ಲೈಟ್ ಫಿಶಿಂಗ್, ಬುಲ್ ಟ್ರಾಲ್ ಸಂಪೂರ್ಣ ನಿಷೇಧಕ್ಕೆ ಒತ್ತಾಯ

7

ಲೈಟ್ ಫಿಶಿಂಗ್, ಬುಲ್ ಟ್ರಾಲ್ ಸಂಪೂರ್ಣ ನಿಷೇಧಕ್ಕೆ ಒತ್ತಾಯ

Published:
Updated:

‌ಕಾರವಾರ: ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಅನ್ನು ನಿಷೇಧಿಸುವಂತೆ ಕಾರವಾರ– ಅಂಕೋಲಾ ಟ್ರಾಲರ್ಸ್ ಬೋಟ್ ಯೂನಿಯನ್ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿರುವಂತೆ ಮೀನುಗಾರಿಕೆಯಲ್ಲಿಯೂ ಹೊಸ ಹೊಸ ವಿಧಾನಗಳು ಚಾಲ್ತಿಗೆ ಬರುತ್ತಿವೆ. ಅದರಲ್ಲಿ ಲೈಟ್ ಫಿಶಿಂಗ್ ಕೂಡ ಒಂದು. ಇದರಿಂದಾಗಿ ಮೀನುಗಾರರ ಮೇಲೆ ಹಾಗೂ ಪರಿಸರದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆ ಎಂದು ಚಂದ್ರಶೇಖರ ನಾಯಕ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಈ ವಿಧಾನದಲ್ಲಿ ಮೀನಿನ ಮರಿಗಳನ್ನು ಕೂಡ ಹಿಡಿಯಲಾಗುತ್ತದೆ. ಇದು ಮೀನುಗಳ ಉತ್ಪತ್ತಿ ಕಡಿಮೆ ಮಾಡುತ್ತದೆ. ಅಲ್ಲದೇ ಅಪರೂಪದ ಮೀನುಗಳ ಸಂತತಿಯೂ ನಾಶವಾಗುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರರ ಬಲೆಗಳಿಗೆ ಸಣ್ಣ ಮೀನುಗಳು ಬೀಳದೆ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿರುವ ರಾಜ್ಯ ಸರ್ಕಾರ 12 ನಾಟಿಕಲ್ ಮೈಲುಗಳ ಒಳಗೆ ಲೈಟ್ ಫಿಶಿಂಗ್ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅದರ ಮೇಲೆ ನಿಷೇಧ ಹೇರಿದೆ. ಆದರೆ, ಅಕ್ರಮವಾಗಿ ಎಲ್ಲವೂ ಮುಂದುವರಿದಿದೆ ಎಂದು ಆರೋಪಿಸಿದರು.

ಕಾರವಾರ– ಅಂಕೋಲಾ ಟ್ರಾಲರ್ಸ್ ಬೋಟ್ ಯೂನಿಯನ್‌ನ ಬೈತಖೋಲ್ ಘಟಕದ ಅಧ್ಯಕ್ಷ ದಿಲೀಪ್ ಚೆಂಡೇಕರ್, ಬೈತಖೋಲ್ ಹರಿಕಂತ್ರ ಮೀನುಗಾರರ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ್ ಹರಿಕಂತ್ರ, ಕಾರವಾರ– ಅಂಕೋಲಾ ಟ್ರಾಲರ್ ಬೋಟ್ ಮೀನುಗಾರರ ಸಹಕಾರ ಸಂಘದ ಬೈತಖೋಲ್ ಘಟಕದ ಉಪಾಧ್ಯಕ್ಷ ನಾಗರಾಜ್ ಹರಿಕಂತ್ರ, ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘದ ಉಪಾಧ್ಯಕ್ಷ ಏಷಿಯಾ ಹರಿಕಂತ್ರ, ಟ್ರಾಲರ್ಸ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry