30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

7

30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

Published:
Updated:
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

ಬೆಂಗಳೂರು: ಬಿಬಿಎಂಪಿ ನಿಯಮ ಉಲ್ಲಂಘಿಸಿದ್ದ ಮೆಜೆಸ್ಟಿಕ್‌ನ ‘ರಜನಿ ಬಾರ್ ಆ್ಯಂಡ್‌ ರೆಸ್ಟೊರೆಂಟ್‌’ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ನಾಪತ್ತೆಯಾಗಿರುವ ಆರೋಪಿ ಸೋಮಶೇಖರ್‌, ನಗರದ 30 ಬಾರ್‌ಗಳ ಉಸ್ತುವಾರಿ ವಹಿಸಿಕೊಂಡಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.

ಸುರಕ್ಷತಾ ಕ್ರಮಗಳಿಲ್ಲದ ಕಾರಣಕ್ಕೆ ಬೀಗ ಜಡಿದಿದ್ದರೂ ಹಿಂಬಾಗಿಲ ಮೂಲಕ ಮದ್ಯ ಮಾರಾಟ ಮಾಡುತ್ತಿದ್ದ ‘ರಜನಿ ಬಾರ್ ಆ್ಯಂಡ್‌ ರೆಸ್ಟೊರೆಂಟ್‌’ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆ ಬಾರ್‌ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

‘ಬಾರ್‌ ಮಾಲೀಕ ದಯಾನಂದ, ವ್ಯವಸ್ಥಾಪಕ ಕೃಷ್ಣಪ್ಪ, ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೋಮಶೇಖರ್‌, ಶ್ರೀನಿವಾಸ್‌, ಕ್ಯಾಷಿಯರ್‌ಗಳಾದ ಸುನೀಲ್, ರಘು, ಸಪ್ಲೈಯರ್‌ಗಳಾದ ರಮೇಶ್, ಹರೀಶ್ ಹಾಗೂ ಆದರ್ಶ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಆ ಪೈಕಿ ಸೋಮಶೇಖರ್‌, ಕೃಷ್ಣಪ್ಪ, ದಯಾನಂದ, ಶ್ರೀನಿವಾಸ್‌ ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದ ಸೋಮಶೇಖರ್, ಆರಂಭದಲ್ಲಿ ಶಿಕ್ಷಣ ಸಂಸ್ಥೆಯೊಂದರ ಪ್ರಭಾವಿ ವ್ಯಕ್ತಿಯೊಬ್ಬರ ಅಡಿಯಲ್ಲಿ ಕೆಲಸಕ್ಕೆ ಸೇರಿದ್ದ. ಅವರ ಮೂಲಕವೇ ಆತ ನಗರದ ಬಾರ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಉಪ್ಪಾರಪೇಟೆಯಲ್ಲೇ 4 ಬಾರ್‌:

ನಗರದ ಕೇಂದ್ರ ಸ್ಥಾನವಾದ ಉಪ್ಪಾರಪೇಟೆ ಠಾಣೆಯ ವ್ಯಾಪ್ತಿಯಲ್ಲೇ ಸೋಮಶೇಖರ್‌, 4 ಬಾರ್‌ಗಳ ಉಸ್ತುವಾರಿ ವಹಿಸಿಕೊಂಡಿದ್ದಾನೆ. ರಜನಿ, ಜಿ.ಡಿ, ಮಸ್ಕಟ್‌, ಬಾಲಾಜಿ ಬಾರ್‌ಗಳು ಈತನ ಅಧೀನದಲ್ಲಿವೆ. ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಕೃಷ್ಣಪ್ಪ ವಹಿಸಿಕೊಂಡಿದ್ದಾನೆ. ಈ ಬಾರ್‌ಗಳಿಗೆ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಬೀಗ ಜಡಿದಿದ್ದಾರೆ.

‘ಒಂದು ಬಾರ್‌ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ಉಳಿದ ಮೂರು ಬಾರ್‌ಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಇದ್ದು, ಬಿಬಿಎಂಪಿ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಜತೆಗೆ ಸೋಮಶೇಖರ್‌ ಉಸ್ತುವಾರಿ ವಹಿಸಿಕೊಂಡಿರುವ ಎಲ್ಲ ಬಾರ್‌ಗಳ ಮಾಹಿತಿ ಪಡೆಯುತ್ತಿದ್ದೇವೆ. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಪತ್ರ ಬರೆಯಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬಾರ್‌ ದುರಂತ ನಿರೀಕ್ಷಕ ಸೇರಿ ಇಬ್ಬರ ಅಮಾನತು

ಕಲಾಸಿಪಾಳ್ಯದ ‘ಕೈಲಾಶ್ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌’ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಸಂಬಂಧ ಅಬಕಾರಿ ಇಲಾಖೆಯ ನಿರೀಕ್ಷಕಿ ಸೌಮ್ಯಾ ಹಾಗೂ ಉಪ ಮೇಲ್ವಿಚಾರಕ ಟಿ.ಎಂ.ಶ್ರೀನಿವಾಸ್‌ ಅವರನ್ನು ಅಮಾನತು ಮಾಡಲಾಗಿದೆ.

‘ಅವಘಡದಲ್ಲಿ ಐವರು ಕೆಲಸಗಾರರು ಮೃತಪಟ್ಟಿದ್ದಾರೆ. ಸುರಕ್ಷತಾ ಕ್ರಮಗಳಿಲ್ಲದಿರುವುದು  ಕಾರಣ ಎಂಬುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ನಿರೀಕ್ಷಕಿ ಹಾಗೂ ಉಪ ಮೇಲ್ವಿಚಾರಕ ಕರ್ತವ್ಯ ಲೋಪವೆಸಗಿದ್ದು ತಿಳಿಯಿತು. ಹೀಗಾಗಿ ಅವರ ಮೇಲೆ ಕ್ರಮ ಕೈಗೊಂಡಿದ್ದೇವೆ’ ಎಂದು ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry