ಮಗು ಮಾರಾಟ ಯತ್ನ: ತಾಯಿ ಗೋಳಾಟ

7

ಮಗು ಮಾರಾಟ ಯತ್ನ: ತಾಯಿ ಗೋಳಾಟ

Published:
Updated:

ಕೊಪ್ಪಳ: ಪತಿಯು ತನ್ನ 7 ತಿಂಗಳ ಗಂಡು ಮಗುವನ್ನು ₹ 1.50 ಲಕ್ಷಕ್ಕೆ ಮಾರಲು ಯತ್ನಿಸುತ್ತಿರುವ ಬಗ್ಗೆ ರುಕ್ಸಾನಾ ಎಂಬುವರು ಸೋಮವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಗೋಳಿಡುತ್ತಿರುವುದನ್ನು ಕಂಡು ಸಾರ್ವಜನಿಕರು ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಆಕೆಯ ನೆರವಿಗೆ ಮುಂದಾದರು. ಆಕೆಗೆ ಧೈರ್ಯ ತುಂಬಿ, ಸಂತೈಸಿದರು.

‘ನಾನು ‍ಪತಿ ಅಕ್ಬರ್‌ ಜೊತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಅಣ್ಣಿಗೇರಿ ಗ್ರಾಮದಲ್ಲಿ ವಾಸವಿದ್ದೇನೆ. ಆದರೆ ಪತಿಯು ಹುಬ್ಬಳ್ಳಿಯ ನಿವಾಸಿಗಳಿಗೆ ₹ 1.50 ಲಕ್ಷಕ್ಕೆ ಗಂಡು ಮಗುವನ್ನು ಮಾರಲು ಸಂಚು ರೂಪಿಸಿದರು. ಅದಕ್ಕೆ ನಾನು ವಿರೋಧಿಸಿದೆ. ಎಷ್ಟೇ ಬೇಡಿಕೊಂಡರೂ ಅವರು ಮಾರಲು ಸಿದ್ಧತೆ ನಡೆಸಿದರು. ಅವರ ವರ್ತನೆಗೆ ಬೇಸತ್ತು ಕೊಪ್ಪಳದ ಕೀರ್ತಿ ಕಾಲೊನಿಯ ನನ್ನ ತವರು ಮನೆಗೆ ಬಂದೆ’ ಎಂದು ರುಕ್ಸಾನಾ ತಿಳಿಸಿದರು.

‘ಆದರೆ ತವರು ಮನೆಯಲ್ಲೂ ಕೂಡ ತಾಯಿ ತಾಹಿರಾ ಮತ್ತು ತಂಗಿ ರುಬಿನಾ ಮನೆಯಿಂದ ಹೊರಹೋಗುವಂತೆ ಕಿರುಕುಳ ನೀಡಿದರು. ಐದೂವರೆ ವರ್ಷದ ನನ್ನ ಮೊದಲ ಮಗ ಆಯಾನ್‍ ಇಲ್ಲಿಯೇ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದು, ಆತನ ಶಿಕ್ಷಣಕ್ಕೆ ₹ 10 ಸಾವಿರ ನೀಡುವಂತೆ ಒತ್ತಾಯಿಸಿದರು. ಇದರಿಂದ ಬೇರೆ ದಾರಿಗಾಣದೇ ರೈಲು ನಿಲ್ದಾಣಕ್ಕೆ ಬಂದಿದ್ದೇನೆ’ ಎಂದು ಅವರು ವಿವರಿಸಿದರು. ದಿಕ್ಕೇ ತೋಚದಂತಾಗಿದೆ. ಏನು ಮಾಡಬೇಕೆಂದು ಸಂಕಷ್ಟ ತೋಡಿಕೊಂಡರು.

ರುಕ್ಸಾನಾ ಮತ್ತು ಇಬ್ಬರು ಮಕ್ಕಳ ಸ್ಥಿತಿಗತಿ ಬಗ್ಗೆ ಸಹಾಯವಾಣಿ ಸಿಬ್ಬಂದಿ ಮಾಹಿತಿ ಪಡೆದರು. ಅವರಿಗೆ ನೆರವಾಗಲು ಮುಂದಾದರು. ಆದರೆ ಕೆಲ ಹೊತ್ತಿನಲ್ಲೇ ರುಕ್ಸಾನಾ, ‘ಈಗ ನನ್ನ ಗಂಡನ  ವರ್ತನೆ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಪತಿಯ ಮನೆಗೆ ಹೋಗುತ್ತೇನೆ’ ಎಂದು ಮುಚ್ಚಳಿಕೆ ಬರೆದುಕೊಟ್ಟು ಮಕ್ಕಳೊಂದಿಗೆ ಅಣ್ಣಿಗೇರಿಗೆ ಪ್ರಯಾಣ ಬೆಳೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry