ರಂಗನಾಥಸ್ವಾಮಿ ರಥೋತ್ಸವ ಇಂದು

7

ರಂಗನಾಥಸ್ವಾಮಿ ರಥೋತ್ಸವ ಇಂದು

Published:
Updated:
ರಂಗನಾಥಸ್ವಾಮಿ ರಥೋತ್ಸವ ಇಂದು

ಕಡೂರು: ತಾಲ್ಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಶಕುನ ರಂಗನಾಥಸ್ವಾಮಿ ರಥೋತ್ಸವ ಇದೇ 17ರಂದು ನಡೆಯಲಿದೆ. ಪ್ರಾತಃಕಾಲದಲ್ಲಿ ರಂಗನಾಥಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಹಣ್ಣುತುಪ್ಪ ಮಂಡೆಸೇವೆ ನಡೆಯಲಿದ್ದು, ಮಧ್ಯಾಹ್ನ ಶ್ರೀಯವರ ಉತ್ಸವ ವಿಗ್ರಹವನ್ನು ಬಿಡದಿ ಮನೆಗೆ ಕೊಂಡೊಯ್ಯಲಾಗುವುದು. ನಂತರ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ 9. 30ಕ್ಕೆ ಬಿಡದಿ ಮನೆಯಿಂದ ವಾದ್ಯಗೋಷ್ಠಿ ಸಮೇತ ಶ್ರೀಯವರ ವಿಗ್ರಹವನ್ನು ಮೆರವಣಿಗೆ ಮೂಲಕ ಕರೆತಂದು ರಥಾರೋಹಣ ನಡೆಸಲಾಗುತ್ತದೆ.

ಗುರುವಾರ ಬೆಳಿಗ್ಗೆ ಮೂಲದೇವರಿಗೆ ಪಂಚಾಮೃತ ಅಭಿಷೇಕದ ಕೆಂಚರಾಯಸ್ವಾಮಿ ಸೇವೆ ಇರುತ್ತದೆ. ರಾಜ್ಯದ ವಿವಿಧೆಡೆಗಳಿಂದ ಭಕ್ತಾದಿಗಳು ಬರಲಿದ್ದು, ಮೂಲಸೌಕರ್ಯ ಒದಗಿಸಲು ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.

ಕ್ಷೇತ್ರದ ಇತಿಹಾಸ: ಶಕುನರಂಗನಾಥಸ್ವಾಮಿ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಹೊಯ್ಸಳ ದೊರೆ ಒಂದನೇ ಬಲ್ಲಾಳನಿಂದ ಈ ದೇವಾಲಯ ಸ್ಥಾಪಿತವಾಯಿತು ಎಂಬ ಬಗ್ಗೆ ದಾಖಲೆಗಳಿವೆ. ವಾಸ್ತವವಾಗಿ ಈ ವಿಗ್ರಹ ವೆಂಕಟೇಶ್ವರ ವಿಗ್ರಹ ಎಂದು ಹಲವರ ಅಭಿಪ್ರಾಯ.

ಹಿಂದೆ ಟಿಪ್ಪುಸುಲ್ತಾನ್ ಈ ದಾರಿಯಲ್ಲಿ ಬಂದಾಗ ಈ ದೇಗುಲದ ಮೇಲೆ ದಾಳಿ ಮಾಡಬಹುದು ಎಂಬ ಅನುಮಾನದಿಂದ ದೇವರನ್ನು ರಕ್ಷಿಸಿಕೊಳ್ಳಲು ರಂಗನಾಥ ಎಂಬ ಹೆಸರಿಟ್ಟರು ಎಂಬ ಪ್ರತೀತಿ ಇದೆ. ಸಖರಾಯಪಟ್ಟಣದ ಹತ್ತಿರದಲ್ಲೇ ಶಕುನಗಿರಿ ಎಂಬ ಬೆಟ್ಟ ಇರುವುದರಿಂದ ಈ ರಂಗನಾಥನನ್ನು ಶಕುನ ರಂಗನಾಥಸ್ವಾಮಿ ಎಂದು ಕರೆಯುತ್ತಾರೆ. ಭಕ್ತರು ಶಕುನ ರಂಗ, ಸಗುನಿ ರಂಗ ಎಂದೂ ಕರೆಯುತ್ತಾರೆ.

ಶ್ರೀ ವೈಷ್ಣವ ಸಂಪ್ರಾದಾಯದ ಪಾಂಚಾರಾತ್ರಾಗಮ ಪದ್ಧತಿಯಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಮೂಲ ವಿಗ್ರಹ ಹೊಯ್ಸಳ ಶೈಲಿಯಲ್ಲಿದ್ದು, ಗರುಡಪೀಠದ ಮೇಲೆ ಕೈಗಳಲ್ಲಿ ಶಂಖ, ಚಕ್ರ, ಬಿಲ್ಲು ಮತ್ತು ಬಾಣ ಹಿಡಿದು ನಿಂತಿರುವುದು ವಿಶೇಷ. ಈ ಕಾರಣದಿಂದ ಇದನ್ನು ರಾಮಚಂದ್ರನ ವಿಗ್ರಹ ಎಂದು ಹಲವರು, ಇನ್ನು ಹಲವರು ಚೆನ್ನಕೇಶವ ಎಂದೂ ಕರೆಯುತ್ತಾರೆ. ಈ ದೇವರ ರಥೋತ್ಸವ ರಾತ್ರಿ ಸಮಯದಲ್ಲಿಯೇ ನಡೆಯುವುದು ವಿಶೇಷ.

ಗೋವಿಂದಾ.. ಗೋವಿಂದಾ..

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವದ ವೇಳೆ ಗೋವಿಂದಾ.. ಗೋವಿಂದಾ.. ಎಂದು ನಾಮಸ್ಮರಣೆ ಮಾಡುತ್ತಾರೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಹೊರ ಜಿಲ್ಲೆಗಳಿಂದ ಮತ್ತು ಸಖರಾಯಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿಭಕ್ತರಿಗೂ ರಥೋತ್ಸವದ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ಈಚೆಗೆ ದೇವಸ್ಥಾನದ ವತಿಯಿಂದ ಪ್ರತಿ ಶನಿವಾರ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಬಾಲುಮಚ್ಚೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry