ಬದುಕು ಬದಲಿಸುವ ತಂತ್ರಜ್ಞಾನ

7

ಬದುಕು ಬದಲಿಸುವ ತಂತ್ರಜ್ಞಾನ

Published:
Updated:
ಬದುಕು ಬದಲಿಸುವ ತಂತ್ರಜ್ಞಾನ

ಸ್ವಯಂ ಚಾಲಿತ ವಾಹನಗಳು, ಕೃತಕ ಬುದ್ಧಿಮತ್ತೆ, ವಚ್ರ್ಯುವಲ್ ರಿಯಾಲಿಟಿ, ಅತಿ ವೇಗದ ಕಂಪ್ಯೂಟರ್, ಬೃಹತ್ ಗೇಮಿಂಗ್ ಪರದೆ, ನೂತನ ತಂತ್ರಜ್ಞಾನಗಳನ್ನು ಕೂಡಿಕೊಂಡು ಸಿದ್ಧಗೊಂಡ ಮತ್ತೊಂದು,..ಹೀಗೆ ಲಾಸ್ ವೆಗಾಸ್‍ನ ಅಂತರರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೃಹತ್ ಮೇಳ(ಸಿಇಎಸ್ 2018)ದಲ್ಲಿ ಎಲ್ಲೆಲ್ಲೂ ಹೊಸತುಗಳ ಸಡಗರ. ನಾಲ್ಕು ದಿನಗಳ ಈ ಪ್ರದರ್ಶನದಲ್ಲಿ ಗಮನ ಸೆಳೆದ ಕೆಲವು ಉಪಕರಣಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಈ ಬಾರಿ ಎಲೆಕ್ಟ್ರಾನಿಕ್ಸ್‌ ಜತೆಗೆ ಆಟೊಮೊಬೈಲ್‌ ಸಂಸ್ಥೆಗಳ ಕಾರುಬಾರು ಜೋರಾಗಿತ್ತು.

ಸುತ್ತಿಡಬಹುದಾದ ಎಲ್‌ಜಿ 65 ಇಂಚು ಪರದೆ, ವಿವೊ ಮೊಬೈಲ್‌ನಲ್ಲಿ ಬೆರಳಚ್ಚು ಸೆನ್ಸರ್‌, ಅತಿ ಕಡಿಮೆ ಬೆಳಕಲ್ಲಿಯೂ ಉತ್ತಮ ಚಿತ್ರ ನೀಡುವ ಪ್ಯಾನಸೋನಿಕ್‌ ಲುಮಿಕ್ಸ್ ಕ್ಯಾಮೆರಾ, ಸ್ಯಾಮ್‌ಸಂಗ್‌ನ 146 ಇಂಚು ಮೈಕ್ರೋ ಎಲ್ಇಡಿ ’ದಿ ವಾಲ್‌’ ಟಿವಿ, ಸೋನಿ 85 ಇಂಚು 8ಕೆ ಎಚ್‌ಡಿಆರ್ ಟಿವಿ, ಸ್ಮಾರ್ಟ್‌ ಕನ್ನಡಿ ಮತ್ತು ಶೌಚಗೃಹ ಹಾಗೂ ಧ್ವನಿ ಸಹಾಯಕ ಉಪಕರಣಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಗೂಗಲ್‌ ನಡೆಸಿದ ಜಾಹೀರಾತು ತಂತ್ರ,...ಮೇಳದಲ್ಲಿ ಕಂಡು ಬಂದಿದ್ದು ಇನ್ನು ಬಹಳ.

*

ಅಡುಗೆ ಮನೆಯಲ್ಲೇ ಇಡೀ ಜಗತ್ತು

ಬಹಳ ಕಾಲ ಅಡುಗೆ ಮನೆಯಲ್ಲಿ ಕಳೆಯುವವರು ಅದೇ ಸಮಯದಲ್ಲಿ ಹೊರ ಸುಲಭವಾಗಿ ಹೊರ ಜಗತ್ತಿನೊಂದಿಗೂ ಸಂಪರ್ಕಿಸಬಹುದು, ಅಗತ್ಯ ಇರುವುದನ್ನು ತಿಳಿದುಕೊಳ್ಳಬಹುದು ಅಥವಾ ಸ್ನೇಹಿತರಿಗೆ ವಿಡಿಯೊ ಚಾಟ್‌ ಮೂಲಕ ಅಡುಗೆ ಕ್ರಮವನ್ನು ಹಂಚಿಕೊಳ್ಳಲೂಬಹುದು. ಜಿಇ ಅಪ್ಲೈಯನ್ಸಸ್‌ನ 27 ಇಂಚು ಸ್ಮಾರ್ಟ್‌ ಪರದೆಯಿಂದ ಇದು ಸಾಧ್ಯ.

ಸ್ಯಾಮ್‌ಸಂಗ್‌, ಎಲ್‌ಜಿ ಕಂಪನಿಗಳು ರೆಫ್ರಿಜರೇಟರ್‌ ಮೇಲೆ ಸ್ಮಾರ್ಟ್ ಪರದೆ ಅಳವಡಿಸಿ ಎಲೆಕ್ಟ್ರಾನಿಕ್ಸ್‌ ಮೇಳಗಳಲ್ಲಿ ಪ್ರದರ್ಶಿಸುತ್ತಿದ್ದರೆ, ಜಿಇ ಅಡುಗೆ ಮನೆಯ ಚಿಮಣಿಗೆ ಅಥವಾ ಓವನ್‌ಗೆ ಪರದೆ ಅಳವಡಿಸಿದೆ. ಸ್ಟೋವ್‌ನಿಂದ ಏಳುವ ಬಿಸಿಯನ್ನು ತಡೆಯುವಂತೆ ಇದರ ಪರದೆ ರೂಪಿಸಲಾಗಿದೆ. ವೈಫೈ, ಬ್ಲೂಟೂತ್‌ನಿಂದ ಸಂಪರ್ಕ ಸಾಧಿಸಬಹುದಾದ ಪರದೆಯಲ್ಲಿ ಅಡುಗೆ ಬಗ್ಗೆ ಮಾಹಿತಿ, ಹವಾಮಾನ, ಹಾಡು ಎಲ್ಲವನ್ನೂ ಹುಡುಕಬಹುದು. ನೆಚ್ಚಿನವರಿಗೆ ಅಡುಗೆ ಕೆಲಸದ ನಡುವೆ ವಿಡಿಯೊ ಕರೆಯನ್ನೂ ಮಾಡಬಹುದು. ಬೆಲೆ: ₹38 ಸಾವಿರ

*ಇನ್ನಷ್ಟು ತೆಳುವು, ಮತ್ತಷ್ಟು ಸಮರ್ಥ ಲ್ಯಾಪ್‌ಟಾಪ್‌ 

ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಡೆಲ್‌ ’ಎಕ್ಸ್‌ಪಿಎಸ್‌ 13’ ಲ್ಯಾಪ್‌ಟಾಪ್‌ ಹೊಸ ವಿನ್ಯಾಸದೊಂದಿಗೆ ಮತ್ತೆ ಗ್ರಾಹಕರ ಗಮನ ಸೆಳೆಯುತ್ತಿದೆ. 13 ಇಂಚಿನ 4ಕೆ ಪರದೆ, 0.46 ಇಂಚು ತೆಳುವಾದ ಈ ಹೊಸ ವಿನ್ಯಾಸದ ಲ್ಯಾಪ್‌ಟಾಪ್‌ ತೂಕ ಕೇವಲ 1.2 ಕೆ.ಜಿ. ಈ ಹಿಂದೆ 0.6 ದಪ್ಪದಾಗಿದ್ದ ಇದರ ಗಾತ್ರದಲ್ಲಿ ಇಳಿಕೆಯಾಗಿದೆ ಹಾಗೂ ಇದೀಗ ಬಿಳಿಯ ಬಣ್ಣದಲ್ಲೂ ಲಭ್ಯವಿದೆ.

ಹೊರಗಿನ ಉಷ್ಣತೆಯನ್ನು ಕಡಿಮೆಗೊಳಿಸಿ ತಣ್ಣನೆಯ ವ್ಯವಸ್ಥೆ ಕಲ್ಪಿಸಲು ’ಗೋರ್ ಫ್ಯಾಬ್ರಿಕ್‌’ ಪದರ ಬಳಸಲಾಗಿದೆ. 8ನೇ ಜೆನೆರೇಷನ್‌ ಕ್ವಾಡ್‌ಕೋರ್‌ ಪ್ರೊಸೆಸರ್‌, 16 ಜಿಬಿ ರ್ಯಾಮ್‌ ಹಾಗೂ 1 ಟಿಬಿ ಸಂಗ್ರಹಣ ಸಾಮರ್ಥ್ಯ ನೀಡಲಾಗಿದೆ. ಆದರೆ, ಬ್ಯಾಟರಿ ಸಾಮರ್ಥ್ಯದಲ್ಲಿ ಶೇ 15ರಷ್ಟು ಇಳಿಕೆಯಾಗಿದೆ(22 ರಿಂದ 19 ಗಂಟೆಗೆ). ಪ್ರಾರಂಭಿಕ ಬೆಲೆ: ₹64,000

*ಉಗುರಲ್ಲಿ ಯುವಿ ಪ್ರಮಾಣ ಅಳೆಯಿರಿ!‌

ಬ್ಯಾಟರಿ ಅಗತ್ಯವಿಲ್ಲದ ಉಗುರಿಗೆ ಅಂಟಿಸುವಷ್ಟು ತೆಳುವಾದ ವಿಶೇಷ ಉಪಕರಣದ ಸಹಾಯದಿಂದ ಸೂರ್ಯನ ಬಿಸಿಲಿಗೆ ಮೈಯೊಡ್ಡಿರುವಿರಿ ಪ್ರಮಾಣವನ್ನು ಅಳೆಯಬಹುದಾಗಿದೆ. ಫ್ರೆಂಚ್‌ ಸೌಂದರ್ಯವರ್ಧಕ ಉತ್ಪನ್ನಗಳ ಸಂಸ್ಥೆ ಲಾರಿಯಲ್‌ ಸೂರ್ಯನ ಬಿಸಿಲಿನಿಂದ ರಕ್ಷಣೆ ಕುರಿತು ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದ ಯುವಿ ಕಿರಣಗಳನ್ನು ಅಳೆಯಬಲ್ಲ ಸ್ಟಿಕ್ಕರ್ ರೀತಿಯ ಉಪಕರಣ ಸಿದ್ಧಪಡಿಸಿದೆ.

ಮೊಬೈಲ್‌ ಆ್ಯಪ್‌ನೊಂದಿಗೆ ಸಮೀಪ ವಲಯ ತಂತ್ರಜ್ಞಾನ(ಎನ್‌ಎಫ್‌ಸಿ)ದ ಮೂಲಕ ಉಪಕರಣವು ಸಂಪರ್ಕ ಹೊಂದಿರುತ್ತದೆ. ಯುವಿ ಕಿರಣಕ್ಕೆ ಹೆಚ್ಚು ಕಾಲ ತೆರೆದುಕೊಳ್ಳುವ ಪರಿಣಾಮ ಚರ್ಮದ ಕ್ಯಾನ್ಸರ್‌ ಉಂಟಾಗುವುದು ಅಧಿಕ ಎನ್ನಲಾಗಿದೆ. ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಶರ್ಟ್‌ ಗುಂಡಿಗೆ, ಕುತ್ತಿಗೆಯ ಸರ ಅಥವಾ ಕೈ ಬೆರಳ ಉಗುರಿಗೆ ಅಂಟಿಸಿಕೊಳ್ಳಬಹುದು.

ಹೃದಯ ಬಡಿತ, ಉಸಿರಾಟದ ಪ್ರಮಾಣ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಅಳೆಯಲು ಇಂಥದ್ದೇ ಉಪಕರಣಗಳಿಂದ ಸಾಧ್ಯವೆಂದು ಸಂಶೋಧಿಸಲಾಗಿದೆ. ಬೆಲೆ: ₹3,200

*ಸಮೀಪ ಪಯಣಕ್ಕೆ ಲೋಟಾಟ್ರಾಕ್ಸ್‌ ಗಾಡಿ

ಒಂದೇ ಗಾಲಿಯ ಮೇಲೆ ಅಳವಡಿಸಿದ ‍ಪಟ್ಟಿಯ ಮೇಲೆ ಕಾಲಿಟ್ಟು ಬ್ಯಾಲೆನ್ಸ್‌ ಮಾಡುತ್ತ ಸಾಗುವುದನ್ನು ಕಂಡಿರಬಹುದು. ಉತ್ತಮ ರಸ್ತೆ ಹಾಗೂ ಕಡಿಮೆ ಜನಸಂಖ್ಯೆ ಇರುವ ಕಡೆಗಳಲ್ಲಿ ಒಬ್ಬರು ಸಾಗಲು ಬಳಸುವ ಸೋಲೊವೀಲ್‌ ಹಾಗೂ ಹೋವರ್‌ಟ್ರಾಕ್ಸ್‌ನಂತೆ ಲೋಟಾಟ್ರಾಕ್ಸ್‌. ದೊಡ್ಡ ಟಿಫನ್‌ ಬಾಕ್ಸಿನಷ್ಟು ಅಳತೆಯ ಇದರಲ್ಲಿ ಅಂಟಿಕೊಂಡಂತೆ ಇರುವ ಎರಡು ಗಾಲಿಗಳು, ರೆಕ್ಕೆಯಂತೆ ಚಾಚುವ ನಿಲ್ಲುವ ಜಾಗವಿದೆ. ನಾವೇ ಬ್ಯಾಲೆನ್ಸ್‌ ಮಾಡುತ್ತ ನಿಂತು ಇಚ್ಛೆಪಟ್ಟ ಸಮೀಪದ ಸ್ಥಳಗಳಿಗೆ ಪಯಣಿಸಬಹುದು. ಶೇನ್‌ ಚೆನ್‌ ಇದನ್ನು ಸಂಶೋಧಿಸಿದ್ದಾರೆ.

ವಿದ್ಯುತ್‌ ಚಾಲಿತ ಈ ಪುಟ್ಟ ವಾಹನದಲ್ಲಿ ಒಮ್ಮೆ ಚಾರ್ಜ್ ಮಾಡಿ 8 ಮೈಲಿಯಷ್ಟು ದೂರ ಕ್ರಮಿಸಬಹುದು. ಬೆಲೆ: ₹38 ಸಾವಿರ

*ಅಂಗೈ ಅಗಲದ ವೇಗದ ಡ್ರೋನ್‌ 

ಸಭೆ–ಸಮಾರಂಭ, ಗಡಿ ರಕ್ಷಣೆ, ರೈಲ್ವೆ ಯೋಜನೆಗಳ ಮೇಲ್ವಿಚಾರಣೆ, ಆಟಿಕೆಯಾಗಿಯೂ ಡ್ರೋನ್‌ಗಳಿಗೆ ಬೇಡಿಕೆ ಇದೆ. ಈ ಬಾರಿಯ ಪ್ರದರ್ಶನದಲ್ಲಿ ಡ್ರೋನ್ ಸಂಸ್ಥೆಗಳ ಭಾಗವಹಿಸುವಿಕೆ ಹೆಚ್ಚಿತ್ತಾದರೂ ಯುವಿಫೈನ ’ಊರಿ ಡ್ರೋನ್‌’ ತನ್ನತ್ತ ಸೆಳೆಯಿತು. ಅಂಗೈನಲ್ಲಿ ಕೂರುವಷ್ಟು ಸಣ್ಣದಾದ ಈ ಡ್ರೋನ್‌ ಕ್ಷಣದಲ್ಲಿ ಗಂಟೆಗೆ 60 ಮೈಲಿ ವೇಗದಲ್ಲಿ ನುಗ್ಗುವಷ್ಟು ಸಮರ್ಥವಾಗಿದೆ.

ಕ್ರೀಡಾ ಸ್ಪರ್ಧೆಗಳಲ್ಲಿ ಬಳಸಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಉತ್ತಮ ಗುಣಮಟ್ಟದ ಕ್ಯಾಮೆರ ಅಳವಡಿಸಿದ್ದು, ಎಚ್‌ಡಿ ವಿಡಿಯೊ ಪಡೆಯಬಹುದಾಗಿದೆ. ಬೆಲೆ: ₹25 ಸಾವಿರ

*ಸೆನೈಜರ್‌ ಎಚ್‌ಡಿ 820 ಹೆಡ್‌ಫೋನ್‌ 

ನಿತ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವುದರೊಂದಿಗೆ ನವೀನತೆಯನ್ನು ಅಳವಡಿಸಿ ಹೊಸ ರೂಪದಲ್ಲಿ ಗ್ರಾಹಕರ ಎದುರು ಬರುವುದು ಎಲ್ಲ ಎಲೆಕ್ಟ್ರಾನಿಕ್ಸ್‌ ಸಂಸ್ಥೆಗಳಿಗೆ ಸವಾಲು. ₹1 ಲಕ್ಷ ಬೆಲೆಯ ಅತ್ಯಾಧುನಿಕ ಸೆನೈಜರ್‌ ಹೆಡ್‌ಫೋನ್‌ನಲ್ಲಿಯೂ ಶಬ್ದ ಒಳಗಿಂದ ಹೊರಗೆ ಹಾಗೂ ಹೊರಗಿನ ಸದ್ದು ಒಳಗೆ ಸೋರಿಕೆಯಾಗುವುದನ್ನು ತಡೆಯಲು ಪೂರ್ಣ ಸಾಧ್ಯವಾಗಿರಲಿಲ್ಲ. ಇದೀಗ ಸೆನೈಜರ್‌ ಹೆಚ್‌ಡಿ ’820’ ಹೆಡ್‌ಫೋನ್‌ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿದೆ.

ಶಬ್ದ ಸೋರಿಕೆ ತಡೆಗಾಗಿ ಇದರಲ್ಲಿ ಒಳಬಾಗಿರುವ ’ಗೊರಿಲ್ಲ ಗ್ಲಾಸ್‌’ ತಟ್ಟೆಗಳನ್ನು ಬಳಸಲಾಗಿದೆ. ಬೆಲೆ: ₹1.5 ಲಕ್ಷ(2,400 ಡಾಲರ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry