸಲ್ಲಿಸುವಂತೆ ಪಾಲಿಕೆ ಸೂಚನೆ ನೀಡಿದೆ.

ಮೊಬೈಲ್‌ ಟವರ್‌ ಹಾಗೂ ಒಎಫ್‌ಸಿಗಳನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಮ್ಯಾಪ್‌ ಮಾಡಿಸಬೇಕು. ಟಿಎಸ್‌ಪಿ ಸಂಸ್ಥೆಗಳು ಸಲ್ಲಿಸುವ ಅಫಿಡವಿಟ್‌ಗಳನ್ನು ವಾರ್ಡ್‌ ಎಂಜಿನಿಯರ್‌ಗಳು ಆನ್‌ಲೈನ್‌ ಮೂಲಕ ಪರಿಶೀಲಿಸುತ್ತಾರೆ. ಜಿಐಎಸ್‌ ಮ್ಯಾಪ್‌ ಅನ್ನು ನವೀಕರಿಸುತ್ತಾರೆ. ಈ ವೇಳೆ, ಅಫಿಡವಿಟ್‌ನಲ್ಲಿ ಘೋಷಿಸದೇ ಇರುವ ಟವರ್‌ಗಳನ್ನು ಬಿಬಿಎಂಪಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅಕ್ರಮ ಮೊಬೈಲ್‌ ಟವರ್‌ಗಳಿದ್ದರೆ, ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಶುಲ್ಕ ಸಂಗ್ರಹ:

ಮೊಬೈಲ್‌ ಟವರ್‌ಗಳನ್ನು ನಿಯಂತ್ರಿಸಲು ನಗರಾಭಿವೃದ್ಧಿ ಇಲಾಖೆ 2016ರಲ್ಲಿ ಕರಡು ನೀತಿ ಪ್ರಕಟಿಸಿತ್ತು. ಪ್ರತಿ ಟವರ್‌ ಅಳವಡಿಕೆಗೆ ₹50 ಸಾವಿರ ಶುಲ್ಕ ನಿಗದಿಪಡಿಸಿದ್ದು, ಅದನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕು ಎಂದು ನೀತಿಯಲ್ಲಿ ಹೇಳಲಾಗಿತ್ತು. ಆದರೆ, ಈ ನೀತಿಯ ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಪಾಲಿಕೆಯೂ ಏನು ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಪಾಲಿಕೆಯು ಕಡ್ಡಾಯವಾಗಿ ₹50 ಸಾವಿರ ಶುಲ್ಕ ವಸೂಲಿ ಮಾಡಬೇಕು ಎಂಬ ನಿರ್ಣಯವನ್ನು 2017ರಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಕೈಗೊಳ್ಳಲಾಗಿತ್ತು.

₹50 ಸಾವಿರ ಶುಲ್ಕವು ಅಧಿಕವಾಗಿದೆ ಎಂದು ಸೇವಾ ಪೂರೈಕೆದಾರ ಸಂಸ್ಥೆಗಳು ದೂರಿವೆ. ಆದರೆ, ದೆಹಲಿಯಲ್ಲಿ ₹2 ಲಕ್ಷ ಹಾಗೂ ಹರಿಯಾಣದಲ್ಲಿ ₹1 ಲಕ್ಷ ಶುಲ್ಕವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಗರದಲ್ಲಿವೆ 10 ಸಾವಿರ ಮೊಬೈಲ್‌ ಟವರ್‌’

‘ಆರು ಕಂಪನಿಗಳು ಒಟ್ಟು 6,766 ಮೊಬೈಲ್ ಟವರ್‌ಗಳನ್ನು ಘೋಷಿಸಿವೆ. ಆದರೆ, ಇನ್ನೂ 4 ಸಾವಿರ ಟವರ್‌ಗಳು ಇರುವುದಾಗಿ ಅಂದಾಜು ಮಾಡಲಾಗಿದೆ. ಘೋಷಿಸಿರುವ ಟವರ್‌ಗಳನ್ನು ಸಮೀಕ್ಷೆ ನಡೆಸಲು ಕಷ್ಟಸಾಧ್ಯ. ಹೀಗಾಗಿ, ಈ ಟವರ್‌ಗಳಿಗೆ ಜಿಐಎಸ್‌ ಮ್ಯಾಪ್‌ ಮಾಡಲು ಸೂಚಿಸಿದ್ದೇವೆ’ ಎಂದು ಒಎಫ್‌ಸಿ ಕೋಶದ ಮುಖ್ಯ ಎಂಜಿನಿಯರ್‌ ಎನ್‌.ವಿಜಯಕುಮಾರ್‌ ತಿಳಿಸಿದರು.

8,576 ಕಿ.ಮೀ. ಉದ್ದದ ಒಎಫ್‌ಸಿಗಳನ್ನು ಅಳವಡಿಸಿರುವುದಾಗಿ ಟಿಎಸ್‌ಪಿ ಸಂಸ್ಥೆಗಳು ಘೋಷಿಸಿವೆ. ಆದರೆ, ನಮ್ಮ ಅಂದಾಜಿನ ಪ್ರಕಾರ 25 ಸಾವಿರ ಕಿ.ಮೀ. ಉದ್ದದ ಒಎಫ್‌ಸಿಗಳನ್ನು ಅಳವಡಿಸಿರುವ ಸಾಧ್ಯತೆ ಇದೆ. ಇದರಲ್ಲಿ ಅನಧಿಕೃತ ಒಎಫ್‌ಸಿಗಳನ್ನು ಪತ್ತೆ ಮಾಡಬೇಕಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry