ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

7

ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

Published:
Updated:
ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

ಅರಸೀಕೆರೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೈತರು ರಾಗಿ ತುಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಹತ್ತಾರು ವರ್ಷಗಳ ಹಿಂದೆ ವಾರಗಟ್ಟಲೆ ನಡೆಯುತ್ತಿದ್ದ ಕಣ ಸುಗ್ಗಿ ಆಧುನಿಕತೆಯತ್ತ ಹೊರಳಿದ್ದು, ಸಾಂಪ್ರದಾಯಿಕ ಪದ್ಧತಿ ಈಗ ಮರೆಯಾಗುತ್ತಿದೆ.

ರೈತರು ಹೊಲದಲ್ಲಿ ಕೊಯ್ಲು ಮಾಡಿದ ನಂತರ ಅಲ್ಲೇ ರಾಗಿ ಕಂತೆಗಳನ್ನು ಕಟ್ಟಿ ಹತ್ತಾರು ಕಡೆ ಗುಪ್ಪೆ ಹಾಕುತ್ತಾರೆ. ನಂತರ ಗ್ರಾಮದ ಹೊರ ಭಾಗದಲ್ಲಿ ಕಣ ಸಿದ್ಧ ಮಾಡಿ ಸಗಣಿಯಿಂದ ಬಳಿದು ಅಲ್ಲಿಗೆ ರಾಗಿ ಹುಲ್ಲು ಏರಿ ಬಣವೆ ಒಟ್ಟುತ್ತಾರೆ. (ಬಣವೆ ಎಂದರೆ ರಾಗಿ ಹುಲ್ಲಿನ ಕಾಳಿನ ಭಾಗವನ್ನು ಒಳ ಭಾಗಕ್ಕೆ ಬರುವಂತೆ ಜೋಡಿಸುವ ಪದ್ಧತಿ) ನಂತರ 15 ದಿನಗಳು ಬಿಟ್ಟು ರಾಗಿ ಹುಲ್ಲು ತುಳಿಸುವ ಕೆಲಸ ಆರಂಭಿ ಸುತ್ತಾರೆ.

ಮೊದಲು ಕಲ್ಲಿನ ರೋಣಗಲ್ಲಿನಲ್ಲಿ ರಾಗಿ ಹುಲ್ಲು ತುಳಿಸುವ ಕಾರ್ಯ ಮಾಡಲಾಗುತ್ತಿತ್ತು. ಬೆಳಿಗ್ಗೆ 10ರಿಂದ ಸಂಜೆಯವರೆಗೆ ಸತತವಾಗಿ ವೃತ್ತಾಕಾರವಾಗಿ ಹರಡಿದ ಹುಲ್ಲಿನ ಮೇಲೆ ಜೋಡೆತ್ತು ಹೂಡಿದ ರೋಣಗಲ್ಲು ನಿರಂತರವಾಗಿ ತಿರುಗಿಸುತ್ತಿದ್ದರೆ ಮಧ್ಯ ಮೆರೆ ಕೋಲಿನಿಂದ ಹುಲ್ಲನ್ನು ಹೊರಕ್ಕೆ ಹಾಕುವ ಹೊಟ್ಟು ಗುಡಿಸುವ ನಂತರ ಉಳಿದ ಸಣ್ಣ ಹೊಟ್ಟಿನೊಂದಿಗಿರುವ ರಾಗಿಯನ್ನು ಒಂದೆಡೆ ಗುಡ್ಡೆ ಹಾಕುವ ಕಾರ್ಯ ನಡೆಯುತ್ತಿತ್ತು.

ಇದೇ ರೀತಿ ರಾಗಿ ಹುಲ್ಲು ಖಾಲಿಯಾಗುವ ತನಕ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು. ಇದರ ನಡುವೆ ಕನಿಷ್ಠ 6 ಬಾರಿಯಾದರೂ ಕಣವನ್ನು ಸಗಣಿಯಿಂದ ಬಳಿಯಲಾಗುತ್ತಿತ್ತು.

ಹುಲ್ಲಿನ ಕೆಲಸ ಮುಗಿದ ನಂತರ ತೂರುವ ಸಂಭ್ರಮ. ಇದು ಹೆಚ್ಚಾಗಿ ಹೆಂಗಸರ ಕೆಲಸ. ಕಣದ ಮಧ್ಯೆ ಒಂದೆಡೆ ತುಳಿಸಿದ ರಾಗಿ ಹಾಗೂ ಗಾಬನ್ನು ರಾಶಿ ಹಾಕಲಾಗುತ್ತಿತ್ತು. ಗಾಳಿ ಬಂದಾಗ ಎಲ್ಲರೂ ಮೊರ ಹಿಡಿದು ತೂರಿದ ನಂತರ ಉಳಿಯುವ ಶುದ್ಧ ರಾಗಿಯನ್ನು ರಾಶಿ ಹಾಕಿ ಅದರ ಮೇಲೆ ಹೂವು ಹಾಕಿ ಪೂಜೆ ಮಾಡಿ ಮನೆಗೆ ಸಾಗಿಸುವ ಕಾರ್ಯದೊಂದಿಗೆ ಕಣ ಸುಗ್ಗಿ ಮುಗಿಯುತ್ತಿತ್ತು.

ಆದರೆ ಈಗ ರೈತರು ಆಧುನಿಕತೆಯತ್ತ ಮುಖ ಮಾಡಿದ್ದಾರೆ. ಕಣದಲ್ಲಿ ಈಗ ರೋಣಗಲ್ಲು ಕಾಣುವುದಿಲ್ಲ. ಟ್ರ್ಯಾಕ್ಟರ್‌ಗಳ ಮೊರೆ ಹೋಗಿದ್ದಾರೆ. 15–20 ದಿನಗಳ ಕಾಲ ನಡೆಯುತ್ತಿದ್ದ ಕಣ ಸುಗ್ಗಿ ಈಗ ಒಂದೇ ದಿನಕ್ಕೆ ಮುಗಿಯುತ್ತದೆ.

ಟ್ರ್ಯಾಕ್ಟರ್‌ ಕೃಪೆಯಿಂದ ಒಂದೇ ದಿನದಲ್ಲಿ ಹುಲ್ಲು ಹೊಡೆಯುವ ಕಾರ್ಯ ಮಾಡಬಹುದು. ತೂರುವುದಕ್ಕೆ ಯಂತ್ರಗಳಿವೆ. ಬಾಡಿಗೆ ಕೊಟ್ಟು ತಂದ ಯಂತ್ರದಿಂದ ಒಂದೆರೆಡು ಗಂಟೆಗಳಲ್ಲಿಯೇ ರಾಗಿಯನ್ನು ತೂರುವ ಸುಲಭ ವಿಧಾನಕ್ಕೆ ರೈತರು ಒಗ್ಗಿ ಹೋಗಿದ್ದಾರೆ. ಕಣಸುಗ್ಗಿಗೆ ಆಗತ್ಯವಾಗಿದ್ದ ಮೆರೆಕೋಲು, ಉತ್ತರಾಣಿ ಕಟ್ಟಿಗೆ, ಹಂಗರು ಕಟ್ಟಿಗೆ, ಕೈ ಹಲುಬೆ ಮುಂತಾದ ಪರಿಕರಗಳ ಅಗತ್ಯ ಈಗ ಹೆಚ್ಚಾಗಿ ಕಾಣುತ್ತಿಲ್ಲ. ನೀರಿನ ಕೊರತೆಯಿಂದಾಗಿ ಕಣ ಬಳಿಯುವುದೂ ಅಪರೂಪವಾಗಿದೆ.

ಆಧುನಿಕ ಯಂತ್ರಗಳಿಂದ ರೈತರ ಶ್ರಮ ಮತ್ತು ಸಮಯದ ಉಳಿತಾಯವಾದರೂ ಆ ಸಾಂಪ್ರದಾಯಿಕ ಕಾಯಕದ ಚೆಲುವು ಮರೆಯಾಗುತ್ತಿದೆ. ಕಣ ಸುಗ್ಗಿ ಎಂದರೆ ಹಿರಿಯರಿಗೆ ಮಧುರ ನೆನಪಾಗಿ ಉಳಿದಿದೆ.

‘ಕಳೆದ ವರ್ಷಾಂತ್ಯದಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಬಿತ್ತನೆ ಮಾಡಿದ್ದ ರಾಗಿ ಬೆಳೆ ಹುಲುಸಾಗಿ ಬಂದಿದೆ. ಎರಡು ವರ್ಷಕ್ಕಾಗುವಷ್ಟು ಆಹಾರ ಹಾಗೂ ಜಾನುವಾರುಗಳಿಗೆ ಮೇವು ದೊರೆತಿದೆ. ಆದರೂ, ಕೃಷಿ ಕಾರ್ಮಿಕರ ಕೊರತೆ, ಬೀಜ– ಗೊಬ್ಬರ ಖರ್ಚು ಹೆಚ್ಚಾಗಿ ಏನೂ ಸಿಗದಂತೆ ಆಗಿದೆ’ ಎಂದು ರೈತ ಕದುರಯ್ಯ, ನರಸಿಂಹಯ್ಯ ಬೇಸರದಿಂದ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry