ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ

7

ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ

Published:
Updated:

ಬೆಂಗಳೂರು: ಹೊಸ ವರ್ಷಾಚರಣೆ ದಿನವಾದ ಡಿ. 31ರಂದು ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವತಿ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರೌಡಿ ಅಂಬರೀಷ್‌ ಸೇರಿದಂತೆ 9 ಮಂದಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ರೌಡಿ ಹಾಗೂ ಆತನ ಸಹಚರರು, ಮೋಟಪ್ಪನಪಾಳ್ಯದ ಯಲ್ಲಮ್ಮ ದೇವಸ್ಥಾನ ಬಳಿ ನಡುರಸ್ತೆಯಲ್ಲಿ ಕುಣಿಯುತ್ತಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದವರನ್ನು ತಡೆದು ಕಿರಿಕಿರಿ ಉಂಟು ಮಾಡುತ್ತಿದ್ದರು. ಯುವತಿ ಹಾಗೂ ಸಹೋದರ ಅದೇ ಮಾರ್ಗವಾಗಿ ಮನೆಗೆ ಹೊರಟಿದ್ದರು. ಅವರನ್ನೂ ತಡೆದು ಹಲ್ಲೆ ಮಾಡಿದ್ದರು.

‘ಪಶ್ಚಿಮ ಬಂಗಾಳದ ಯುವತಿ ಹೊಸ ವರ್ಷಾಚರಣೆಗೆಂದು ಸಹೋದರನ ಜತೆ ಬಂದಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಕ್ಯಾಮೆರಾದಲ್ಲಿ ಕೃತ್ಯ ಸೆರೆ:

ಅಂದು ರಾತ್ರಿ ಆರೋಪಿಗಳು ನೃತ್ಯ ಮಾಡಿದ್ದ ಹಾಗೂ ಯುವತಿಯ ಮೇಲೆ ಹಲ್ಲೆಗೈದಿದ್ದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

‘ಯುವತಿ ಮತ್ತು ಸಹೋದರರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಹಿಂಬಾಲಿಸಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅದೇ ಮಾರ್ಗವಾಗಿ ಹೊರಟಿದ್ದ ಇನ್ನೊಂದು ಕಾರು ತಡೆದು ಅದರ ಚಾಲಕನ ಜತೆ ಆರೋಪಿಗಳು ಗಲಾಟೆ ಮಾಡಿದ್ದರು. ಕೆಲವರಿಗೆ ಒತ್ತಾಯಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಸದ್ಯ ಒಂದೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಬೇರೆ ಯಾರಾದರೂ ದೂರು ಕೊಟ್ಟರೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry