ನನಸಾಯಿತು ಕುಕನೂರು ತಾಲ್ಲೂಕು

7

ನನಸಾಯಿತು ಕುಕನೂರು ತಾಲ್ಲೂಕು

Published:
Updated:
ನನಸಾಯಿತು ಕುಕನೂರು ತಾಲ್ಲೂಕು

ಕುಕನೂರು: ಬಹುದಿನಗಳಿಂದ ಬೇಡಿಕೆಯಾಗಿದ್ದ ಕುಕನೂರು ತಾಲ್ಲೂಕಾಗುವ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಹೊಸ ತಾಲ್ಲೂಕಾಗಿ ಕಾರ್ಯನಿರ್ವಹಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಸರ್ಕಾರಿ ಕಲ್ಯಾಣ ಮಂಟಪವನ್ನು ತಾಲ್ಲೂಕು ಕೇಂದ್ರದ ಕಚೇರಿಗಳಿಗಾಗಿ ಗುರುತಿಸಲಾಗಿದೆ. ಅದರ ನವೀಕರಣ ನಡೆದಿದೆ.

1972ರ ತಾಲ್ಲೂಕು ರಚನೆ ಪಟ್ಟಿಯಲ್ಲಿ ಕುಕನೂರು ಇರಲಿಲ್ಲ. ಆದ್ದರಿಂದ 2001ರಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷ ರಾಮಣ್ಣ ಭಜಂತ್ರಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತು. ಸರ್ಕಾರ ನೇಮಿಸಿದ್ದ ಎಂ.ವಾಸುದೇವರಾವ್, ಟಿ.ಎಂ.ಹುಂಡೇಕಾರ, ಪಿ.ಸಿ. ಗದ್ದಿಗೌಡರ ಸಮಿತಿ ಮತ್ತು ಎಂ.ಬಿ. ಪ್ರಕಾಶ ಸಮಿತಿಗೆ ತಾಲ್ಲೂಕು ಕೇಂದ್ರಕ್ಕಾಗಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಇದು ತಾಲ್ಲೂಕು ರಚನೆಗಾಗಿ ಆಗ್ರಹಿಸಿದ ಆರಂಭದ ದಿನಗಳು.

ಎಂ.ಬಿ.ಪ್ರಕಾಶ ಸಮಿತಿ ಹೊರತುಪಡಿಸಿ ಉಳಿದ ಮೂರು ಸಮಿತಿಗಳು ಕುಕನೂರನ್ನು ತಾಲ್ಲೂಕು ಕೇಂದ್ರಕ್ಕೆ ಶಿಫಾರಸು ಮಾಡಿದ್ದವು. ಎಂ.ಬಿ. ಪ್ರಕಾಶ ಸಮಿತಿ ವರದಿ ವಿರುದ್ಧ ಭಾರಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಯಿತು. 42 ದಿನಗಳ ನಿರಂತರ ಧರಣಿ ನಡೆಸಿ, ಸರ್ಕಾರದ ಗಮನ ಸೆಳೆಯಲಾಯಿತು.

ಕಾಕತಾಳೀಯ ಘಟನೆ: ತಾಲ್ಲೂಕು ರಚನೆಗೆ ಆಗ್ರಹಿಸಿ 42 ದಿನ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಬಿಜೆಪಿ ನಾಯಕ  ಜಗದೀಶ ಶೆಟ್ಟರ್‌ ಬಂದು ಕುಕನೂರು ತಾಲ್ಲೂಕು ರಚನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿಸಿದ 43 ತಾಲ್ಲೂಕುಗಳ ಪೈಕಿ ಕುಕನೂರು ಕೂಡಾ ಒಂದಾಯಿತು. 

ಧರ್ಮ, ಉದ್ಯೋಗ, ಶಿಕ್ಷಣ, ಸಾಹಿತ್ಯ, ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಹೊಂದಿರುವ ಕುಕನೂರನ್ನು ತಾಲ್ಲೂಕು ಕೇಂದ್ರವೆಂದು ಮಾಡಲೇಬೇಕು ಎಂಬ ಛಲದೊಂದಿಗೆ ವಿವಿಧ ಸಂಘಟನೆಗಳ ಯುವಕರು ವಿವಿಧ ಗ್ರಾಮಸ್ಥರ ಸಭೆ ನಡೆಸಿದರು. 2001ರ ಆಗಸ್ಟ್‌ 13 ರಂದು ’ಕುಕನೂರು ತಾಲ್ಲೂಕು ರಚನಾ ಹೋರಾಟ ಸಮಿತಿ’ ಅಸ್ತಿತ್ವಕ್ಕೆ ಬಂತು.  ನೂತನ ಸಮಿತಿ ರಚನೆ ಹಿಂದೆ ರಾಮಣ್ಣ ಭಜಂತ್ರಿ, ಶರಣಪ್ಪ ಬಣ್ಣದಭಾವಿ, ರವಿ ಜಕ್ಕಾ, ರವಿತೇಜ ಅಬ್ಬಿಗೇರಿ, ರಫಿ ಹಿರೇಹಾಳ, ದಿ.ಗುರುಲಿಂಗಯ್ಯ ಮತ್ತು ಇತರ ಸ್ನೇಹಿತರು ಶ್ರಮಿಸಿದರು. ನಿರಂತರ ಹೋರಾಟದ ಬಳಿಕ ಕುಕನೂರಿಗೆ ತಾಲ್ಲೂಕು ಮುಕುಟ ಜನವರಿ 26ರಂದು ಒಲಿಯಲಿದೆ.

ಕುಕನೂರು ತಾಲ್ಲೂಕು ಎಂದು ಘೋಷಣೆಯಾಗುತ್ತಿರುವುದು ಎರಡನೇ ಬಾರಿ. ಒಮ್ಮೆ ಬಿಜೆಪಿ ಸರ್ಕಾರ ಘೋಷಿಸಿದರೆ, ಮಗದೊಮ್ಮೆ ಕಾಂಗ್ರೆಸ್‌ ‌‌ಸರ್ಕಾರ ಘೋಷಿಸಿತು. ಕಲ್ಲೂರು ಮತ್ತು ಮ್ಯಾದನೇರಿ ಗ್ರಾಮಗಳನ್ನು ಕುಕನೂರು ತಾಲ್ಲೂಕಿಗೆ ಸೇರಿಸಬಾರದು ಎಂಬ ಧ್ವನಿಯೂ ಎದ್ದಿದೆ.

ಕುಕನೂರು ಹೋಬಳಿಯ 8 ಪಂಚಾಯಿತಿ ವ್ಯಾಪ್ತಿಯ 30 ಗ್ರಾಮಗಳು ಮತ್ತು ಮಂಗಳೂರು ಹೋಬಳಿಯ 9 ಪಂಚಾಯಿತಿ ವ್ಯಾಪ್ತಿಯ 28 ಗ್ರಾಮಗಳು ಸೇರಿದಂತೆ ಒಟ್ಟು 58 ಹಳ್ಳಿಗಳು ಗ್ರಾಮಗಳು ಹೊಸ ತಾಲ್ಲೂಕಿಗೆ ಸೇರ್ಪಡೆಯಾಗಲಿವೆ. ಜನಸಂಖ್ಯೆ 1,24,685ರಷ್ಟು ಇದ್ದು, ಭೌಗೋಳಿಕ ವಿಸ್ತೀರ್ಣ 75 ಕಿ.ಮೀ ಹೊಂದಿದೆ.

ತಾಲ್ಲೂಕು ಕೇಂದ್ರಕ್ಕಾಗಿ ಎರಡು ದಶಕಗಳಿಂದ ಕೂಗು, ಒತ್ತಾಯ ಇದೆ. ಮನವಿ ಸಲ್ಲಿಕೆ, ಬಂದ್, ಪ್ರತಿಭಟನಾ ಮೆರವಣಿಗೆ, ನಿರಂತರ ಧರಣಿ, ರಾಜಧಾನಿಗೆ ನಿಯೋಗ ಸೇರಿದಂತೆ ಅನೇಕ ಮಜಲುಗಳಲ್ಲಿ ನಿರಂತರವಾದ ಹೋರಾಟ ನಡೆದಿತ್ತು. ಜನರ ಹೋರಾಟದ ಫಲ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಪರಿಣಾಮವಾಗಿ ಅಂತೂ ತಾಲ್ಲೂಕು ಘೋಷಣೆಯಾಗಿದೆ. ಈಗ ಘೋಷಣೆಯಾಗಿರುವ ಕುಕನೂರು ತಾಲ್ಲೂಕು ಕೇಂದ್ರಕ್ಕೆ, ಸರ್ಕಾರ ಅನುದಾನ ಮೀಸಲಿಡದೇ, ಹಂತ ಹಂತವಾಗಿ ಆರ್ಥಿಕ ಇಲಾಖೆಯ ಸಹಮತದೊಂದಿಗೆ

ಅನುದಾನ ಒದಗಿಸಿ ತಾಲ್ಲೂಕು ಕಚೇರಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಿದೆ (2017 ಸೆ. 6ರ ಆದೇಶ). ಶೀಘ್ರವೇ ಪೂರ್ಣ ಪ್ರಮಾಣದ ತಾಲ್ಲೂಕು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.

ತಾಲ್ಲೂಕು ರಚನೆಗಾಗಿ ಜನಪ್ರತಿನಿಧಿಗಳ ಪ್ರಯತ್ನ, ಹೋರಾಟ ಮುಂತಾದವುಗಳ ಬಗ್ಗೆ ಆರೋಪ ಪ್ರತ್ಯಾರೋಪ ಮಾಡದೆ, ಅಭಿವೃದ್ಧಿಯ ಮಂತ್ರ ಪಠಿಸಿದರೆ ಕುಕನೂರು ಅತಿ ವೇಗದಲ್ಲಿ ಅಭಿವೃದ್ಧಿ ಹೊಂದಿದ ತಾಲ್ಲೂಕು ಆಗುವುದರಲ್ಲಿ ಅನುಮಾನವಿಲ್ಲ ಎಂದು ಜನರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಾಹಿತಿ, ಕಲಾವಿದರ ತವರೂರು

ದೇವಾಲಯಗಳ ಚರ್ಕವರ್ತಿ ಇಟಗಿಯ ಮಹದೇವ ದೇವಾಲಯ ನಾಡಿನಲ್ಲೇ ವಿಶೇಷವಾದ ತಾಣ ಎಂಬ ಖ್ಯಾತಿ ಹೊಂದಿದೆ. ಕವಿಶ್ರೇಷ್ಠ ಸಿದ್ದಯ್ಯ ಪುರಾಣಿಕ ಅವರಂತಹ ಸಾಹಿತಿಗಳ ತವರೂರು, ನಾಡಿನ ರಂಗ ಕಲಾವಿದೆ ರೆಹಮಾನವ್ವ ಕಲ್ಮನಿ ಅವರ ಊರು. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ಹೊಸದಾದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಜವಾಹರ ನವೋದಯ ವಿದ್ಯಾಲಯ, ಕುಕನೂರಿನ ಮಹಾಮಾಯೆ ದೇವಾಲಯ ಇದೆ.

ಸುತ್ತಮುತ್ತಲಿನ 55ಕ್ಕೂ ಹೆಚ್ಚು ಗ್ರಾಮಗಳ ವ್ಯಾಪಾರ, ವಹಿವಾಟಿಗೆ ಕೇಂದ್ರಸ್ಥಾನವಾಗಿದೆ. ರಾಷ್ಟ್ರೀಕೃತ, ಸಹಕಾರಿ, ಗ್ರಾಮೀಣ ಬ್ಯಾಂಕ್, ರೈತರ ಸೇವಾ ಸಹಕಾರಿ ಬ್ಯಾಂಕ್, 20ಕ್ಕೂ ಹೆಚ್ಚು ಎಣ್ಣೆ ಮಿಲ್‌, ಶಾಲಾ, ಕಾಲೇಜುಗಳು, ಜೆಸ್ಕಾಂ ಉಪ ವಿಭಾಗ ಕಚೇರಿ ಇಲ್ಲಿದೆ.

ಮಂಜುನಾಥ ಎಸ್‌. ಅಂಗಡಿ

ಕುಕನೂರು ತಾಲ್ಲೂಕು ಕೇಂದ್ರದ ಕಚೇರಿಗಳು 26ಕ್ಕೆ ಪ್ರಾರಂಭವಾಗಲಿವೆ. ತಾಲ್ಲೂಕ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಸಿದ್ದನಿದ್ದೇನೆ.

ಬಸವರಾಜ ರಾಯರಡ್ಡಿ

ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry