ಹೊಸಬರ ಹಟ: ಹಾಲಿ ಶಾಸಕರಿಗೆ ಸಂಕಟ

7

ಹೊಸಬರ ಹಟ: ಹಾಲಿ ಶಾಸಕರಿಗೆ ಸಂಕಟ

Published:
Updated:
ಹೊಸಬರ ಹಟ: ಹಾಲಿ ಶಾಸಕರಿಗೆ ಸಂಕಟ

ಮಡಿಕೇರಿ: ಪ್ರಕೃತಿಯ ಮಡಿಲು, ಪುಟ್ಟ ಜಿಲ್ಲೆ ಕೊಡಗಿನಲ್ಲೂ ವಿಧಾನಸಭೆ ಚುನಾವಣೆ ತಯಾರಿ ಜೋರಾಗಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಸಭೆ, ಸಮಾವೇಶ ನಡೆಸುತ್ತಿವೆ.

ಮಡಿಕೇರಿಯಲ್ಲಿ ಕಾಂಗ್ರೆಸ್‌ ಸಮಾವೇಶ ಮುಗಿದ ಬೆನ್ನಲೇ ಸೋಮವಾರಪೇಟೆಯಲ್ಲಿ ಬಿಜೆಪಿಯು ಬೃಹತ್‌ ಸಮಾವೇಶ ನಡೆಸಿರುವುದು ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಈ ಮಧ್ಯೆ ಬಿಜೆಪಿಯಲ್ಲೇ ಬಂಡಾಯ ಸ್ಫೋಟಗೊಂಡಿರುವುದು ಹಾಲಿ ಶಾಸಕರಿಗೆ ತಲೆನೋವಾಗಿದೆ.

ಮಡಿಕೇರಿ ಕ್ಷೇತ್ರದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ಗೆ ಟಿಕೆಟ್‌ ನೀಡಬಾರದೆಂದು ಸ್ವಪಕ್ಷದ ಕೆಲವು ಮುಖಂಡರು ಸಭೆ ನಡೆಸಿ, ನಿರ್ಣಯವನ್ನು ರಾಜ್ಯ ವರಿಷ್ಠರಿಗೆ ಕಳುಹಿಸಿದ್ದಾರೆ. ಜತೆಗೆ, ಈ ಕ್ಷೇತ್ರದಿಂದ ಹೊಸಮುಖಕ್ಕೆ ಟಿಕೆಟ್‌ ನೀಡಬೇಕು ಎನ್ನುವ ಕೂಗೂ ಜೋರಾಗಿದೆ.

ಸಮಾವೇಶ ನಡೆಸಿ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದ್ದರೂ, ಸಂಧಾನ ಸೂತ್ರ ಫಲಿಸಿಲ್ಲ. ಅಪ್ಪಚ್ಚು ರಂಜನ್‌ ಅವರು ಕ್ಷೇತ್ರದಲ್ಲಿ ಸಮಾವೇಶ ನಡೆಸಿ

ವಿರೋಧಿ ಬಣಕ್ಕೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿವೆ.

ಜೆಡಿಎಸ್‌ ತೊರೆದ ವಿ.ಎಂ. ವಿಜಯ, ಎಸ್‌.ಬಿ. ಭರತ್‌ಕುಮಾರ್‌ ಅವರನ್ನು ವಿರೋಧದ ನಡುವೆಯೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸ್ವಪಕ್ಷದ ಮುಖಂಡರಲ್ಲಿ ಅಸಮಾಧಾನ ಹೆಚ್ಚಿಸಿದೆ. ಕಳೆದ ವಾರ ಸಭೆ ನಡೆಸಿದ್ದ ಬಿಜೆಪಿ ತಾಲ್ಲೂಕು ಕಾರ್ಯಾಧ್ಯಕ್ಷ ಶುಂಠಿ ಸುರೇಶ್, ಪ್ರಮುಖರಾದ ಜಿ.ಎಲ್. ನಾಗರಾಜ್, ಕೆ.ವಿ. ಮಂಜುನಾಥ್, ಡಿ.ಬಿ. ಧರ್ಮಪ್ಪ, ಸಿ.ಪಿ. ಗೋಪಾಲ್, ಎಸ್.ಪಿ. ಪೊನ್ನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ಅರೆಯೂರು ಜಯಣ್ಣ, ರೂಪಾ ಸತೀಶ್, ಪಿ.ಡಿ. ಮೋಹನ್‌ದಾಸ್, ಶಂಕರನಾರಾಯಣ, ಎಚ್.ಕೆ. ಮಾದಪ್ಪ, ಯುವ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜೀತೇಂದ್ರ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಫಲಿಸದ ಸಂಧಾನ ಸೂತ್ರ?: ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೋಮವಾರಪೇಟೆಯಲ್ಲಿ ಸೋಮವಾರ ಸಂಧಾನಸಭೆ ನಡೆಸಿದ್ದಾರೆ. ಆದರೆ, ಅತೃಪ್ತ ಬಣದ ಬಹುತೇಕರು ಗೈರಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಸೂಚನೆಯ ಮೇರೆಗೆ ಬೇರೆ ಬೇರೆ ಪಕ್ಷದ ಮುಖಂಡರನ್ನು ಬಿಜೆಪಿಗೆ ಕರೆ ತರಲಾಗುತ್ತಿದೆ. ಚುನಾವಣೆಯ ಬಳಿಕ ಅವರಿಗೆ ಹುದ್ದೆ ನೀಡಲಾಗುವುದೆಂದು ಸದಾನಂದಗೌಡ →ಸ್ಪಷ್ಟನೆ ನೀಡಿ ರುವುದೂ ಸ್ಥಳೀಯ ಮುಖಂಡರಲ್ಲಿ →ಇನ್ನಷ್ಟು ಒಡಕಿಗೆ ಕಾರಣವಾಗಿದೆ. ಮುಂದಿನ ನಿರ್ಧಾರ ನೋಡಿಕೊಂಡು ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದು ಅತೃಪ್ತ ಬಣದ ಮುಖಂಡರು ಹೇಳಿದ್ದಾರೆ.

ಅದಲು– ಬದಲು: ಈ ಮಧ್ಯೆ ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಕೆ.ಜಿ. ಬೋಪಯ್ಯಗೆ ಮಡಿಕೇರಿ ಕ್ಷೇತ್ರದಿಂದ ಟಿಕೆಟ್‌ ನೀಡಿ, ಕೊಡವ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿರುವ ವಿರಾಜಪೇಟೆಯಿಂದ ಅಪ್ಪಚ್ಚು ರಂಜನ್‌ಗೆ ಟಿಕೆಟ್‌ ನೀಡುವ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿದೆ.

ಜತೆಗೆ, ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್‌ ಉತ್ಸುಕರಾಗಿದ್ದಾರೆ. ಭಾರತೀಶ್‌ಗೆ ಸಂಘ ಪರಿವಾರ ಮುಖಂಡರ ಬೆಂಬಲವೂ ಇದೆ.ಮತ್ತೊಂದೆಡೆ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಅಪ್ಪಚ್ಚು ರಂಜನ್‌ ಸಹೋದರ, ಮಾಜಿ ಜಿಲ್ಲಾ ಅಧ್ಯಕ್ಷ ಸುಜಾ ಕುಶಾಲಪ್ಪ ಸಹ ಪ್ರಬಲ ಆಕಾಂಕ್ಷಿ. ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಅವರೂ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿರುವುದು ರಾಜ್ಯ ವರಿಷ್ಠರಿಗೆ ಬಿಸಿ ತುಪ್ಪವಾಗಿದೆ.

ಮತಬುಟ್ಟಿ ಗಟ್ಟಿ: ವಿಜಯ ಅವರನ್ನು ಪಕ್ಷಕ್ಕೆ ಕರೆತರುವ ಮೂಲಕ ಅಪ್ಪಚ್ಚು ರಂಜನ್‌ ತಮ್ಮ ಮತಬುಟ್ಟಿಯನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಮಲೆಯಾಳಿ ಸಮುದಾಯಕ್ಕೆ ಸೇರಿರುವ ವಿಜಯ ಸಮಾಜದ ಪ್ರಭಾವಿ ಮುಖಂಡ. ಚುನಾವಣೆ ಸಂದರ್ಭದಲ್ಲಿ ಈ ಕಾರ್ಯತಂತ್ರವು ಮಡಿಕೇರಿ, ಸೋಮವಾರಪೇಟೆ ಭಾಗದಲ್ಲಿ ಅಪ್ಪಚ್ಚು ಕೈಹಿಡಿಯಬಹುದು ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry