ಸುರಪುರ: ಪ್ರಜ್ವಲಿಸಿದ ಸಹಸ್ರ ದೀಪೋತ್ಸವ

7

ಸುರಪುರ: ಪ್ರಜ್ವಲಿಸಿದ ಸಹಸ್ರ ದೀಪೋತ್ಸವ

Published:
Updated:
ಸುರಪುರ: ಪ್ರಜ್ವಲಿಸಿದ ಸಹಸ್ರ ದೀಪೋತ್ಸವ

ಸುರಪುರ: ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶ್ರೀಕೃಷ್ಣ ಜಪಮಾಲಾ ಸೇವಾ ಸಮಿತಿ ಸದಸ್ಯರು ಸೋಮವಾರ ಸಹಸ್ರ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದರು. ದೇವಸ್ಥಾನದಲ್ಲಿ ಸಂಜೆ ಜರುಗಿದ ದೀಪೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಯುವಕ, ಯುವತಿಯರು ಮತ್ತು ಗೃಹಣಿಯರು ಮಕ್ಕಳೊಂದಿಗೆ ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದು ದೀಪಗಳನ್ನು ಹಚ್ಚುವ ಮೂಲಕ ಭಕ್ತಿ ಭಾವ ಮೆರೆದರು. ದೇವಸ್ಥಾನದ ನವರಂಗ ಮತ್ತು ಮೆಟ್ಟಿಲುಗಳ ಮೇಲೆ ಹಣತೆಗಳನ್ನು ಸಾಲಾಗಿ ಇಡಲಾಗಿತ್ತು. ಅರಸು ಮನೆತನದ ರಾಜಾ ಲಕ್ಷ್ಮಿನಾರಾಯಣ ನಾಯಕ ಸಾಂಪ್ರದಾಯದಂತೆ ಬಾಜಾ ಭಜಂತ್ರಿಯೊಂದಿಗೆ ದೇವಸ್ಥಾನಕ್ಕೆ ಬಂದರು. ದೇವರಿಗೆ ಮಂಗಳಾರತಿ ನೆರವೇರಿಸಿದರು. ನಂತರ ಸಹಸ್ರ ದೀಪಾರಾಧನೆಗೆ ಚಾಲನೆ ನೀಡಿದರು. ಮಕ್ಕಳು ದೀಪಗಳನ್ನು ಸ್ವಾಸ್ತಿಕ ಮತ್ತು ಓಂ ಆಕಾರದಲ್ಲಿ ಹಚ್ಚಿ ಮನರಂಜನೆ ಪಡುವುದು ನೋಡುಗರ ಕಣ್ಮನ ಸೆಳೆಯಿತು.

15 ದಿನಗಳಿಂದ ದೇವಸ್ಥಾನದಲ್ಲಿ ಜಪಮಾಲಾಧಾರಿಗಳು ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಓಂ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸುತ್ತಿದ್ದರು. ಸಂಕ್ರಾಂತಿಯ ದಿನ ಸೋಮವಾರ ನದಿ ಸ್ನಾನ ಮಾಡಿ ಮಂಗಳಸ್ತೋತ್ರ ಮಾಡಿದರು. ವೇಣು ಗೋಪಾಲನಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೀಪೋತ್ಸವದ ಅಂಗವಾಗಿ ವೇಣುಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೂಜೆ, ನೈವೇದ್ಯ, ಮಹಾಮಂಗಳಾರುತಿ ಜರುಗಿತು. ದೇವರ ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು. ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.

ನಂತರ ದೇವಸ್ಥಾನದ ವೈಕುಂಠ ದ್ವಾರದಿಂದ ಪಲ್ಲಕ್ಕಿ ಪ್ರವೇಶ ನಡೆಯಿತು. ಭಕ್ತರು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರು. ನಂತರ ಪರಸ್ಪರ ಕುಸರೆಳ್ಳು ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry