ಸಾರಿಗೆ ಇಲಾಖೆ: ₹ 102 ಕೋಟಿ ತೆರಿಗೆ, ದಂಡ ಸಂಗ್ರಹ

7

ಸಾರಿಗೆ ಇಲಾಖೆ: ₹ 102 ಕೋಟಿ ತೆರಿಗೆ, ದಂಡ ಸಂಗ್ರಹ

Published:
Updated:

ಬೆಂಗಳೂರು: 2017–18ನೇ ಸಾಲಿನಲ್ಲಿ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ ದಂಡ ಹಾಗೂ ತೆರಿಗೆ ರೂಪದಲ್ಲಿ ₹ 102 ಕೋಟಿ ವಸೂಲಿ ಮಾಡಲಾಗಿದೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ ಹೇಳಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘14.98 ಲಕ್ಷ ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ಈ ಪೈಕಿ ನಿಯಮ ಉಲ್ಲಂಘಿಸಿದ ಆರೋಪ‍ದಡಿ 1.89 ಲಕ್ಷ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 22,107 ವಾಹನಗಳನ್ನು ಜಪ್ತಿ ಮಾಡಿದ್ದೇವೆ’ ಎಂದರು.

ವಿಮೆ ಪಾವತಿಸದ, ದೋಷಪೂರಿತ ನೋಂದಣಿ ಫಲಕ ಅಳವಡಿಸಿದ, ತೆರಿಗೆ ಪಾವತಿಸದ ಹಾಗೂ ಸಾಮರ್ಥ್ಯ ಪ್ರಮಾಣ ಪತ್ರ ಪಡೆಯದ ಆರೋಪದಡಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಒಟ್ಟು 882 ಹೊಗೆ ತಪಾಸಣಾ ಕೇಂದ್ರಗಳಿದ್ದು, ಈ ಪೈಕಿ 370 ಕೇಂದ್ರಗಳು ನಗರದಲ್ಲಿವೆ. ಒಟ್ಟು 84 ಕೇಂದ್ರಗಳು ನಿಯಮ ಪಾಲಿಸದೆ ಲೋಪ ಎಸಗಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದರು.

‘63 ಕೇಂದ್ರಗಳ ₹ 5.99 ಲಕ್ಷ ಭದ್ರತಾ ಠೇವಣಿಯನ್ನು ದಂಡದ ರೂಪದಲ್ಲಿ ಮುಟ್ಟುಗೋಲು ಹಾಕಿದ್ದೇವೆ. ಎರಡು ಕೇಂದ್ರಗಳ ಪರವಾನಗಿಯನ್ನು ರದ್ದುಪಡಿಸಿದ್ದೇವೆ. ಇನ್ನುಳಿದ 21 ಕೇಂದ್ರಗಳ ಮಾಲೀಕರಿಗೆ  ನೋಟಿಸ್ ನೀಡಿದ್ದೇವೆ’ ಎಂದರು.

ಸ್ವಯಂಚಾಲಿತ ತಪಾಸಣೆ ಕಡ್ಡಾಯ: ಎಲ್ಲ ಮಾದರಿಯ ಆಂಬುಲೆನ್ಸ್‌ಗಳು ಫೆ.1ರಿಂದ ನೆಲಮಂಗಲದ ವಾಹನ ಸಾಮರ್ಥ್ಯ ಸ್ವಯಂಚಾಲಿತ ತಪಾಸಣಾ ಕೇಂದ್ರದಿಂದ ಸಾಮರ್ಥ್ಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

15 ವರ್ಷಗಳಿಗಿಂತ ಹಳೆಯ ಎಲ್ಲ ಸಾರಿಗೆ ವಾಹನಗಳಿಗೆ ಇದೇ ಕೇಂದ್ರದಿಂದ ಸಾಮರ್ಥ್ಯ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದರು.

‘ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಓಮ್ನಿ ಆಂಬುಲೆನ್ಸ್‌ ವಾಹನಗಳು ಸುರಕ್ಷಿತವಲ್ಲ. ಹೀಗಾಗಿ, ಏಪ್ರಿಲ್ 1ರ ಬಳಿಕ ರಾಜ್ಯದಲ್ಲಿ ಅವುಗಳ ನೋಂದಣಿಗೆ ಅವಕಾಶವಿಲ್ಲ. ಚಾಲ್ತಿಯಲ್ಲಿರುವ ಓಮ್ನಿ ಆಂಬುಲೆನ್ಸ್‌ಗಳ ಬಗ್ಗೆಯೂ ಹೊಸ ಅಧಿಸೂಚನೆ ಹೊರಡಿಸುತ್ತೇವೆ’ ಎಂದರು.

ಎಲೆಕ್ಟ್ರಾನಿಕ್‌ ವಾಹನಗಳಿಗೆ ವಿನಾಯಿತಿ: 

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ನೋಂದಣಿ ಹೆಚ್ಚಾಗುತ್ತಿದೆ. ಅವುಗಳಿಂದ ವಾಯು ಹಾಗೂ ಶಬ್ದ ಮಾಲಿನ್ಯ ಗಣನೀಯವಾಗಿ ಏರಿಕೆಯಾಗಿದೆ. ಮಾಲಿನ್ಯಕ್ಕೆ ಕಡಿವಾಣ ಹಾಕಲೆಂದು ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಇಲಾಖೆ ಮುಂದಾಗಿದೆ. ಅದಕ್ಕಾಗಿ, ರಸ್ತೆ ತೆರಿಗೆಯಲ್ಲಿ ವಿನಾಯಿತಿಯನ್ನೂ ನೀಡಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ ಎಲ್ಲ ಮಾದರಿಯ 11,836 ಬ್ಯಾಟರಿ ಚಾಲಿತ ವಾಹನಗಳು ನೋಂದಣಿಯಾಗಿವೆ. ಅವುಗಳ ಪೈಕಿ 6,246 ವಾಹನಗಳು ನಗರದಲ್ಲಿ ನೋಂದಣಿಯಾಗಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ನಗರದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲು ಕ್ರಮಕೈಗೊಂಡಿದ್ದೇವೆ ಎಂದು ಹೇಳಿದರು.

ಸಹಾಯವಾಣಿ ಪ್ರಾರಂಭ

‘ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸ್ವೀಕಾರಕ್ಕೆ ಸಹಾಯವಾಣಿ ಪ್ರಾರಂಭಿಸುತ್ತಿದ್ದೇವೆ. ಅದು ಫೆಬ್ರುವರಿ ಅಂತ್ಯದೊಳಗೆ ಕಾರ್ಯಾರಂಭ ಮಾಡಲಿದೆ’ ಎಂದು ದಯಾನಂದ ತಿಳಿಸಿದರು.

ಈ ಸಂಬಂಧ ಕೆಲ ದಿನಗಳ ಹಿಂದೆ ಟೆಂಡರ್ ಕರೆಯಲಾಗಿದೆ. ಶಾಂತಿನಗರದ ಕಚೇರಿಯಲ್ಲಿಯೇ ಕೇಂದ್ರ ಪ್ರಾರಂಭವಾಗಲಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry