ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಿಂದ ಪ್ರಗತಿ

7

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಿಂದ ಪ್ರಗತಿ

Published:
Updated:
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಿಂದ ಪ್ರಗತಿ

ಕಲಬುರ್ಗಿ: ‘ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮಾಡಿದರೆ ದೇಶ ಬೆಳೆಯುತ್ತದೆ. ಇಲ್ಲವಾದರೆ ಆರ್ಥಿಕ ಬೆಳವಣಿಗೆ ಕಷ್ಟ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪದ ಅಂಗವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೈಗಾರಿಕೆಗಳ ಕಾರ್ಯಸಾಧ್ಯತೆ, ಉದ್ಯೋಗಾವಕಾಶ, ಜನರ ಆದಾಯ ವೃದ್ಧಿ ಮತ್ತು ಜನರಲ್ಲಿ ಹೆಚ್ಚಾಗುವ ಖರೀದಿ ಸಾಮರ್ಥ್ಯವನ್ನು ತಿಳಿದು ಹೆಜ್ಜೆ ಇಟ್ಟರೆ ನಮ್ಮ ದೇಶ ಖಂಡಿತವಾಗಿಯೂ ಪ್ರಗತಿಹೊಂದುತ್ತದೆ’ ಎಂದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಕಡಿಮೆಯಾದರೂ ನಮ್ಮಲ್ಲಿ ಡೀಸೆಲ್‌, ಪೆಟ್ರೋಲ್‌ ದರ ಕಡಿಮೆಯಾಗಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ದೊರೆಯುತ್ತಿರುವ ಉದ್ಯೋಗ ವರ್ಷಕ್ಕೆ 1.4 ಲಕ್ಷ ಮಾತ್ರ’ ಎಂದು ಅವರು ಹೇಳಿದರು.

‘ಕುಕನೂರಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ₹100 ಕೋಟಿ ವೆಚ್ಚ ಮಾಡುತ್ತಿದ್ದೀರಿ. ಎಚ್‌ಕೆಆರ್‌ಡಿಬಿಯಿಂದ ವಿಭಾಗೀಯ ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲು ಹೆಚ್ಚಿನ ಹಣ ವ್ಯಯಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ಖರ್ಗೆ ಅವರು ಎಚ್‌ಕೆಆರ್‌ಡಿಬಿ ಅಧ್ಯಕ್ಷ, ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೆ ಕಿವಿಮಾತು ಹೇಳಿದರು.

ಮುಖ್ಯಅತಿಥಿಯಾಗಿದ್ದ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘250ಕ್ಕೂ ಹೆಚ್ಚು ದಾಲ್‌ಮಿಲ್‌ಗಳು ಮುಚ್ಚಿದ್ದು, ಅವುಗಳ ಪುನಃಶ್ಚೇತನಕ್ಕೆ ಪರಿಹಾರ ಕಂಡುಕೊಳ್ಳೋಣ’ ಎಂದರು.

ಮೇಯರ್‌ ಶರಣಕುಮಾರ ಮೋದಿ ಮಾತನಾಡಿದರು. ಎಚ್‌ಕೆಸಿಸಿಐ ಹಿಂದಿನ ಅಧ್ಯಕ್ಷರಾದ ಶಂಕರ ಗಿಲ್ಡಾ, ಎಸ್‌.ಎಸ್‌. ಪಾಟೀಲ, ಬಿ.ಜಿ. ಪಾಟೀಲ, ಶ್ರೀನಿವಾಸ ರಘೋಜಿ, ಸುರೇಶ ನಂದ್ಯಾಳ, ಗೋಪಾಲಕೃಷ್ಣ ರಘೋಜಿ, ರಾಧಾಕೃಷ್ಣ ರಘೋಜಿ ಅವರನ್ನು ಸನ್ಮಾನಿಸಲಾಯಿತು. ‘ಮಂಜರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಶಾಸಕರಾದ ಬಿ.ಆರ್‌. ಪಾಟೀಲ, ಉಮೇಶ ಜಾಧವ, ಇಕ್ಬಾಲ್‌ಅಹ್ಮದ ಸರಡಗಿ, ಅಮರನಾಥ ಪಾಟೀಲ, ಬಿ.ಜಿ. ಪಾಟೀಲ ಹಾಗೂ ಬಸವರಾಜ ಭೀಮಳ್ಳಿ, ಎಚ್‌ಕೆಸಿಸಿಐ ಆಡಳಿತ ಮಂಡಳಿಯವರು ವೇದಿಕೆಯಲ್ಲಿದ್ದರು.

ನಿಮ್ದ ಕೇಳ್ತಾರೀ ಸರ್‌!

ಕಲಬುರ್ಗಿ– ಬೀದರ್‌ ಮಾರ್ಗದಲ್ಲಿ ಹೆಚ್ಚಿನ ರೈಲು ಬೇಕು ಎಂಬ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಟೆಂಗಳಿ ಅವರ ಬೇಡಿಕೆಯನ್ನು ಉಲ್ಲೇಖಿಸಿದ ಖರ್ಗೆ, ‘ಶಾಸಕರಾದ ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ದತ್ತಾತ್ರೇಯ ಪಾಟೀಲರೊಂದಿಗೆ ಹೋರಾಟ ನಡೆಸಿ. ನಾನಂತೂ ಸದಾ ನಿಮ್ಮ ಜೊತೆ ಇದ್ದೇನೆ’ ಎಂದರು. ‘ಅವ್ರು ನಿಮ್ದ ಕೇಳ್ತಾರೀ ಸರ್‌...’ ಎಂದು ವೇದಿಕೆಯಲ್ಲಿದ್ದ ಅಮರನಾಥ ಪಾಟೀಲ ಜೋರು ದನಿಯಲ್ಲಿ ಹೇಳಿದರು.

ಇದರಿಂದ ಉಲ್ಲಸಿತ ಗೊಂಡವರಂತೆ ಕಂಡ ಖರ್ಗೆ, ‘ನಾನು 10 ತಿಂಗಳು ರೈಲ್ವೆ ಸಚಿವನಾಗಿದ್ದಾಗ 27 ಹೊಸ ರೈಲು ಸಂಚಾರ ಆರಂಭಿಸಿದ್ದೆ. ನೀವು ಮೂರೂ ಜನ ಶಕ್ತಿಕೊಟ್ಟರೆ ನಾನು ಖಂಡಿತವಾಗಿಯೂ ಕೆಲಸ ಮಾಡುತ್ತೇನೆ’ ಎಂದು ವೇದಿಕೆಯಲ್ಲಿದ್ದ ಮೂವರು ಬಿಜೆಪಿ ಶಾಸಕರಿಗೆ ಹೇಳಿದಾಗ ನಗೆಯ ಅಲೆ ಉಕ್ಕಿತು.

‘ಹೈ.ಕ ವಿಶೇಷ ಕೈಗಾರಿಕಾ ನೀತಿ ರೂಪಿಸಿ’

‘ರಾಜ್ಯದ ಕೈಗಾರಿಕಾ ನೀತಿಯಲ್ಲಿ ನಮಗೆ ನೀಡಿರುವ ವಿನಾಯಿತಿ ಸಾಲದು. ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೇ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಟೆಂಗಳಿ ಹೇಳಿದರು.

‘ಈ ಭಾಗದ ದಾಲ್‌ಮಿಲ್‌ಗಳನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ನೆರವಾಗಬೇಕು. ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭ ಮಾಡಬೇಕು. ಅದಕ್ಕೆ ಎಲ್ಲ ನಾಯಕರು ಶ್ರಮಿಸಬೇಕು’ ಎಂದು ಅವರು ಕೋರಿದರು.

‘ನಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ವಸ್ತು ಪ್ರದರ್ಶನ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ನಂದೂರ–ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ 2.35 ಎಕರೆ ಜಮೀನು ಖರೀಸಿದ್ದೇವೆ. ಈ ಕೇಂದ್ರ ಸ್ಥಾಪನೆಗೆ ₹50 ಕೋಟಿ ಅವಶ್ಯವಿದ್ದು, ಸರ್ಕಾರದಿಂದ ₹10 ಕೋಟಿ ಕೊಡಿಸಬೇಕು’ ಎಂದು ಅವರು ಮನವಿ ಮಾಡಿದರು.

* * 

ಪತ್ರಿಕಾಗೋಷ್ಠಿ ನಡೆಸಿ ಪ್ರಚಾರ ಪಡೆಯುವ ಬದಲು ಎಚ್‌ಕೆಸಿಸಿಐನವರು ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ, ಸಂಸದ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry