ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭಾವದ ಅಡುಗೆಗೆ ಕಲ್ಯಾಣಿ ರಾಗದ ಪಾಯಸ...

Last Updated 17 ಜನವರಿ 2018, 5:32 IST
ಅಕ್ಷರ ಗಾತ್ರ

ಮೈಸೂರು: ಕಿರು ರಂಗಮಂದಿರದಲ್ಲಿ ಕಲ್ಯಾಣಿ ರಾಗದ ಕುರಿತು ಸುಮತಿ ರೂಮಿ ಹರೀಶ್‌ ಅವರು ‘ಸಂಚಾರಿ’ ಎಂಬ ಏಕವ್ಯಕ್ತಿ ನಾಟಕ ಪ್ರಯೋಗಿಸುತ್ತಿದ್ದರೆ, ವನರಂಗದಲ್ಲಿ ಜಯದೇವಿ ಜಂಗಮಶೆಟ್ಟಿ ಅವರು ತತ್ವಪದಗಳನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಹಾಡಿ ರಂಗೇರಿಸಿದರು. ಇದಕ್ಕೆ ವನರಂಗದಲ್ಲಿ ಭರ್ತಿಯಾಗಿದ್ದ ಪ್ರೇಕ್ಷಕರು ಸಾಕ್ಷಿಯಾದರು. ಇದು ರಂಗಾಯಣದಲ್ಲಿ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದ ಮೂರನೆಯ ದಿನವಾದ ಮಂಗಳವಾರದ ಚಿತ್ರಣ.

ಕಲ್ಯಾಣಿ ರಾಗದ ಬೇರೆ ಬೇರೆ ಸ್ತರಗಳನ್ನು ಸುಮತಿ ಪರಿಚಯಿಸಿದರು. ‘ಶಬ್ದಗಳು, ಅರ್ಥಗಳ ಭಾರಕ್ಕೆ ಎಷ್ಟೆಲ್ಲ ವೈವಿಧ್ಯಗಳನ್ನು ಬಿಟ್ಟುಕೊಡುತ್ತವೆ. ಅವುಗಳ ಭಾರಕ್ಕೆ ಅರ್ಥಗಳು ನಲುಗಿ ಹೋಗುತ್ತವೆ. ಅರ್ಥವೂ ಶಬ್ದವೂ ಮಾಯವಾಗಿ ರಾಗ ಮಾತ್ರ ಉಳಿದಿರುತ್ತದೆ. ನಾನೂ ಓಡಿಹೋಗಿಬಿಡಬಹುದು. ಆದರೆ, ರಾಗ ಮಾತ್ರ ಇರುತ್ತದೆ...’ ಎಂದು ಸುಮತಿ ಹೇಳುವ ಮೂಲಕ ನಾಟಕ ಮುಗಿಸಿದಾಗ ಅನೇಕರ ಕಣ್ಣುಗಳು ಒದ್ದೆಯಾಗಿದ್ದವು.

ಇತ್ತ ವನರಂಗದಲ್ಲಿ ಜಯದೇವಿ ಅವರು, ಹಜರತ್‌ ಶಹಬ್ಬಾಸ್‌ ಕಲಂದರ್‌ ಅವರ ‘ಧಮಾ ಧಮ್‌ ಮಸ್ತ್‌ ಕಲಂದರ್‌’ ಸೂಫಿ ಹಾಡುವ ಮೂಲಕ ತಮ್ಮ ಕಾರ್ಯಕ್ರಮ ಶುರು ಮಾಡಿದರು. ನಂತರ ಅಣವೀರಪ್ಪ ಅವರ ‘ದೇಹ ಕಾಣತಾದ, ದೇಹದ ರೂಪ ಕಾಣತಾದ, ಕರಿದು, ಬಿಳಿದು, ಕೆಂಪುಗಿಂಪು ಇರುವುದೆಲ್ಲ ದೇಹದ ವರ್ಣವು, ಆತ್ಮಕ್ಕೆ ಬಣ್ಣ ಇಲ್ಲ, ಬಗೆದು ನೋಡಲು ರೂಪಿಲ್ಲ...’ ಎಂದು ಸೊಗಸಾಗಿ ಹಾಡಿದರು.

ರಾಂಪುರದ ಬಕ್ಕಪ್ಪ ಅವರ ‘ಕಡೀತ ಹಾವು ಕಡೀತ, ಬೇವು ತಿಂದ ಬಾಯಿ ಬೆಲ್ಲದಂತಾಗಿತ್ತು’, ಅಮೀರ್ ಖುಶ್ರೊ ಅವರ ‘ಮನ್‌ಕುಂತೊ ಮೌಲಾ’ ಸೂಫಿ ಹಾಡಿದರು. ಬತ್ತಲೇಶ್ವರ ಅವರ ‘ಹಾರಿತೋ ಹಂಸ ಹಾರಿತೋ’, ಕಡಕೊಳ ಮಡಿವಾಳಪ್ಪ ಅವರ ‘ತನ್ನ ತಾನು ತಿಳಿದ ಮ್ಯಾಲ ಇನ್ನೇನು ಇನ್ನೇನು, ತನ್ನಂತೆ ಪರರ ಜೀವ ಮನ್ನಿಸಿ ಮೂಕಾದ ಮೇಲೆ ಇನ್ನೇನು ಇನ್ನೇನು...’,  ನಿಜಗುಣ ಶಿವಯೋಗಿಗಳ ‘ಕೋಗಿಲೆ ಚೆಲ್ವ ಕೋಗಿಲೆ’, ಸರ್ಪಭೂಷಣ ಶಿವಯೋಗಿಗಳ ‘ಅನುಭಾವದ ಅಡಿಗೆಯ ಮಾಡಿ, ಅದಕ್ಕನುಭಾವಿಗಳು ಬಂದು, ನೀವೆಲ್ಲ ಕೂಡಿ, ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಜಂಜಡವೆಂಬ ಮುಸುರೆಯ ತೊಳೆದು...’ ಹಾಡಿದಾಗ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT