ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

7

ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

Published:
Updated:
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

ಹನೂರು:‌ ತಾಲ್ಲೂಕಿನ ಕೂಡ್ಲೂರಿನಲ್ಲಿ ಮಂಗಳವಾರ ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರದಿಂದ ಜರುಗಿತು. ರಾಜ್ಯದ ಗಡಿಯಂಚಿನಲ್ಲಿರುವ ಕೂಡ್ಲೂರು ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಜರುಗುವ ಜಾತ್ರೆ ಈ ಭಾಗದಲ್ಲಿ ನಡೆಯುವ ಅತ್ಯಂತ ದೊಡ್ಡ ಜಾತ್ರೆ ಎಂದೇ ಇದು ಪ್ರಸಿದ್ಧಿ ಪಡೆದಿದೆ.

ಏಳುದಂಡು ಮುನೇಶ್ವರ ಈ ಭಾಗದ ಅತ್ಯಂತ ಪ್ರಭಾವಿ ದೇವರು ಎಂಬುದು ಇಲ್ಲಿನ ಜನರ ನಂಬಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಹಾಗೂ ಕೇರಳದ ಭಕ್ತರು ತಾವು ತಂದಿದ್ದ ಕೋಳಿ, ಕುರಿ ಮೇಕೆಗಳನ್ನು ಇಷ್ಟಾರ್ಥ ದೇವರಿಗೆ ಸಮರ್ಪಿಸಿ ಹರಕೆ ತೀರಿಸಿದರು.

ಟೆಂಪೊ, ಗೂಡ್ಸ್ ಆಟೊ, ಲಾರಿ, ದ್ವಿಚಕ್ರ ವಾಹನಗಳಲ್ಲಿ ಭಕ್ತರ ದಂಡು ಬಂದಿತ್ತು. ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ತ್ರಿಶೂಲಗಳಿಗೆ ಗಂಟೆ ಕಟ್ಟಿ ಹರಕೆ ಸಲ್ಲಿಸಿ. ಆವರಣದಲ್ಲಿ ಪೊಂಗಾಲ್‌ ತಯಾರಿಸಿ ದೇವಾಲಯದ ಮುಂಭಾಗದ ಮೆಟ್ಟಿಲಿನಲ್ಲಿ ಎಡೆ ಅರ್ಪಿಸಿ ತುಪ್ಪದ ದೀಪ ಹಚ್ಚಿ ಭಕ್ತಿಯ ಪರಾಕಾಷ್ಠೆ ಮೆರೆದರು.

‘30 ವರ್ಷಗಳಿಂದ ಜಾತ್ರೆಗೆ ಬಂದು ಹರಕೆ ಸಲ್ಲಿಸುತ್ತಿದ್ದೇವೆ. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಪ್ರಾಣಿಬಲಿ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ಬೇಸರದ ಸಂಗತಿ. ಒಂದು ಸಮುದಾಯದ ಆಹಾರ ಪದ್ಧತಿ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಂತಹ ಈ ಜಾತ್ರೆಗೆ ಪ್ರಾಣಿಬಲಿ ಜಾತ್ರೆ ಎಂದು ಹೇಳುವುದು ಸರಿಯಲ್ಲ’ ಎಂದು ತಮಿಳುನಾಡಿನ ಭಕ್ತ ವೀರಸ್ವಾಮಿ ತಮ್ಮ ಅಸಮಾಧಾನ ತೋಡಿಕೊಂಡರು.

ಜಾತ್ರೆಗೆ ಬೆಳಿಗ್ಗೆಯಿಂದಲೇ ಸಾಕಷ್ಟು ವಾಹನಗಳು ಬಂದಿದ್ದರಿಂದ ಸಂಚಾರ ದಟ್ಟಣೆಯಾಯಿತು. ಅಲದೇ, ದೇವರ ಪೂಜೆಗೆ ಭಕ್ತರು ಏಕಾಏಕಿ ಮುಂದಾದ ಹಿನ್ನಲೆಯಲ್ಲಿ ಭಾರಿ ನೂಕು ನುಗ್ಗಲು ಉಂಟಾಗಿ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಬಿಗಿ ಭದ್ರತೆ: ಜಾತ್ರೆಯಲ್ಲಿ ಪ್ರಾಣಿಬಲಿಯನ್ನು ತಡೆಗಟ್ಟುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಪ್ರತಿಷ್ಠೆಯೆ ಪ್ರಶ್ನೆಯಾಗಿದ್ದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಾಲ್‌ರೋಡ್‌್, ನೆಲ್ಲೂರು ಹಾಗೂ ಕೂಡ್ಲೂರು ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಜಾತ್ರೆಗೆ ಆಗಮಿಸುವ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry