ಜ್ಞಾನ, ಕಾಯಕದಿಂದ ಸಮಾಜದ ಏಳಿಗೆ ಸಾಧ್ಯ

7

ಜ್ಞಾನ, ಕಾಯಕದಿಂದ ಸಮಾಜದ ಏಳಿಗೆ ಸಾಧ್ಯ

Published:
Updated:

ಶಿಗ್ಗಾವಿ: ‘ಸಿದ್ಧರಾಮೇಶ್ವರರು ಧರ್ಮ, ಜ್ಞಾನ ಹಾಗೂ ಕಾಯಕದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಶ್ರಮಿಸುವ ಜೊತೆಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಸಂತೆ ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪುರಸಭೆ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಮಂಗಳವಾರ ನಡೆದ ಶ್ರೀಗುರು ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ಧರಾಮೇಶ್ವರರು ಸುಮಾರು 68,000 ಸಾವಿರ ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೇವಲ 1,396 ವಚನಗಳು ಮಾತ್ರ ಸಿಕ್ಕಿದ್ದು, ಉಳಿದ ವಚನಗಳನ್ನು ಗುರುತಿಸಿ ಪ್ರಕಟಿಸಬೇಕು. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸಂಶೋಧನೆ ನಡೆಸಬೇಕು’ ಎಂದರು.

ಅಕ್ಕಿ ಆಲ್ಲೂರಿನ ಎನ್‌.ಡಿ.ಕಾಲೇಜಿನ ಉಪನ್ಯಾಸಕ ಶಿವಾನಂದ ಕಲ್ಲೆರ ಉಪನ್ಯಾಸ ನೀಡಿ, ‘ಸಿದ್ಧರಾಮೇಶ್ವರರ ಕುರಿತಾದ ಗ್ರಂಥವನ್ನು ಪ್ರತಿ ಶಾಲಾ ಕಾಲೇಜುಗಳಿಗೆ ನೀಡಿ, ವಿದ್ಯಾರ್ಥಿಗಳಲ್ಲಿ ಶ್ರೀಗಳ ಜೀವನ ಚರಿತ್ರೆ ಕುರಿತು ತಿಳಿಯಲು ಪ್ರೇರೆಪಿಸಬೇಕು’ ಎಂದರು.

ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿ, ‘ಹಿಂದುಳಿದ ಭೋವಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯ ಶಾಸಕರು ಸಮಾಜ ಕ್ಕೊಂದು ಸಭಾಭವನ ನಿರ್ಮಿಸಬೇಕು’ ಎಂದು ಮನವಿ ಸಲ್ಲಿಸಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪುರಸಭೆ ಸದಸ್ಯ ಫಕ್ಕಿರೇಶ ಶಿಗ್ಗಾವಿ, ವಕೀಲ ಹನುಮಂತ ಬಂಡಿವಡ್ಡರ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ನಾಗರಾಜ ಹಾವೇರಿ, ಮಹದೇವಪ್ಪ ವಡ್ಡರ, ಕರೆಯಪ್ಪ ಕಟ್ಟಿಮನಿ, ತಹಶೀಲ್ದಾರ್‌ ಶಿವಾನಂದ ರಾಣೆ, ಇ.ಒ ಹನಮಂತರಾಜು ಇದ್ದರು.

ಬಿಇಒ ಎಂ.ಎಚ್.ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮ ಪೂರ್ವ ದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣೆಗೆ ನಡೆಯಿತು. ಕುಂಭಮೇಳ, ವಿವಿಧ ವಾದ್ಯಗಳು ಮೆರವಣಿಗೆಗೆ ಮೆರುಗು ತಂದಿತು.

ಕನ್ನಡ ಸಾಹಿತ್ಯಕ್ಕೆ ಸಿದ್ಧರಾಮೇಶ್ವರ ಶ್ರೀಗಳ ಕೊಡುಗೆ ಅಪಾರ

ರಾಣೆಬೆನ್ನೂರು: ‘ಶಿವಯೋಗಿ ಸಿದ್ಧರಾಮೇಶ್ವರರು ಸಮಾನತೆಯ ಹರಿಕಾರರು. ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಹೇಳಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದಿಂದ ಆಚರಿಸುವ ಜಯಂತಿಗಳನ್ನು ಒಂದು ಜಾತಿ, ಕೋಮಿಗೆ ಮೀಸಲಿಡದೆ ಎಲ್ಲ ಜನಾಂಗದವರು ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಹಂಸಭಾವಿಯ ದುರ್ಗದ ಪ್ರೌಢ ಶಾಲೆ ಶಿಕ್ಷಕ ಎಸ್. ಹನುಮಂತಪ್ಪ ಅವರು ಶಿವಯೋಗಿ ಸಿದ್ಧರಾಮೇಶ್ವರ ಕುರಿತು ಉಪನ್ಯಾಸ ನೀಡಿದರು.

ತಹಶೀಲ್ದಾರ್‌ ರಾಮಮೂರ್ತಿ, ಹಲಗೇರಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಾನಂದ ಕನ್ನಪ್ಪಳವರ, ನಗರಸಭಾ ಸದಸ್ಯ ಪ್ರಕಾಶ ಜೈನ್, ತಾಲ್ಲೂಕು ನೊಳಂಬ ವೀರಶೈವ ಸಂಘದ ಅಧ್ಯಕ್ಷ ಎಂ.ಎನ್.ಕೆಂಪನಗೌಡ್ರ, ಶಿವಯೋಗಿ ಸಿದ್ಧರಾಮೇಶ್ವರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ವಡ್ಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಬಸವರಾಜ ಡಿ.ಸಿ, ಪ್ರಸನ್ನಕುಮಾರ, ನಗರ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲ, ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಸಿದ್ಧಾರೂಢ ಬಡಿಗೇರ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry