ಟೆಂಡರ್ ರದ್ದತಿಗಾಗಿ ರೈತರ ಪ್ರತಿಭಟನೆ

7

ಟೆಂಡರ್ ರದ್ದತಿಗಾಗಿ ರೈತರ ಪ್ರತಿಭಟನೆ

Published:
Updated:
ಟೆಂಡರ್ ರದ್ದತಿಗಾಗಿ ರೈತರ ಪ್ರತಿಭಟನೆ

ಚಿತ್ರದುರ್ಗ: ‘ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಮರಳು ದಂಧೆ ತಡೆಯಲು ಕೂಡಲೇ ಟೆಂಡರ್ ರದ್ದುಗೊಳಿಸಿ, ರೈತರ ಜೀವ ಉಳಿಸಿ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿರುವಾಗಲೇ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಕುಳಿತ ಕಾರ್ಯಕರ್ತರು ಮತ್ತು ಮೂರೂ ತಾಲ್ಲೂಕುಗಳ ಕೆಲ ಗ್ರಾಮಸ್ಥರು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ, ಟೆಂಡರ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ಹೊರಕೇರಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಇರುವ ಪ್ರಮುಖ ನದಿ ವೇದಾವತಿ. ಇದು ಕೆಲವರಿಗೆ ಜೀವನದಿಯೂ ಹೌದು. ಆದರೆ, ಇಲ್ಲಿನ ದಡದ ತೀರದಲ್ಲಿ ಮರಳು ದಂಧೆ ಹೆಚ್ಚಾಗಿರುವ ಕಾರಣ ವಿವಿಧ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ’ ಎಂದು ದೂರಿದರು.

‘ಕಲಮರಹಳ್ಳಿ, ಗೊರ್ಲತ್ತು, ಸಾಲಹುಣಸೆ, ಹೊಸಹಳ್ಳಿ, ಯಳವರಹಟ್ಟಿ ಇನ್ನೂ ಮುಂತಾದ ಗ್ರಾಮಗಳ ಮಧ್ಯೆ ವೇದಾವತಿ ನದಿ ಹರಿಯುತ್ತದೆ. ಈ ನದಿ ದಡದ ಮರಳನ್ನು ತೆಗೆದು ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ಪೂರೈಸಲು 2012ರಲ್ಲಿ ಪರವಾನಗಿ ನೀಡಲಾಗಿತ್ತು. 2013ರಿಂದ 2015ರವರೆಗೂ ಖಾಸಗಿಯವರಿಗೆ ನೀಡಲಾಗಿದೆ. ಅದು ಈಗಲೂ ಮುಂದುವರೆದಿದ್ದು, ಪ್ರತಿ ನಿತ್ಯ ನದಿ ದಡದ ತೀರದಿಂದ ನಿಯಮ ಬಾಹಿರವಾಗಿ ನೂರಾರು ಲೋಡ್ ಮರಳು ಸಾಗಾಣೆ ಆಗುತ್ತಿದೆ’ ಎಂದು ಆರೋಪಿಸಿದರು.

ಮರಳು ತೆಗೆಯಲು ಸರ್ಕಾರದ ನಿಯಮಾನುಸಾರ ಜಿಲ್ಲಾಡಳಿತದಿಂದ ಕೆಲವರು ಟೆಂಡರ್ ಪಡೆದಿದ್ದಾರೆ. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮವನ್ನು ಗಾಳಿಗೆ ತೂರಿ ಒಂದು ಮೀಟರ್ ಬದಲು ಎರಡರಿಂದ ಮೂರು ಮೀಟರ್ ಆಳ ತೆಗೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು.

ಇದರಿಂದಾಗಿ ಈ ಭಾಗದ ರೈತರ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಅಡಿಕೆ, ತೆಂಗು, ದಾಳಿಂಬೆ ತೋಟ ಒಣಗಿ ಹೋಗಿವೆ. ಅವುಗಳನ್ನು ಉಳಿಸಿಕೊಳ್ಳಲು ಪುನಃ ಕೊಳವೆಬಾವಿ ಕೊರೆಸಲು ಮುಂದಾಗಿ ರೈತರು ಸಾಲಗಾರರಾಗಿದ್ದಾರೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.

ಮರಳು ದಂಧೆಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ರಕ್ಷಣೆಯಾಗಿ ನಿಂತಿದ್ದಾರೆ. ತಡೆಯಲು ಹೋದ ರೈತರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಅನೇಕ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ವಾಹನ ವಶಕ್ಕೆ ಪಡೆದರು ಕೂಡ ದಂಡ ಕಟ್ಟಿ ಮರುದಿನ ಪುನಃ ಇದೇ ಮರಳು ಸಾಗಾಣೆಗೆ ಬಳಕೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರಿದರು.

ಹರಿಯಬ್ಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಶ್ ಮಾತನಾಡಿ, ‘ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೆ, ಅನೇಕ ರೈತರು ಸಂಕಷ್ಟದಲ್ಲಿದ್ದಾರೆ. ಈಚೆಗೆ ಸುರಿದ ಮಳೆಯಿಂದಾಗಿ ನೀರಿನ ಸಮಸ್ಯೆ ಕಡಿಮೆಯಾಗಿದ್ದು, ಪರವಾನಗಿ ರದ್ದುಗೊಳಿಸಿದರೆ ರೈತರಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಇದನ್ನು ತಡೆಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ನಿಜಲಿಂಗಪ್ಪ, ಶಿವಣ್ಣ, ರಾಮಚಂದ್ರಪ್ಪ, ರಂಗಪ್ಪ, ರಾಮಣ್ಣ, ಪಾಂಡುರಂಗಪ್ಪ, ನೂರಾರು ರೈತರೂ ಇದ್ದರು.

* * 

‘ಜನ ಮೃತಪಟ್ಟರೆ ಜಿಲ್ಲಾಡಳಿತವೇ ಹೊಣೆ’

‘ನಮ್ಮ ಗ್ರಾಮಗಳಲ್ಲಿ ಉಸಿರುಗಟ್ಟಿ ಸಾಯುವಂಥ ವಾತಾವರಣವಿದೆ. ಮರಳು ಸಾಗಣೆ ನಿಲ್ಲದಿದ್ದರೆ, ಸಾವಿನ ಸರಮಾಲೆ ನಿರಂತರವಾಗಿ ಮುಂದುವರಿಯಲಿದೆ. ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ. ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ರೈತರಾದ ಗಾಯತ್ರಿದೇವಿ, ರತ್ನಮ್ಮ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry