ಆಟ, ಪಾಠದಲ್ಲಿ ಗುತ್ತಿ ಶಾಲೆ ಸಾಧನೆ

7

ಆಟ, ಪಾಠದಲ್ಲಿ ಗುತ್ತಿ ಶಾಲೆ ಸಾಧನೆ

Published:
Updated:
ಆಟ, ಪಾಠದಲ್ಲಿ ಗುತ್ತಿ ಶಾಲೆ ಸಾಧನೆ

ಬಸವಕಲ್ಯಾಣ: ತಾಲ್ಲೂಕಿನ ಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಾತ್ಮಕ ಶಿಕ್ಷಣದ ಮೌಲ್ಯಮಾಪನದಲ್ಲಿ ಎರಡು ಸಲ ಉತ್ತಮ ಶಾಲೆಯೆಂದು ಆಯ್ಕೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ 169 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆಟ, ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಮೇತ್ರೆ.

`ಪ್ರತಿಭಾ ಕಾರಂಜಿಯಲ್ಲಿ ಭಾವಗೀತೆ, ಸಮೂಹ ನೃತ್ಯ, ಭಾಷಣ ಸ್ಪರ್ಧೆಯಲ್ಲಿ ಶುಭಾಂಗಿ, ಮೇಘಾ, ಬಾಲಾಜಿ, ಪ್ರಾರ್ಥನಾ ಕೃಷ್ಣಾ, ಮಹಾದೇವ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದರು. ಶಾಲೆಯಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಬ್ಬದಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಕ್ಕಳು ಆಸಕ್ತಿಯಿಂದ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುತ್ತಾರೆ ’ ಎಂದು ಶಿಕ್ಷಕರಾದ ಹರಿನಾಥ ಪಾಟೀಲ, ಸುರೇಖಾ ಗೋಡಬೋಲೆ ಹೇಳಿದ್ದಾರೆ.

‘ಈಚೆಗೆ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಸ್ಥಾಪಿಸಲಾಗಿದೆ. ಪರಿಸರ ಸಂರಕ್ಷಣಾ ಸಮಿತಿ ಒಳಗೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ’ ಎಂದು ವಿಜ್ಞಾನ ಶಿಕ್ಷಕ ಮಲ್ಲಪ್ಪ ಮೇತ್ರೆ ಹೇಳಿದ್ದಾರೆ.

‘ಹೋಬಳಿ ಮತ್ತು ತಾಲ್ಲೂಕುಮಟ್ಟದ ಕ್ರೀಡೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕಬಡ್ಡಿ ಮತ್ತು ಓಟ, ಉದ್ದ ಜಿಗಿತದಲ್ಲಿ ಪಾಲ್ಗೊಂಡಿದ್ದರು’ ಎಂದು ಶಿಕ್ಷಕಿಯರಾದ ಗಾಯತ್ರಿ ಸಗ್ಗಂ, ಶಾಲುಬಾಯಿ ಪಾಟೀಲ ತಿಳಿಸಿದ್ದಾರೆ.

`ಶಿಕ್ಷಕರ ನಿರಂತರ ಪರಿಶ್ರಮದಿಂದ ಶಾಲೆಯು ಉತ್ತಮ ಸಾಧನೆ ತೋರುತ್ತಿದೆ. ದೈಹಿಕ ಶಿಕ್ಷಕರ ಹುದ್ದೆ ಬಹಳಷ್ಟು ವರ್ಷಗಳಿಂದ ಖಾಲಿಯಿದ್ದು ಅದನ್ನು ಭರ್ತಿ ಮಾಡಬೇಕು. ಕಂಪ್ಯೂಟರ್ ಕಲಿಕೆಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಂಥಾಲಯ ಮತ್ತು ವಿಜ್ಞಾನ ಪ್ರಯೋಗಾಲಯಕ್ಕೆ ಪ್ರತ್ಯೇಕ ಕೊಠಡಿಗಳನ್ನು ಒದಗಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ಬಿರಾದಾರ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry