ಪುರುಷ ವೇಶ್ಯೆಯಾಗಿ ಹೋದವನಿಂದ ಹಣ ಕಿತ್ತರು!

7

ಪುರುಷ ವೇಶ್ಯೆಯಾಗಿ ಹೋದವನಿಂದ ಹಣ ಕಿತ್ತರು!

Published:
Updated:

ಬೆಂಗಳೂರು: ಮಹಿಳಾ ಗಿರಾಕಿಗಳನ್ನು ಪರಿಚಯ ಮಾಡಿಕೊಡುವುದಾಗಿ ಹೇಳಿ ‘ಪುರುಷ ವೇಶ್ಯೆ’ ಆಗಿದ್ದ ಯುವಕನನ್ನು ಹೋಟೆಲೊಂದಕ್ಕೆ ಕರೆಸಿದ್ದ ಅಪರಿಚಿತ ಮಹಿಳೆಯೊಬ್ಬಳು ಆತನಿಂದ ₹1.32 ಲಕ್ಷ ಪಡೆದು ವಂಚಿಸಿದ್ದಾಳೆ.

ವಂಚನೆ ಬಗ್ಗೆ 22 ವರ್ಷದ ಯುವಕ ನಗರದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆಯನ್ನು ಪತ್ತೆ ಹಚ್ಚುತ್ತಿದ್ದಾರೆ.

‘ಅತ್ತಿಗುಪ್ಪೆಯ ಹಂಪಿನಗರದ ಯುವಕ, ಡಿಪ್ಲೊಮಾ ವಿದ್ಯಾರ್ಥಿ. ಸ್ನೇಹಿತೆಯ ವಿದ್ಯಾಭ್ಯಾಸಕ್ಕಾಗಿ ಆತ ಪುರುಷ ವೇಶ್ಯೆ ಆಗಿ ಕೆಲಸ ಮಾಡುತ್ತಿದ್ದ. ಜಾಲತಾಣವೊಂದರಲ್ಲಿ ಮೊಬೈಲ್‌ ನಂಬರ್‌ ಸಹಿತ ಜಾಹೀರಾತು ನೀಡಿ, ‘ನಾನು ಪುರುಷ ವೇಶ್ಯೆ. ದಿನಕ್ಕೆ ₹20,000 ಕೊಟ್ಟರೆ ನೀವು ಕರೆದ ಕಡೆ ಬರುತ್ತೇನೆ’ ಎಂದು ಬರೆದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆತನನ್ನು ಇತ್ತೀಚೆಗೆ ಸಂಪರ್ಕಿಸಿದ್ದ ಅಲಿನಾ ವೆಲ್ಹೋ ಎಂಬಾಕೆ, ’ವೇಶ್ಯೆ ಕೆಲಸಕ್ಕೆ ಪುರುಷರು ಬೇಕಾಗಿದ್ದಾರೆ. ನೀನು ಒಪ್ಪಿದರೆ, ಮಹಿಳಾ ಗಿರಾಕಿಗಳನ್ನು ಹುಡುಕಿಕೊಡುತ್ತೇನೆ. ಆದರೆ, ನೀನು ಮೊದಲು ₹6,300 ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು’ ಎಂದಿದ್ದಳು. ಅದಕ್ಕೆ ಒಪ್ಪಿದ್ದ ಆತ, ಆಕೆಯ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದ್ದ.’

‘ಅದಾದ ಕೆಲದಿನಗಳ ಬಳಿಕ ಆತನನ್ನು ಸಂಪರ್ಕಿಸಿದ್ದ ಅಲಿನಾ, ‘ದುಬೈನಿಂದ ಮಹಿಳಾ ಉದ್ಯಮಿಯೊಬ್ಬರು ನಗರಕ್ಕೆ ಬಂದಿದ್ದಾರೆ. ಹೋಟೆಲೊಂದರಲ್ಲಿ ಉಳಿದುಕೊಂಡಿದ್ದಾರೆ. ನೀನು ಅವರಿಗೆ ಬೇಕಂತೆ. ಬೇಗನೇ ಹೋಟೆಲ್‌ಗೆ ಬಾ’ ಎಂದು ಕರೆದಿದ್ದರು. ಅದರಂತೆ ಯುವಕ, ಅಲ್ಲಿಗೆ ಹೋಗಿದ್ದ. ಆದರೆ, ಅಲಿನಾ ಅಲ್ಲಿರಲಿಲ್ಲ. ಯುವಕ ವಾಪಸ್‌ ಮೊಬೈಲ್‌ಗೆ ಕರೆ ಮಾಡಿದಾಗ ಮಾತನಾಡಿದ್ದ ಆಕೆ, ‘₹8,500 ಭದ್ರತಾ ಠೇವಣಿ ಕೊಡಬೇಕು’ ಎಂದು ಕೇಳಿದ್ದಳು. ಅದಕ್ಕೂ ಒಪ್ಪಿ ಆತ, ಆನ್‌ಲೈನ್‌ ಮೂಲಕ ಖಾತೆಗೆ ಹಣ ವರ್ಗಾವಣೆ ಮಾಡಿದ್ದ’

‘ಮಹಿಳಾ ಉದ್ಯಮಿಯು ಬೇರೊಂದು ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ಕರೆಯುವವರೆಗೂ ನೀನು ಲಾಬಿಯಲ್ಲಿ ಕುಳಿತುಕೊ’ ಎಂದು ಮಹಿಳೆ ಹೇಳಿದ್ದಳು. ಜತೆ, ‘ಕೆಲಸ ಮುಗಿದ ಬಳಿಕ ಉದ್ಯಮಿಯಿಂದ ನಿನಗೆ ₹6 ಲಕ್ಷ ಸಿಗುತ್ತದೆ. ಕಮಿಷನ್‌ ಹಣವಾಗಿ ನನ್ನ ಖಾತೆಗೆ ಈಗಲೇ ₹1,18 ಲಕ್ಷ ಜಮೆ ಮಾಡು’ ಎಂದಿದ್ದಳು. ಆ ಹಣವನ್ನೂ ಆತ ಖಾತೆಗೆ ಕಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.

‘ರಾತ್ರಿಯಾದರೂ ಯಾರೊಬ್ಬರೂ ಆತನನ್ನು ಸಂಪರ್ಕಿಸಿರಲಿಲ್ಲ. ಹೋಟೆಲ್‌ ಸಿಬ್ಬಂದಿಯನ್ನು ವಿಚಾರಿಸಿದಾಗ, ದುಬೈ ಮಹಿಳೆ ಯಾರೂ ಇಲ್ಲವೆಂದು ಹೇಳಿದ್ದರು. ಆಗ ಅಲಿನಾಳಿಗೆ ಕರೆ ಮಾಡಿದ್ದ ಆತ, ಹಣ ವಾಪಸ್‌ ಕೊಡುವಂತೆ ಕೇಳಿದ್ದ. ಮಹಿಳೆ, ‘ಹಣ ವಾಪಸ್‌ ನೀಡುವ ತಗಲುವ ₹8,500 ವೆಚ್ಚವನ್ನು ಖಾತೆಗೆ ಜಮೆ ಮಾಡು’ ಎಂದು ಪುನಃ ಹಣ ಕೇಳಿದ್ದಳು. ಬೇಸತ್ತ ಯುವಕ, ಆಕೆಯ ವಂಚನೆಯನ್ನು ಅರಿತು ದೂರು ನೀಡಿದ್ದಾನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry