ಅಕ್ಕನ ಗಂಡನ ಜತೆಗೂಡಿ ಪತಿಯನ್ನು ಕೊಲೆಗೈದಳು

7

ಅಕ್ಕನ ಗಂಡನ ಜತೆಗೂಡಿ ಪತಿಯನ್ನು ಕೊಲೆಗೈದಳು

Published:
Updated:

ಬೆಂಗಳೂರು: ಪತಿಯನ್ನು ಹತ್ಯೆಗೈದು ರಾಜಕಾಲುವೆಗೆ ಎಸೆದು ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಪತ್ನಿ ಹಾಗೂ ಆಕೆಯ ಅಕ್ಕನ ಗಂಡನನ್ನು ಅಲ್ಲಿನ ಪೊಲೀಸರು ಬಂಧಿಸಿ ನಗರದ ಬಂಡೆಪಾಳ್ಯ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪಾರ್ವತಿ (35) ಹಾಗೂ ಆಕೆಯ ಪ್ರಿಯಕರ ಸುರೇಂದ್ರ (25) ಬಂಧಿತರು. ರಾಮ್ ಸೇವಕ್ ಕೊಲೆಗೀಡಾದವರು. ಇತ್ತೀಚೆಗಷ್ಟೇ ವಿವಾಹವಾಗಿದ್ದ ಅವರನ್ನು ಟೈಲ್ಸ್‌ ಕೆಲಸ ಮಾಡಲೆಂದು ಸುರೇಂದ್ರ ನಗರಕ್ಕೆ ಕರೆಸಿಕೊಂಡಿದ್ದ. ಬಂಡೆಪಾಳ್ಯದಲ್ಲಿ ಮೂವರು ಒಟ್ಟಿಗೆ ವಾಸವಾಗಿದ್ದರು.

ಆರೋಪಿಗಳ ನಡುವೆ ಅಕ್ರಮ ಸಂಬಂಧವಿತ್ತು. ಆ ಬಗ್ಗೆ ತಿಳಿದ ರಾಮ್, ನಿತ್ಯ ಕುಡಿದು ಬಂದು ಪತ್ನಿ ಜತೆ ಜಗಳವಾಡಿದ್ದರು. ಸುರೇಂದ್ರನಿಗೂ ಎಚ್ಚರಿಕೆ ನೀಡಿದ್ದರು ಎಂದು ಬಂಡೇಪಾಳ್ಯ ಪೊಲೀಸರು ತಿಳಿಸಿದರು.

‘ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ರಾಮ್ ಅವರನ್ನು ಕೊಲೆಗೈದರೆ ನಾವಿಬ್ಬರು ಸಂತೋಷದಿಂದ ಇರಬಹುದು’ ಎಂದು ಆರೋಪಿಗಳು ಭಾವಿಸಿದ್ದರು. ಅದರಂತೆ ಡಿ.18ರ ರಾತ್ರಿ ಮದ್ಯ ಸೇವಿಸಿ ಮಲಗಿದ್ದ ರಾಮ್‌ ತಲೆ ಮೇಲೆ ಸಿಮೆಂಟ್‌ ಇಟ್ಟಿಗೆ ಹಾಕಿ ಕೊಲೆಗೈದಿದ್ದರು ಎಂದು ತಿಳಿಸಿದರು.

ಬಳಿಕ ಶವವನ್ನು ಹೂಡಿ ಬಳಿಯ ರಾಜಕಾಲುವೆಗೆ ಬಿಸಾಡಿ ಉತ್ತರ ಪ್ರದೇಶಕ್ಕೆ ಹೋಗಿದ್ದರು. ‘ಪತಿ ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ’ ಎಂದು ಅಲ್ಲಿನ ಠಾಣೆಗೆ ಡಿ.24ರಂದು ದೂರು ಕೊಟ್ಟಿದ್ದರು ಎಂದು ವಿವರಿಸಿದರು.

ಲಾಠಿ ಏಟಿಗೆ ಹೊರಬಿತ್ತು ಕೊಲೆ ರಹಸ್ಯ: ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಉತ್ತರಪ್ರದೇಶದ ಪೊಲೀಸರಿಗೆ ಪಾರ್ವತಿಯ ದ್ವಂದ್ವ ಹೇಳಿಕೆಗಳಿಂದ ಅನುಮಾನ ವ್ಯಕ್ತವಾಗಿತ್ತು. ಅದರಂತೆ ಆಕೆಯನ್ನು ಠಾಣೆಗೆ ಕರೆತಂದು ಲಾಠಿ ರುಚಿ ತೋರಿಸಿದ್ದರು. ಆಗ ಪತಿಯನ್ನು ಕೊಲೆಗೈದಿದ್ದ ಬಗ್ಗೆ ಬಾಯಿಬಿಟ್ಟಿದ್ದಳು. ಬಳಿಕ ಸುರೇಂದ್ರನನ್ನು ಬಂಧಿಸಿದ್ದರು.

ಬನ್ನೇರುಘಟ್ಟ ಬಳಿ ಶವ ಪತ್ತೆ: ಹತ್ಯೆಯಾದ ಮೂರು ದಿನಗಳ ಬಳಿಕ ರಾಮ್‌ ಶವ ಬನ್ನೇರುಘಟ್ಟ ರಸ್ತೆಯ ಎಚ್‌ಬಿಎಸ್ ಕಂಪನಿ ಹಿಂಭಾಗದ ರಾಜಕಾಲುವೆಯಲ್ಲಿ ಪತ್ತೆಯಾಗಿತ್ತು.

ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ರಾಮ್ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry