ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸಿದ್ಧತೆ

7

ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸಿದ್ಧತೆ

Published:
Updated:
ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸಿದ್ಧತೆ

ಕೋಲಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆದಿದ್ದು, ಫೆಬ್ರುವರಿ ವೇಳೆಗೆ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲಿವೆ.

ಜಿಲ್ಲಾ ಕೇಂದ್ರವಾದ ಕೋಲಾರ ನಗರದಲ್ಲಿ 2, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು ಹಾಗೂ ಬಂಗಾರಪೇಟೆಯಲ್ಲಿ ತಲಾ 1 ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಪ್ರತಿ ಕ್ಯಾಂಟೀನ್‌ ನಿರ್ಮಾಣಕ್ಕೆ ₹ 28 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ನಿರ್ಮಾಣದ ಗುತ್ತಿಗೆಯನ್ನು ತಮಿಳುನಾಡಿನ ‘ಕೆಫೊ’ ಪ್ರೈವೇಟ್‌ ಲಿಮಿಟೆಡ್‌ ಏಜೆನ್ಸಿಗೆ ವಹಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಏಜೆನ್ಸಿಯೇ ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡಿದೆ.

ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಅಥವಾ ಮಾರುಕಟ್ಟೆ ಪ್ರದೇಶದಲ್ಲಿ ಕ್ಯಾಂಟೀನ್‌ ನಿರ್ಮಿಸುವಂತೆ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅದರ ಅನ್ವಯ ಕೋಲಾರ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಹಳೆ ಬಸ್‌ ನಿಲ್ದಾಣದ ಬಳಿ, ಶ್ರೀನಿವಾಸಪುರದಲ್ಲಿ ತಾಲ್ಲೂಕು ಕಚೇರಿ ಬಳಿ, ಮುಳಬಾಗಿಲಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ, ಮಾಲೂರಿನಲ್ಲಿ ತಹಶೀಲ್ದಾರ್‌ ಕಟ್ಟಡದ ಹಿಂಭಾಗದಲ್ಲಿ ಹಾಗೂ ಬಂಗಾರಪೇಟೆಯಲ್ಲಿ ಹಳೆ ಮುನ್ಸಿಪಲ್‌ ಕಚೇರಿ ಬಳಿ ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.

ಆರು ಕಡೆಯೂ ಸುಮಾರು 4,200 ಚದರ ಅಡಿ ವಿಸ್ತೀರ್ಣದಲ್ಲಿ ಒಂದೇ ಮಾದರಿಯ ವಿನ್ಯಾಸದಲ್ಲಿ ಕ್ಯಾಂಟೀನ್‌ಗಳು ನಿರ್ಮಾಣವಾಗಲಿವೆ. ಕ್ಯಾಂಟೀನ್‌ಗಳ ನಿರ್ಮಾಣದ ನಂತರ ಅವುಗಳ ನಿರ್ವಹಣೆ, ಸಿಬ್ಬಂದಿ ನಿಯೋಜನೆ ಹಾಗೂ ಆಹಾರ ಪದಾರ್ಥಗಳ ಪೂರೈಕೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಜಿಲ್ಲಾಡಳಿತವು ಈಗಾಗಲೇ ಆಹಾರ ಪೂರೈಕೆಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ.

ಕಡಿಮೆ ದರ: ವಾರದ ಏಳು ದಿನವೂ ಈ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸಲಿವೆ. ಇಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ವಿತರಣೆ ಮಾಡಲಾಗುತ್ತದೆ. ಜನರಿಗೆ ಕಡಿಮೆ ದರದಲ್ಲಿ ಆಹಾರ ಲಭ್ಯವಾಗುವುದು ಇಲ್ಲಿನ ವಿಶೇಷ. ಸರ್ಕಾರವು ಬೆಳಗಿನ ಉಪಾಹಾರಕ್ಕೆ ₹ 5, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ₹ 10 ದರ ನಿಗದಿಪಡಿಸಿದೆ. ಜತೆಗೆ ವೇಳಾಪಟ್ಟಿ ಹಾಗೂ ಆಹಾರ ಪದಾರ್ಥಗಳ ಪಟ್ಟಿ ಸಿದ್ಧಪಡಿಸಿದೆ.

ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರದ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ನಂತರ ಇತರೆ ನಾಲ್ಕು ಕ್ಯಾಂಟೀನ್‌ಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುತ್ತದೆ. ಜಿಲ್ಲಾಡಳಿತದ ನಿರೀಕ್ಷೆಯಂತೆ ಕಾಲಮಿತಿಯೊಳಗೆ ಕ್ಯಾಂಟೀನ್‌ಗಳು ನಿರ್ಮಾಣವಾದರೆ ಜಿಲ್ಲೆಯ ಜನ ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟೀನ್‌ ಊಟದ ರುಚಿ ಸವಿಯಬಹುದು.

ಪಟ್ಟಿ..... ಕ್ಯಾಂಟೀನ್‌ ಆಹಾರದ ಮೆನು

ದಿನ ಬೆಳಗಿನ ಉಪಾಹಾರಕ್ಕೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ

ಸೋಮವಾರ: ಇಡ್ಲಿ ಅಥವಾ ಪುಳಿಯೋಗರೆ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ಟೊಮೆಟೊ ಬಾತ್‌ ಮತ್ತು ಮೊಸರನ್ನ

ಮಂಗಳವಾರ: ಇಡ್ಲಿ ಅಥವಾ ಖಾರ ಬಾತ್‌ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ಚಿತ್ರಾನ್ನ ಮತ್ತು ಮೊಸರನ್ನ

ಬುಧವಾರ: ಇಡ್ಲಿ ಅಥವಾ ಪೊಂಗಲ್‌ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ವಾಂಗಿಬಾತ್‌ ಮತ್ತು ಮೊಸರನ್ನ

ಗುರುವಾರ: ಇಡ್ಲಿ ಅಥವಾ ರವೆ ಕಿಚಡಿ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ಬಿಸಿ ಬೇಳೆ ಬಾತ್‌ ಮತ್ತು ಮೊಸರನ್ನ

ಶುಕ್ರವಾರ: ಇಡ್ಲಿ ಅಥವಾ ಚಿತ್ರಾನ್ನ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ಮೆಂತ್ಯಾ ಪಲಾವ್‌ ಮತ್ತು ಮೊಸರನ್ನ

ಶನಿವಾರ: ಇಡ್ಲಿ ಅಥವಾ ವಾಂಗಿ ಬಾತ್‌ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಅಥವಾ ಪುಳಿಯೋಗರೆ ಮತ್ತು ಮೊಸರನ್ನ

ಭಾನುವಾರ: ಇಡ್ಲಿ ಅಥವಾ ಖಾರ ಬಾತ್‌ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ

ಮತ್ತು ಕೇಸರಿ ಬಾತ್‌ ಅಥವಾ ಪಲಾವ್‌ ಮತ್ತು ಮೊಸರನ್ನ

ಇನ್ಫೋ ಗ್ರಾಫಿಕ್ಸ್‌ಗೆ.....

* 4,200 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ

* ₹ 28 ಲಕ್ಷ ಪ್ರತಿ ಕ್ಯಾಂಟೀನ್‌ನ ಅಂದಾಜು ವೆಚ್ಚ

* ₹ 5 ಬೆಳಗಿನ ಉಪಾಹಾರದ ದರ

* ₹ 10 ಮಧ್ಯಾಹ್ನ–ರಾತ್ರಿ ಊಟದ ದರ

* * 

ಜಿಲ್ಲಾಡಳಿತ ಜಾಗ ಹಸ್ತಾಂತರಿಸುತ್ತಿದ್ದಂತೆ ಕ್ಯಾಂಟೀನ್‌ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಫೆಬ್ರುವರಿ ಎರಡನೇ ವಾರದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಇದೆ

–ರೇಣುಕಾ, ಇಂದಿರಾ ಕ್ಯಾಂಟೀನ್‌ ಯೋಜನೆ ರಾಜ್ಯ ನೋಡಲ್‌ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry