ಜಂಟಿ ಆಯುಕ್ತೆ ಅಮಾನತಿಗೆ ಹೈಕೋರ್ಟ್‌ ಆದೇಶ

7

ಜಂಟಿ ಆಯುಕ್ತೆ ಅಮಾನತಿಗೆ ಹೈಕೋರ್ಟ್‌ ಆದೇಶ

Published:
Updated:

ಬೆಂಗಳೂರು: ಕಾನೂನು ಬಾಹಿರವಾಗಿ ಜಮೀನು ಖಾತೆಯ ಬದಲಾವಣೆಗೆ ಆದೇಶಿಸಿದ ಆರೋಪದ ಮೇಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹದೇವಪುರ ವಲಯದ ಜಂಟಿ ಆಯುಕ್ತರಾದ ಬಿ.ವಿ.ವಾಸಂತಿ ಅಮರ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.

‘ವಾಸಂತಿ ವಿರುದ್ಧ ಸಿಐಡಿ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವರೆಗೂ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಬೇಕು’ ಎಂದು ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠವು ಕಂದಾಯ ಇಲಾಖೆಗೆ ನಿರ್ದೇಶಿಸಿದೆ.

‘ಸಿಐಡಿ ಎಸ್‌.ಪಿ.ಶ್ರೇಣಿಯ ಅಧಿಕಾರಿ ಪ್ರಕರಣದ ತನಿಖೆ ನಡೆಸಬೇಕು. ಈ ಕುರಿತಂತೆ ನ್ಯಾಯಾಲಯದ ಆದೇಶ ಪ್ರತಿ ಲಭ್ಯವಾದ 15 ದಿನಗಳ ಒಳಗೆ ತನಿಖೆ ಆರಂಭಿಸಬೇಕು. ನಂತರದ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು. ತನಿಖೆ ಪೂರ್ಣಗೊಳಿಸಿದ ಆರು ತಿಂಗಳ ಒಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ವಾಸಂತಿ ಅಮರ್ ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದು, ಈಗಿರುವ ಸ್ಥಾನದಲ್ಲೇ ಮುಂದುವರಿದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸುಗಮ ತನಿಖೆ ದೃಷ್ಟಿಯಿಂದ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಸಿಐಡಿ ತನಿಖಾಧಿಕಾರಿ ಮುಂದೆ ವಾಸಂತಿ ತಮ್ಮ ವಾದ ಮಂಡಿಸಲು ಸ್ವತಂತ್ರರಾಗಿರುತ್ತಾರೆ’ ಎಂದೂ ನ್ಯಾಯಪೀಠ ಹೇಳಿದೆ.

ಚಿನ್ಮಮ್ಮ ಎಂಬುವರು ಆನೇಕಲ್ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೆ ನಂ 47ರಲ್ಲಿನ 2 ಎಕರೆ 20 ಗುಂಟೆ ಜಮೀನಿನ ಖಾತೆ ಬದಲಾವಣೆಗೆ ಕೋರಿದ್ದರು. ಈ ಅರ್ಜಿ ಮಾನ್ಯ ಮಾಡಿ ವಾಸಂತಿ ನೀಡಿದ್ದ ಆದೇಶವನ್ನು ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry