20ರಂದು ಉದ್ಯೋಗ ಮೇಳ

7

20ರಂದು ಉದ್ಯೋಗ ಮೇಳ

Published:
Updated:
20ರಂದು ಉದ್ಯೋಗ ಮೇಳ

ಬಳ್ಳಾರಿ: ‘ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಿಗಮದ ನೇತೃತ್ವದಲ್ಲಿ ನಗರದ ರಾವ್‌ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜ.20ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ’ ಎಂದು ಸಂಸದ ಬಿ.ಶ್ರೀರಾಮುಲು ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಡಾ.ಡಿ.ಎಲ್‌.ರಮೇಶ್‌ಗೋಪಾಲ್‌ ತಿಳಿಸಿದರು.

‘ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವೀಧರರು ಮೇಳದಲ್ಲಿ ಪಾಲ್ಗೊಳ್ಳಬಹುದು’ ಎಂದು ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಕಿಲ್‌ ಆನ್‌ ವೀಲ್ಸ್‌: ‘ಯುವ ಉದ್ದಿಮೆದಾರರನ್ನು ಬಲಿಷ್ಠಗೊಳಿಸಲು ನಿಗಮವು ರೂಪಿಸಿರುವ ಸ್ಕಿಲ್‌ ಆನ್‌ ವೀಲ್ಸ್‌ ಕಾರ್ಯಕ್ರಮದ ಅಂಗವಾಗಿ ನಗರದ ನಕ್ಷತ್ರ ಹೋಟೆಲ್‌ನಲ್ಲಿ ಕೈಗಾರಿಕೋದ್ಯಮಿಗಳೊಡನೆ ಸಚಿವರು ಸಂವಾದ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಿನ್ನಡೆಯಾಗಿರುವ ಕುರಿತು ಅವರ ಗಮನ ಸೆಳೆಯಲಾಗುವುದು’ ಎಂದು ರಮೇಶ್‌ಗೋಪಾಲ್‌ ತಿಳಿಸಿದರು.

ವಿಳಂಬ: ಕೌಶಲ ಅಭಿವೃದ್ಧಿ ಕಾಲೇಜು ಸ್ಥಾಪನೆ ಸಂಬಂಧ ಮುಂಡ್ರಿಗಿ ಕೈಗಾರಿಕೆ ಪ್ರದೇಶದಲ್ಲಿ 2 ಎಕರೆ ಜಮೀನು ನೀಡುವುದಾಗಿ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹ್‌ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ’ ಎಂದು ಡಾ.ರಮೇಶ್‌ ವಿಷಾದಿಸಿದರು.

ಮಾಹಿತಿ ಇಲ್ಲ: ‘2015ರಲ್ಲಿ ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದಲ್ಲೂ ಸಂಸ್ಥೆಯು ಸಹಯೋಗ ನೀಡಿತ್ತು. ಆದರೆ ಆಗ ಎಷ್ಟು ಮಂದಿಗೆ ಉದ್ಯೋಗ ನೀಡಲಾಯಿತು ಎಂಬ ಬಗ್ಗೆ ಉದ್ಯೋಗದಾತ ಸಂಸ್ಥೆಗಳು ಮಾಹಿತಿ ನೀಡಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಉದ್ಯೋಗಿಗಳ ಮಾಹಿತಿ ನೀಡದ ಜಿಂದಾಲ್‌’

‘ಚಾಲಕರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಸೇರಿದಂತೆ ತಳಮಟ್ಟದ ಉದ್ಯೋಗಗಳಿಗೆ ಕೂಡ ಜಿಂದಾಲ್‌ ಸಂಸ್ಥೆಯು ಕನ್ನಡಿಗರನ್ನು ನೇಮಿಸುತ್ತಿಲ್ಲ. ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆಯೇ ಸಭೆಯೊಂದರಲ್ಲಿ ಆಕ್ಷೇಪಿಸಿದ್ದೆ’ ಎಂದು ಡಾ.ರಮೇಶ್‌ಗೋಪಾಲ್‌ ಸ್ಮರಿಸಿದರು.

‘ನಂತರ ಮಾಹಿತಿ ನೀಡುವುದಾಗಿ ಸಂಸ್ಥೆಯು ಆಹ್ವಾನಿಸಿತ್ತು. ಅಲ್ಲಿಗೆ ತೆರಳಿದಾಗ ಸಂಸ್ಥೆಯ ಕಚೇರಿಯ ಬಾಗಿಲಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ನನಗೆ ಹಿಂದಿಯಲ್ಲಿ ಸೂಚನೆ ನೀಡಿದರು. ಇದು ಅಲ್ಲಿನ ನಿಜವಾದ ವ್ಯವಸ್ಥೆ’ ಎಂದರು.

ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಂಸದ ಶ್ರೀರಾಮುಲು, ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಜಾರಿಗೆ ಬಂದರೆ ಮಾತ್ರ ಸನ್ನಿವೇಶದಲ್ಲಿ ಬದಲಾವಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅಭಿವೃದ್ಧಿಯಲ್ಲಿ ರಾಜಕೀಯ’

‘ನಗರದಲ್ಲಿ ಆಧುನಿಕ ಶೌಚಾಲಯವನ್ನು ನಿರ್ಮಿಸಿ, ನಿರ್ವಹಿಸಲು ಸಂಸ್ಥೆಗೆ ಅನುವು ಮಾಡಲು ಪಾಲಿಕೆಯು ನಿರ್ಣಯಿಸಿದ್ದ ಕಡತವೇ ನಾಪತ್ತೆಯಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗಲಿಲ್ಲ’ ಎಂದು ಡಾ.ರಮೇಶ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಸಂಸ್ಥೆಯ ಮುಂಭಾಗದ ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ, ಪಾದಚಾರಿ ರಸ್ತೆ ನಿರ್ಮಾಣದ ಪ್ರಸ್ತಾಪವನ್ನೂ ಪಾಲಿಕೆ ನಿರ್ಲಕ್ಷ್ಯಿಸಿತು. ಹಿಂದಿನ ಆಯುಕ್ತರು ಸಂಸ್ಥೆಗೆ ಈ ಜವಾಬ್ದಾರಿ ಕೊಡಬಾರದು ಎಂಬ ಉದ್ದೇಶದಿಂದಲೇ ಕೊಡಲಿಲ್ಲ. ಅದಕ್ಕೆ ಯಾರು ಕಾರಣರು ಎಂಬುದು ನಿಮಗೂ ಗೊತ್ತು’ ಎಂದ ಅವರು, ಯಾರೆಂದು ಹೆಸರನ್ನು ಹೇಳಲಿಲ್ಲ.

* * 

ಹಿಂದಿನ ಸರ್ಕಾರಗಳು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸದೇ ಇದ್ದುದಕ್ಕೆ ವಿಷಾದವಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ವರದಿ ಜಾರಿಗೊಳಿಸಲಾಗುವುದು

ಬಿ.ಶ್ರೀರಾಮುಲು, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry