ಮೂಲಭೂತ ಸೌಕರ್ಯ ಒದಗಿಸುವಂತೆ ಭಕ್ತರ ಮನವಿ

7

ಮೂಲಭೂತ ಸೌಕರ್ಯ ಒದಗಿಸುವಂತೆ ಭಕ್ತರ ಮನವಿ

Published:
Updated:

ಉಚ್ಚಂಗಿದುರ್ಗ: ಹರಪನಹಳ್ಳಿ ತಾಲ್ಲೂಕು ವ್ಯಾಪ್ತಿಗೊಳಪಡುವ ಉಚ್ಚಂಗಿದುರ್ಗದಲ್ಲಿ ಐತಿಹಾಸಿಕ ಉಚ್ಚಂಗಿ ಎಲ್ಲಮ್ಮ ದೇವಿಯ ಸನ್ನಿಧಾನವಿದೆ. ಪ್ರತಿವರ್ಷ ಸಾವಿರಾರು ಭಕ್ತರು ಭೇಟಿನೀಡುವ ಈ ಸ್ಥಳ ಮೂಲಸೌಕರ್ಯಗಳಿಂದ ನರಳುತ್ತಿದೆ.

ದಾವಣಗೆರೆ ಜಿಲ್ಲಾ ಕೇಂದ್ರದಿಂದ 28 ಕೀ.ಮಿ. ದೂರದಲ್ಲಿರುವ ಉಚ್ಚಂಗಿ ಎಲ್ಲಮ್ಮ ದೇವಸ್ಥಾನ ಪ್ರಮುಖ ಯಾತ್ರಾ ಸ್ಥಳವೂ ಹೌದು. ಪ್ರತಿ ಹುಣ್ಣಿಮೆ ಸಂದರ್ಭ ಸಾವಿರಾರು ಭಕ್ತರು ರಾಜ್ಯದ ಮೂಲೆಮೂಲೆಗಳಿಂದ ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರದ ದಿನವೂ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಇಂತಹ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರಿಗೆ ಕುಡಿಯಲು ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎನ್ನುತ್ತಾರೆ ಭಕ್ತರು.

ಉಚ್ಚಂಗಿದುರ್ಗ ಮುಖ್ಯರಸ್ತೆಯಿಂದ ತೋಪಿನ ರಸ್ತೆವರೆಗೂ ಹಾಗೂ ತೋಪಿನಿಂದ ಯಲ್ಲಮ್ಮ ದೇವಿ ಸನ್ನಿಧಾನಕ್ಕೆ, ಕಿರಿದಾದ ಕಾಡು ದಾರಿ ಇದ್ದು, ಬಹುಪಾಲು ಭಕ್ತರು ಈ ಮಾರ್ಗವಾಗಿಯೇ ಸಂಚರಿಸುತ್ತಾರೆ. ಈ ಹಾದಿ ಕಲ್ಲು–ಮುಳ್ಳುಗಳಿಂದ ಕೂಡಿದ್ದು, ಓಡಾಡಲು ಪ್ರಯಾಸ ಪಡಬೇಕಿದೆ.

ಜಿಲ್ಲಾಡಳಿತ ಇಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಹಿಳಾ ಭಕ್ತರು ಹೆಚ್ವಾಗಿ ಕ್ಷೇತ್ರಕ್ಕೆ ಬರುವ ಹಿನ್ನೆಲೆಯಲ್ಲಿ ಕ್ಷೇತ್ರದ ಸುತ್ತಮುತ್ತ ಪೊಲೀಸ್‌ ಭದ್ರತೆ ಕಲ್ಪಿಸಬೇಕು ಎನ್ನುತ್ತಾರೆ ಭಕ್ತರು.

ಉಚ್ಚಂಗಿದುರ್ಗ ಜಾತ್ರೆಗೆ ಎಲ್ಲೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಾತ್ರೆವೇಳೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಮದು ಭಕ್ತರು ಮನವಿ ಮಾಡಿದ್ದಾರೆ.

ಭರತ ಹುಣ್ಣಿಮೆ ಹಾಗೂ ಯುಗಾದಿಯ ದಿನ ದೇವಿಯ ಬೆಟ್ಟಕ್ಕೆ ಹೊಂದಿಕೊಂಡಂತೆ, ಹಾಲಮ್ಮ ದೇವಿಯ ತೋಪಿನಲ್ಲಿ 7 ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ವ್ಯಾಪಾರವೂ ಜೋರಾಗಿ ನಡೆದು, ಜಾತ್ರೆ ಮುಗಿದ ಬಳಿಕ ದೇಗುಲದ ಸಮೀಪ ಕಸದ ರಾಶಿ ನಿರ್ಮಾಣವಾಗುತ್ತದೆ. ಸಾಂಕ್ರಮಿಕ ರೋಗಗಳ ಭೀತಿ ಎದುರಾಗುವ ಅಪಾಯವೂ ಇರುತ್ತದೆ. ಹಾಗಾಗಿ, ಈ ಬಾರಿ ಕಸ ಹಾಕಲು ತೊಟ್ಟಿಗಳನ್ನು ನಿರ್ಮಾಣಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ’

ಪ್ರತಿ ಹುಣ್ಣಿಮೆಗೆ ತಪ್ಪದೇ ಆಗಮಿಸಿ ದೇವಿಯ ದರ್ಶನ ಪಡೆದು ಹೋಗುತ್ತೇವೆ. ದಾರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಾಣಿಗಳ ಭಯದಲ್ಲಿ ಸಾಗಬೇಕಿದೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಭಕ್ತರಿಗೆ ವಸತಿ ನಿಲಯಗಳು, ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು ಎಂದು ಭಕ್ತರಾದ ರೇಣುಕಾ ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry