ಜಿದ್ದಿಗೆ ಬಿದ್ದು ಕಾರು ಕಲಿತೆ

7

ಜಿದ್ದಿಗೆ ಬಿದ್ದು ಕಾರು ಕಲಿತೆ

Published:
Updated:
ಜಿದ್ದಿಗೆ ಬಿದ್ದು ಕಾರು ಕಲಿತೆ

ನಮ್ಮೂರು ಉಡುಪಿ. ನಮ್ಮನೆಯಲ್ಲಿ ಎಲ್ಲರೂ ಬೇಗ ಡ್ರೈವಿಂಗ್‌ ಕಲಿತಿದ್ದರು. ಹಾಗಾಗಿ ನನಗೂ ಕಲಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ನಾನು ಮೊದಲನೇ ಬಾರಿ ಕಾರಿನ ಡ್ರೈವರ್‌ ಸೀಟಿನಲ್ಲಿ ಕುಳಿತಿದ್ದು 11ನೇ ವಯಸ್ಸಿನಲ್ಲಿ. ಅದಕ್ಕೂ ಮೊದಲೇ ಟ್ರ್ಯಾಕ್ಟರ್‌ ಸ್ಟೀರಿಂಗ್‌ ಹಿಡಿಯುವುದನ್ನು ಕಲಿತಿದ್ದೆ.

ನಮ್ಮ ಹೊಲದ ಉಳುಮೆ ಮಾಡುವಾಗ ನನಗೆ ಸಂಭ್ರಮ. ಆಗ ನಾನಿನ್ನೂ ಮೂರನೇ ಕ್ಲಾಸ್‌ ವಿದ್ಯಾರ್ಥಿ. ಟ್ರ್ಯಾಕ್ಟರ್‌ ಓಡಿಸುತ್ತಿದ್ದ ಡ್ರೈವರ್‌ ತೊಡೆ ಮೇಲೆ ಕೂತು ಸ್ಟೀರಿಂಗ್ ಹಿಡಿದು, ಗೇರ್‌ ಹಾಕುತ್ತಿದ್ದೆ. ಆಗಲೇ ನನಗೆ ವಾಹನಗಳ ಮೇಲೆ ತುಂಬಾ ಕ್ರೇಜ್‌ ಶುರುವಾಗಿತ್ತು.

ಅಣ್ಣ ಏಳನೇ ತರಗತಿಗೇ ಡ್ರೈವಿಂಗ್‌ ಕಲಿತುಬಿಟ್ಟಿದ್ದ. ಅವನಿಗಿಂತ ಬೇಗ ನಾನೂ ಕಲಿಯಬೇಕು ಎಂಬ ಆತುರ ನನಗೆ. ಆರನೇ ತರಗತಿ ಓದುತ್ತಿದ್ದಾಗಲೇ ಕಾರು ಚಾಲನೆ ಕಲಿಯಲು ಶುರು ಮಾಡಿದೆ. ನನ್ನಕ್ಕ ಬೆಳಿಗ್ಗೆ 8ಕ್ಕೆ ಶಾಲೆಗೆ ಹೋಗಬೇಕಿತ್ತು. ನನಗೆ ಶಾಲೆ ಶುರುವಾಗುವುದು 10ಕ್ಕೆ. ಹಾಗಾಗಿ ಅವಳನ್ನು ಶಾಲೆಗೆ ಬಿಡಲು ಹೋಗುವಾಗ ನಾನೂ ಹೋಗುತ್ತಿದ್ದೆ. ಅವಳನ್ನು ಬಿಟ್ಟುಬಂದ ನಂತರ ಮನೆಗೆ ಬಂದು ತಯಾರಾಗಿ ನಾನು ಶಾಲೆಗೆ ಹೋಗುತ್ತಿದ್ದೆ.

ಆಗೆಲ್ಲ ಡ್ರೈವರ್‌ ಲಿಂಗಪ್ಪಣ್ಣನ ಸೀಟಿನಲ್ಲಿ ನಾನು ಕೂತಿರುತ್ತಿದ್ದೆ. ಅವರು ಪಕ್ಕದಲ್ಲಿ ಕೂತಿರುತ್ತಿದ್ದರು. ಡ್ರೈವಿಂಗ್‌ ಕಲೆಯಲ್ಲಿ ಪಕ್ವತೆ ಗಳಿಸುವುದು ಇದರಿಂದ ಸುಲಭವಾಯಿತು. ಉಡುಪಿಯ ರಸ್ತೆಯಲ್ಲಿ ಪೊಲೀಸರು ಹೆಚ್ಚಿರುವುದಿಲ್ಲ. ಅಲ್ಲದೇ ರಸ್ತೆಗಳು ಚೆನ್ನಾಗಿವೆ. ಹೆಚ್ಚು ವಾಹನಗಳ ಓಡಾಟ ಇರುವುದಿಲ್ಲ. ಆದ್ದರಿಂದ ಮೊದಲ ಬಾರಿ ಜೀಪನ್ನು ರಸ್ತೆಗೆ ತಂದಾಗ ಭಯವೇ ಆಗಲಿಲ್ಲ.

ಎಂಟನೇ ತರಗತಿಯಲ್ಲಿದ್ದಾಗ ಅಕ್ಕನನ್ನು ನಾನೇ ಶಾಲೆಗೆ ಬಿಟ್ಟು ಬರುತ್ತಿದ್ದೆ. ಹದಿನೆಂಟು ವರ್ಷದವರೆಗೂ ಮನೆಯವರು ಹೊರಗೆ ಕಾರು ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿರಲಿಲ್ಲ. ಕೆಲವೊಮ್ಮೆ ಕದ್ದು ಮುಚ್ಚಿ ತೆಗೆದುಕೊಂಡು ಹೋಗುತ್ತಿದ್ದೆ.

ಒಮ್ಮೆ ತಂದೆಯ ಅಂಬಾಸೆಡರ್‌ ಕಾರನ್ನು ಕದ್ದು ತೆಗೆದು ಕೊಂಡು ಹೋಗಿದ್ದಾಗ ಫಜೀತಿಗೆ ಸಿಕ್ಕಿಕೊಂಡಿದ್ದೆ. ಆಗ ನಾನು ಮೊದಲನೇ ಪಿಯುಸಿ. ಸ್ನೇಹಿತರೆಲ್ಲ ಸೇರಿ ಸುತ್ತಾಡಿ ಬರುವ ಯೋಜನೆ ಹಾಕಿಕೊಂಡಿದ್ದೆವು. ಮನೆಯಲ್ಲಿ ರಾತ್ರಿ ಎಲ್ಲರೂ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಕಾರು ಓಡಿಸಿಕೊಂಡು ಹೊರಟಿದ್ದೆ.

ನಮ್ಮನೆಯಿಂದ ಮಣಿಪಾಲ್‌ಗೆ ಹೋಗಬೇಕಾದರೆ ಘಾಟ್‌ ಹತ್ತಿದ ಹಾಗೆಯೇ ರಸ್ತೆ ಏರಬೇಕು. ಅದಿರುವುದು ಒಂದೂವರೆ ಕಿ.ಮೀ. ನಮ್ಮ ಗ್ರಹಚಾರಕ್ಕೆ ಅದೇ ರಸ್ತೆಯ ಮಧ್ಯದಲ್ಲಿ ಕಾರು ನಿಂತು ಬಿಟ್ಟಿತು. ಫಸ್ಟ್‌ ಗೇರ್‌, ಸೆಕೆಂಡ್‌ ಗೇರ್‌ ಯಾವುದೂ ಕೆಲಸ ಮಾಡುತ್ತಿರಲಿಲ್ಲ. ರಿವರ್ಸ್‌ ಗೇರ್‌ ಮಾತ್ರವೇ ಹಾಕಲು ಬರುತ್ತಿತ್ತು. ಮನೆಯಲ್ಲಿ ಬೇರೆ ಹೇಳದೇ ಬಂದುಬಿಟ್ಟಿದ್ದೆ. ಅವರು ಏಳುವ ಮುಂಚೆಯೇ ಕಾರನ್ನು ಅದರ ಜಾಗದಲ್ಲಿ ಪಾರ್ಕ್‌ ಮಾಡಬೇಕಿತ್ತು. ಬೇರೆ ವಿಧಿಯಿಲ್ಲದೆ ರಿವರ್ಸ್‌ ಗೇರ್‌ ಹಾಕಿಕೊಂಡು ನಾಲ್ಕು ಕಿ.ಮೀ. ಗಾಡಿಯನ್ನು ಹಿಮ್ಮುಖವಾಗಿಯೇ ಓಡಿಸಿಕೊಂಡು ಮನೆಗೆ ಬಂದೆ.

ಕಾರನ್ನು ಪಾರ್ಕ್‌ ಮಾಡಿ, ‘ಕೀ’ಯನ್ನು ಮೊದಲಿದ್ದ ಸ್ಥಳದಲ್ಲಿಯೇ ಇಟ್ಟೆ. ಮನೆಯವರಿಗೆ ವಿಷಯ ತಿಳಿಯಲೇ ಇಲ್ಲ. ಬೆಳಿಗ್ಗೆ ಸ್ನೇಹಿತರು ಬಸ್‌ನಲ್ಲಿ ಅವರವರ ಮನೆಗೆ ಹೋದರು. ಹೀಗೆ ಕಾರಿಗಾಗಿ ಸಾಕಷ್ಟು ತರ್ಲೆ ಕೆಲಸವನ್ನು ಮಾಡಿದ್ದೇನೆ.

ಮೊದಲೆಲ್ಲ ತುಂಬಾ ರ‍್ಯಾಶ್‌ ಡ್ರೈವ್‌ ಮಾಡುತ್ತಿದ್ದೆ. ‘ನಮ್ಮ ಏರಿಯಾದಲ್ಲಿ ಒಮ್ಮೆ’ ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ಬರುತ್ತಿದ್ದಾಗ ಅಪಘಾತ ಆಗಿ ಕೈಗೆ ತುಂಬಾ ಪೆಟ್ಟು ಬಿದ್ದಿತ್ತು. ಹಾಗಾಗಿ ಈಗ ತುಂಬಾ ಹುಷಾರಾಗಿ ಡ್ರೈವ್‌ ಮಾಡುತ್ತೇನೆ. ನಿಯಮಗಳ ಪಾಲನೆ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ.

ಮೊದಲೆಲ್ಲ ನಾನು ಬೈಕ್‌ ಓಡಿಸುತ್ತಿದ್ದುದು ಕಡಿಮೆ. ಆದರೆ ಈಗ ಅದರ ಕ್ರೇಜ್‌ ಶುರುವಾಗಿದೆ. ಹಾಗೆಂದು ಕಾರಿನ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ಒತ್ತಡ ಎನಿಸಿದಾಗಲೆಲ್ಲ ಡ್ರೈವ್‌ ಮಾಡಲು ಹೋಗುತ್ತೇನೆ. ನನ್ನ ಒತ್ತಡಕ್ಕೆ ಕಾರೇ ಮದ್ದು. ಆದರೆ ಬೆಂಗಳೂರಿನಲ್ಲಿ ವಾಹನ ಓಡಿಸೋದೂ ಬಹಳ ಒತ್ತಡ ಅನ್ನಿಸುತ್ತದೆ. ಹಾಗಾಗಿ ಇಲ್ಲಿ ಬೆಳಿಗ್ಗೆ ಕಾರು ಓಡಿಸುವುದು ಕಡಿಮೆ. ವಾಹನಗಳ ಜಂಜಾಟ ಕಡಿಮೆ ಇದ್ದು, ಪ್ರಶಾಂತವಾದ ವಾತಾವರಣದಲ್ಲಿ ಡ್ರೈವ್‌ ಮಾಡುವುದೆಂದರೆ ನನಗೆ ಇಷ್ಟ.

ನನಗೆ ಕಾರಿನಲ್ಲಿ ಲಾಂಗ್‌ ಡ್ರೈವ್‌ ಹೋಗುವುದೆಂದರೆ ತುಂಬಾ ಇಷ್ಟ. ಉಡುಪಿಗೆ ಹೋಗುವಾಗ ನಾನೇ ಡ್ರೈವ್‌ ಮಾಡುತ್ತೇನೆ. ಈಗೀಗ ಕೊಡಗಿಗೂ ಹೋಗುತ್ತಿರುತ್ತೇನೆ. ಬೆಂಗಳೂರಿನಲ್ಲಿ ಏರ್‌ಪೋರ್ಟ್‌, ನೈಸ್‌ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಕಾರು ಓಡಿಸುವ ಮಜವೇ ಬೇರೆ.

ನನ್ನ ಬಳಿ ಆಡಿ ಕಾರಿದೆ. ಅವಕಾಶ ಸಿಕ್ಕರೆ ಹತ್ತು ಕಾರುಗಳನ್ನು ಕೊಳ್ಳುವ ಹಂಬಲ. ಸದ್ಯಕ್ಕೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಹೀಗಾಗಿ ಇರುವ ಒಂದೇ ಕಾರಿಗೆ ತೃಪ್ತಭಾವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry