ಗುಡಿ ಕೈಗಾರಿಕೆಗಳಿಗೆ ಶೇ 20 ಸಾಲ ಮೀಸಲಿಡಿ

7

ಗುಡಿ ಕೈಗಾರಿಕೆಗಳಿಗೆ ಶೇ 20 ಸಾಲ ಮೀಸಲಿಡಿ

Published:
Updated:

ಕೋಲಾರ: ‘ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಿಕೆ ಪ್ರಮಾಣದಲ್ಲಿ ಶೇ 20ರಷ್ಟು ಹಣವನ್ನು ಗುಡಿ ಕೈಗಾರಿಕೆಗಳಿಗೆ ಮೀಸಲಿಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಜವಳಿ ನೀತಿ 2013-18 ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶದ ಬಗ್ಗೆ ಸಾಮಾಜಿಕ ಕಾಳಜಿ, ಬದ್ಧತೆ, ಅಭಿವೃದ್ಧಿ ದೃಷ್ಟಿಯಿಂದ ವಾಣಿಜ್ಯ ಬ್ಯಾಂಕ್‌ಗಳು ಗುಡಿ ಕೈಗಾರಿಕೆಗಳಿಗೆ ಸಾಲ ನೀಡಬೇಕು ಎಂದು ತಿಳಿಸಿದರು.

ಈಗಾಗಲೇ ಸ್ತ್ರೀಶಕ್ತಿ ಸಂಘಗಳ ಮೂಲಕ ಅನೇಕರು ಸಾಲ ಪಡೆದು ಸದೃಢರಾಗಿದ್ದಾರೆ. ಭಾರತವು ಮಧ್ಯಮ ವರ್ಗದವರಿಂದ ಕೂಡಿದ ರಾಷ್ಟ್ರವಾಗಿದೆ. ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಿನ ಪ್ರಮಾಣದಲ್ಲಿದೆ. ಜಿಲ್ಲೆಯಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಿದ್ದು, ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಸಾಲ ನೀಡಬೇಕು. ಆಗ ಆ ಕೈಗಾರಿಕೆಗಳು ಮತ್ತಷ್ಟು ಅಭಿವೃದ್ಧಿ ಆಗುತ್ತವೆ ಎಂದರು.

ಯುವಕ ಯುವತಿಯರು ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಪಡೆಯಬೇಕೆಂಬ ಭಾವನೆ ಬಿಡಬೇಕು. ಶಿಕ್ಷಣವು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕ ಎಂಬುದನ್ನು ಅರಿತು, ಶಿಕ್ಷಣದ ಜತೆಗೆ ವೃತ್ತಿ ಕೌಶಲ ಬೆಳೆಸಿಕೊಳ್ಳಬೇಕು. ಮಹಿಳೆಯರು ಮದುವೆ ಬಳಿಕ ಅಬಲೆಯರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ಅವರಿಗೆ ರಾಜಕೀಯ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಶೇ 50ರಷ್ಟು ಮೀಸಲಾತಿ ಕಡ್ಡಾಯವಾಗಿ ಸಿಗಬೇಕು ಎಂದು ಸಲಹೆ ನೀಡಿದರು.

ಅಲೆದಾಡಿಸಬಾರದು: ‘ಕೈಮಗ್ಗದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಧಿಕಾರಿಗಳು ಅವರಿಗೆ ಸಾಲ ಕೊಡಲು ವಿನಾಕಾರಣ ಅಲೆದಾಡಿಸಬಾರದು. ಸಕಾಲಕ್ಕ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಮನವಿ ಮಾಡಿದರು.

ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ವಲಸೆ ತಡೆಯುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ವರ್ಗಕ್ಕೆ ಅವಕಾಶ ದೊರಕಿಸಿ ಕೊಡಬೇಕು. ಜತೆಗೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಕೌಶಲ ತರಬೇತಿ: ‘ಜಿಲ್ಲೆಯಲ್ಲಿ 1993ನೇ ಸಾಲಿನಲ್ಲಿ ಇಲಾಖೆಯ ಕಚೇರಿ ಆರಂಭವಾಗಿದ್ದು, ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರಸ್ತುತ 7 ಕೈಮಗ್ಗ ಕೇಂದ್ರಗಳು, 1 ವಿದ್ಯುತ್‌ ಚಾಲಿತ ಕೇಂದ್ರ, 81 ರೇಷ್ಮೆ ಕೈಮಗ್ಗ, 250 ವಿದ್ಯುತ್ ಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳಿವೆ. ನಿರುದ್ಯೋಗಿಗಳಿಗೆ ತರಬೇತಿ ಕೇಂದ್ರಗಳ ಮೂಲಕ ಕೌಶಲ ಆಧಾರಿತ ತರಬೇತಿ ನೀಡಲಾಗುತ್ತಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ

ವಿವರಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಇಲಾಖೆ ಜಂಟಿ ನಿರ್ದೇಶಕ ಸುರೇಶ್‌ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರವಿಚಂದ್ರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry