ಪಾದಚಾರಿ ಮಾರ್ಗದಲ್ಲಿ ಆಟೊ ನಿಲ್ದಾಣ!

7

ಪಾದಚಾರಿ ಮಾರ್ಗದಲ್ಲಿ ಆಟೊ ನಿಲ್ದಾಣ!

Published:
Updated:
ಪಾದಚಾರಿ ಮಾರ್ಗದಲ್ಲಿ ಆಟೊ ನಿಲ್ದಾಣ!

ನರಸಿಂಹರಾಜಪುರ: ಪಟ್ಟಣದ ಹೃದಯ ಭಾಗವಾಗಿರುವ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಪಾದಚಾರಿ ಮಾರ್ಗದ ಮೇಲೆಯೇ ಸೋಮವಾರ ರಾತ್ರೋರಾತ್ರಿ ಆಟೊನಿಲ್ದಾಣ ನಿರ್ಮಾ ಣಕ್ಕೆ ಮುಂದಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸಂತೆ ಮಾರುಕಟ್ಟೆ, ಬ್ಯಾಂಕ್, ಮಸೀದಿ, ಔಷಧ ಅಂಗಡಿಗಳು ಇದ್ದು, ಇಲ್ಲಿ ಸದಾ ಜನಭರಿತ ಪ್ರದೇಶವಾಗಿರುತ್ತದೆ. ಅಲ್ಲದೆ, ಈ ವ್ಯಾಪ್ತಿಯಲ್ಲಿ ಪರ್ಯಾಯ ದಿನಗಳಲ್ಲಿ ಒಂದೊಂದು ಕಡೆಗಳಲ್ಲಿ ವಾಹನ ನಿಲುಗಡೆಗೂ ಸ್ಥಳ ನಿಗದಿ ಮಾಡಿರುವುದರಿಂದ ರಸ್ತೆ ಮೇಲೆಯೇ ಸಾರ್ವಜನಿಕರು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬಸ್ ನಿಲ್ದಾಣದಿಂದ ಪಟ್ಟಣ ಪಂಚಾಯಿತಿಯ ಸಮೀಪದವರೆಗೂಈ ಪಾದಚಾರಿ ರಸ್ತೆಯ ಮೂಲಕವೇ ಶಾಲಾ ಮಕ್ಕಳು ಪ್ರತಿನಿತ್ಯ ಓಡಾಟ ನಡೆಸುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳು ಸಹ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಆದರೆ, ಪಾದಚಾರಿ ಮಾರ್ಗದ ಮೇಲೆ ಆಟೊ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಶಾಲಾ ಮಕ್ಕಳು, ವೃದ್ಧರು ಪ್ರಮುಖ ರಸ್ತೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ನಡೆಸುವ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯಿಂದ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡು ಕಡೆ ವಿಸ್ತರಣೆ ಮಾಡಿ, ಪಾದಚಾರಿ ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯವರೇ ಆಡಳಿತ ನಡೆಸುತ್ತಿದ್ದು, ಅವರೇ ನಿರ್ಮಿಸಿದ ಪಾದಚಾರಿ ರಸ್ತೆಯ ಮೇಲೆ ಆಟೋ ನಿಲ್ದಾಣ ನಿರ್ಮಾಣ ಮಾಡಲು ಅವಕಾಶ ಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂಬುದು ಸ್ಥಳೀಯರ ದೂರು.

ಪಟ್ಟಣ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತದಿರುವುದು ಜನಸಾಮಾನ್ಯರ ಬಗ್ಗೆ ಅವರ ನಿರ್ಲಕ್ಷ್ಯ ನೀತಿಯನ್ನು ತೋರಿಸುತ್ತದೆ. ಕೆಲವೇ ಜನರ ಹಿತ ಕಾಪಾಡಲು ಸಾವಿರಾರು ಜನರಿಗೆ ತೊಂದರೆ ಮಾಡಲು ಜನಪ್ರತಿನಿಧಿಗಳು ಕೈಗೊಂಡಿರುವ ನಿರ್ಧಾರದ ಸರಿಯಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನಾಗರಿಕರೊಬ್ಬರು ತಿಳಿಸಿದರು. ಈ ಬಗ್ಗೆ ‘ಪ್ರಜಾವಾಣಿ’ ಮುಖ್ಯಾಧಿ ಕಾರಿ ಕುರಿಯಾಕೋಸ್ ಅವರನ್ನು ಸಂಪರ್ಕಿಸಿದಾಗ, ಆಟೊ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದರು.

* * 

ಪಾದಚಾರಿ ಮಾರ್ಗದ ಮೇಲೆ ಆಟೊ ನಿಲ್ದಾಣ ನಿರ್ಮಾಣ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಾಧಿಕಾರಿಗೆ ಗಮನ ಹರಿಸಲು ಸೂಚಿಸಲಾಗುವುದು. ಶ್ರೀರಂಗಯ್ಯ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry